ನಾಳೆಯಿಂದ ನರಸಿಂಹರಾಜಪುರದಲ್ಲಿ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ

| Published : May 19 2025, 12:11 AM IST

ನಾಳೆಯಿಂದ ನರಸಿಂಹರಾಜಪುರದಲ್ಲಿ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಮೇ 20 ರಿಂದ 22 ರ ವರೆಗೆ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾಹಿತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಮೇ 20 ರಿಂದ 22 ರ ವರೆಗೆ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ತಿಳಿಸಿದರು.

ಶನಿವಾರ ಪತ್ರಿಕಾ ಭವನದಲ್ಲಿ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಪೌರಾಣಿಕ ಹಿನ್ನೆಲೆಯುಳ್ಳ ಕೋಟೆ ಮಾರಿಕಾಂಬ ಜಾತ್ರೆ ಕೆಳದಿ ಅರಸರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಜಾತ್ರೆ ವಿಶೇಷ ಎಂದರೆ ಯಾವುದೇ ಜಾತಿ, ಧರ್ಮ, ಬಡವರು,ಶ್ರೀಮಂತರು ಎಂಬ ಬೇದ ಭಾವವಿಲ್ಲದೆ ಎಲ್ಲರೂ ಒಂದೇ ಮನಸ್ಸಿನಿಂದ ಭಾಗವಹಿಸಿ ನಮ್ಮೂರ ನಾಡ ಹಬ್ಬವಾಗಿ ಆಚರಿಸುತ್ತಿದ್ದೇವೆ. ಮಾರಿಕಾಂಬ ಜಾತ್ರೆಗೆ ಕೇವಲ ಹಿಂದೂಗಳು ಮಾತ್ರವಲ್ಲದೆ ಕ್ರೈಸ್ತರು, ಮುಸ್ಲೀಮರು ಸಹ ಭಾಗವಹಿಸುತ್ತಾರೆ. ಬೇರೆ ಊರಿಗೆ ಹೋಗಿರುವ ಪುರುಷರು ಹಾಗೂ ಮಹಿಳೆಯರು ತಪ್ಪದೆ ವಾಪಾಸು ಬಂದು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳು ಸಹ ಕೋಟೆ ಮಾರಿಕಾಂಬ ಜಾತ್ರೆಗಾಗಿ ತವರು ಮನೆಗೆ ಆಗಮಿಸುತ್ತಾರೆ. 15 ರಿಂದ 20 ಸಾವಿರ ಜನರು ಸೇರುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮೈಸೂರು ದಸರ ಹಬ್ಬದಂತೆ ಶಾಂತಿಯುತವಾಗಿ 3 ದಿನಗಳ ಕಾಲ ನಡೆಯುತ್ತದೆ ಎಂದು ವಿವರಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜಾತ್ರೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಎಂ.ಸುಂದರೇಶ್, ಕಾರ್ಯಾಧ್ಯಕ್ಷ ಎಚ್.ಎನ್. ರವಿಶಂಕರ್, ಖಜಾಂಚಿ ಆರ್. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ಎನ್.ಎಂ.ಕಾರ್ತಿಕ್, ಉಪಾಧ್ಯಕ್ಷ ಎನ್.ಆರ್.ನಾಗರಾಜ್ ಇದ್ದರು.

--- ಬಾಕ್ಸ್ ---

ಮೇ 2ಂ ರ ಮಂಗಳವಾರ ಬೆಳಿಗ್ಗೆ ಹಳೇ ಪೇಟೆ ಗುತ್ಯಮ್ಮ ದೇವಿ, ಮಡಬೂರು ದಾನಿವಾಸ ದುರ್ಗಾಂಬ ದೇವಿ ಹಾಗೂ ಅಂತರಘಟ್ಟಮ್ಮ ದೇವಿ ಒಟ್ಟಾಗಿ ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಸುಂಕಕಟ್ಟೆಗೆ ಆಗಮಿಸುತ್ತದೆ. ಬೆಳಿಗ್ಗೆ 10 ರಿಂದ 12 ಗಂಟೆವರೆಗೆ.ಸುಂಕದಕಟ್ಟೆಯ ಶ್ರೀ ಮಾರಿಯಮ್ಮನ ಗದ್ದಿಗೆಯಲ್ಲಿ ಮಾತೆಗೆ ದೃಷ್ಠಿ ಇಡುವ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಾತೆಯನ್ನು ಅಗ್ರಹಾರದ ಉಮಾ ಮಹೇಶ್ವರ ದೇವಾಲಯದ ಹಿಂಭಾಗದ ಮಾರಿಗದ್ದಿ ಗೆಗೆ ವಾದ್ಯ ಘೋಷ, ಮೆರವಣಿಗೆಯಲ್ಲಿ ತಂದು ಗ್ರಾಮ ದೇವತೆಗಳೊಂದಿಗೆ ಪ್ರತಿಷ್ಠಾಪಿಸಿ ಅಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಸಂಜೆ 7ಕ್ಕೆ ಗಾಯಕ ಸುಧಿ ಮತ್ತು ತಂಡದವರಿಂದ ಸ್ವರ ನಾದ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11 ಗಂಟೆಗೆ ಡೊಳ್ಳು, ಹಲಗೆ, ನೃತ್ಯ, ಸಿಡಿಮದ್ದು ಪ್ರದರ್ಶನದೊಂದಿಗೆ ರಾಜ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಬಂದು ಕೋಟೆ ಮಾರಿ ಕಾಂಬ ಗದ್ದಿಗೆಯಲ್ಲಿ ಪ್ರತಿಷ್ಟಾಪಿಸಲಾಗುವುದು. ಈ ಸಂದರ್ಭದಲ್ಲಿ ಗ್ರಾಮ ದೇವತೆಗಳಾದ ಹಳೇ ಪೇಟೆಯ ಗುತ್ಯಮ್ಮ ದೇವಿ, ಮಡಬೂರು ದಾನಿವಾಸ ದುರ್ಗಾಂಬ ದೇವಿ, ಮೇದರಬೀದಿಯ ಅಂತರ ಘಟ್ಟಮ್ಮ ದೇವಿ ಮೆರವಣಿಗೆಯಲ್ಲಿ ತಂದು ಗದ್ದಿಗೆ ಬಳಿ ಪ್ರತಿಷ್ಠಾಪಿಸಲಾಗುವುದು.

ಮೇ 21 ರಂದು ಸಂಜೆ 6 ರಿಂದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಲಿದ್ದಾರೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಪ್ಪದ ತಾಜ್ ಇವೆಂಟ್ಸ್ ಅವರಿಂದ ಸಂಗೀತ ಸಂಜೆ ನಡೆಯಲಿದೆ.

22 ರಂದು ಬೆಳಿಗ್ಗೆಯಿಂದ ತಾಯಿಗೆ ಪೂಜೆ, ಹರಕೆ,-ಕಾಣಿಕೆ,ಮಡಲಕ್ಕಿ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಭೆಯಲ್ಲಿ ಚಿತ್ತಾಪುರದ ಧರ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ದಿವ್ಯಸಾನ್ನಿದ್ಯ ವಹಿಸಲಿದ್ದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಕಲಾವಿದರಿಂದ ನೃತ್ಯ ಸಂಗೀತ ವೈಭವ ಕಾರ್ಯಕ್ರಮ ನಡೆಯಲಿದೆ.