ಕೆಎಸ್‌ನ ಕಾವ್ಯದ ಹಿಂದೆ ಪತ್ನಿ ಪಾತ್ರ ದೊಡ್ಡದು: ಕಿಕ್ಕೇರಿ ಕೃಷ್ಣಮೂರ್ತಿ

| Published : Aug 24 2025, 02:00 AM IST

ಸಾರಾಂಶ

ಇಡೀ ವಿಶ್ವದಲ್ಲಿಯೇ ಕವಿ ಪತ್ನಿಯ ಹೆಸರಿನಲ್ಲಿ ಬದುಕಿರುವ ಕವಿ ಪತ್ನಿಗೆ ಪ್ರಶಸ್ತಿ ನೀಡುವ ಕೆಲಸವಾಗಿಲ್ಲ. ಇಂತಹ ಕೆಲಸ ಸರ್ಕಾರಿ ಸ್ವಾಮ್ಯದ ಕೆಎಸ್‌ನ ಟ್ರಸ್ಟ್ ಮಾಡುತ್ತಿದೆ. ಪ್ರತಿ ವ್ಯಕ್ತಿಗಳ ಕೀರ್ತಿ ಹಿಂದೆ ಪತ್ನಿ ಪರಿಶ್ರಮವಿದೆ. ಆದರೆ, ಇವರನ್ನು ಮರೆಯುವುದರಿಂದ ಸಮಾಜಕ್ಕೆ ಬಲುದೊಡ್ಡ ನಷ್ಟ. ಹೆಣ್ಣು ಇಡೀ ಜಗದ ಕಣ್ಣು. ಈಕೆಯನ್ನು ಗುರುತಿಸಿದಾಗ ಮಾತ್ರ ಸಾಧಕರ ಸಾಧನೆಗೆ ನಿಜವಾದಅರ್ಥ ಸಿಗಲಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕಾವ್ಯ ಬ್ರಹ್ಮ ವರಕವಿ ಕೆ.ಎಸ್‌.ನರಸಿಂಹಸ್ವಾಮಿಯವರ ಪ್ರತಿಕಾವ್ಯದ ಹಿಂದೆ ಪತ್ನಿ ವೆಂಕಮ್ಮರ ಸಹಕಾರ ಇದೆ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ ಡಾ.ಕಿಕ್ಕೇರಿಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಸರ್ಕಾರಿ ಸ್ವಾಮ್ಯದ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನಿಂದ ಸ್ಪಂದನಾ ಫೌಂಡೇಷನ್, ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಹಮ್ಮಿಕೊಂಡಿದ್ದ ಒಲವಿನ ಕವಿ ಕೆ.ಎಸ್.ನ ಪತ್ನಿ ವೆಂಕಮ್ಮ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಡೀ ವಿಶ್ವದಲ್ಲಿಯೇ ಕವಿ ಪತ್ನಿಯ ಹೆಸರಿನಲ್ಲಿ ಬದುಕಿರುವ ಕವಿ ಪತ್ನಿಗೆ ಪ್ರಶಸ್ತಿ ನೀಡುವ ಕೆಲಸವಾಗಿಲ್ಲ. ಇಂತಹ ಕೆಲಸ ಸರ್ಕಾರಿ ಸ್ವಾಮ್ಯದ ಕೆಎಸ್‌ನ ಟ್ರಸ್ಟ್ ಮಾಡುತ್ತಿದೆ. ಪ್ರತಿ ವ್ಯಕ್ತಿಗಳ ಕೀರ್ತಿ ಹಿಂದೆ ಪತ್ನಿ ಪರಿಶ್ರಮವಿದೆ. ಆದರೆ, ಇವರನ್ನು ಮರೆಯುವುದರಿಂದ ಸಮಾಜಕ್ಕೆ ಬಲುದೊಡ್ಡ ನಷ್ಟ. ಹೆಣ್ಣು ಇಡೀ ಜಗದ ಕಣ್ಣು. ಈಕೆಯನ್ನು ಗುರುತಿಸಿದಾಗ ಮಾತ್ರ ಸಾಧಕರ ಸಾಧನೆಗೆ ನಿಜವಾದಅರ್ಥ ಸಿಗಲಿದೆ ಎಂದರು.

ಟ್ರಸ್ಟ್‌ನಿಂದ ಈಗಾಗಲೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಪತ್ನಿ ಸತ್ಯಭಾಮಾ, ದಲಿತ ಕವಿ ಡಾ.ಸಿದ್ದಲಿಂಗಯ್ಯ ಪತ್ನಿ ರಮಾಕುಮಾರಿ, ಕವಿ ಬಿ.ಆರ್.ಲಕ್ಷ್ಮಣರಾವ್‌ ಅವರ ಪತ್ನಿಗಿರಿಜಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪತ್ನಿ ಪ್ರೇಮಲೀಲಾ, ಕವಿ ಸತ್ಯಾನಂದ ಪಾತ್ರೋಟ ಪತ್ನಿ ಸಮತಾಗೆ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಸ್ಪಂದನಾ ಟ್ರಸ್ಟ್‌ ಅಧ್ಯಕ್ಷ ತ್ರಿವೇಣಿ ಮಾತನಾಡಿ, ಯುವಕರಲ್ಲಿ ಕನ್ನಡ ಭಾಷೆ, ಕನ್ನಡ ಭಾಷೆ ಪಾಂಡಿತ್ಯ, ಸಾಹಿತ್ಯಿಕ ಮನಸ್ಸು ಬೆಳೆಯಲು ಕೆಎಸ್‌ನ ಕಾವ್ಯ ಸ್ಪೂರ್ತಿ. ಇವರ ಪ್ರತಿ ಕವಿತೆಯಲ್ಲಿ ಕಿಕ್ಕೇರಿಯ ಪರಿಸರ, ಕವಿಗಳ ಬದುಕಿನ ಕಥಾಸಾಗರವೇ ಇದೆ ಎಂದು ಮೆಲಕು ಹಾಕಿದರು.

ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮಕ್ಕಳು ಗಾಯಕರೊಂದಿಗೆ ಕೆಎಸ್‌ನ ಅವರ ಬಳೆಗಾರ ಚನ್ನಯ್ಯ, ರಾಯರು ಬಂದರು ಮಾವನ ಮನೆಗೆ, ನಗುವಾಗ ನಕ್ಕು ಅಳುವಾಗ ಅತ್ತು, ಚಳಿಗಾಲ ಬಂದಾಗ ಛಳಿ ಛಳಿ ಎಂದರು. ಮತ್ತಿತರ ಗೀತೆಗಳನ್ನು ಹಾಡಿ ಖುಷಿಪಟ್ಟರು. ಈ ವೇಳೆ ಸ್ಪಂದನಾ ಟ್ರಸ್ಟಿ ತ್ರಿವೇಣಿ, ಸಮಾಜ ಸೇವಾಕರ್ತ ಮಹೇಂದ್ರ, ಮಂಜುಳಾ, ಕವಿತಾ ಇದ್ದರು.

ಕೃಷಿ ಪಂಡಿತ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮದ್ದೂರು:

2025- 26ನೇ ಸಾಲಿನ ಕೃಷಿ ಪಂಡಿತ ಹಾಗೂ ಆತ್ಮ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ ತಿಳಿಸಿದ್ದಾರೆ. ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯುವ ಕೃಷಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ಹಸಿರು ಮನೆ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು ಕುರಿ ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ರೈತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಯ 10 ರೈತರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ತಲಾ 25,000 ರು., ತಾಲೂಕಿನ 5 ರೈತರಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ 10,000 ರು. ನಗದು ಬಹುಮಾನದೊಂದಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಲಾಗುವುದು. ಆಸಕ್ತ ರೈತರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 15 ರಂದು ಸಂಜೆ 5:00 ಒಳಗೆ ತಲುಪಿಸಬೇಕು ಎಂದು ಹೇಳಿದ್ದಾರೆ.