ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಕಂಬಳ ಕ್ರೀಡಾಕೂಟ ಸೇರ್ಪಡೆಗೊಂಡಿದ್ದು, ನಾಡಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಕಂಬಳ ಕ್ರೀಡಾಕೂಟ ಸೇರ್ಪಡೆಗೊಂಡಿದ್ದು, ನಾಡಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಆಯೋಜಿಸಿದ್ದ ಕರಾವಳಿಯ ಹೆಮ್ಮೆಯ ಜನಪದ ಕ್ರೀಡೆ ‘ಕಂಬಳ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದರು.

ಸಾಕಷ್ಟು ವಿರೋಧದ ನಡುವೆಯೂ ಮೊದಲ ಬಾರಿಗೆ ಪರಿಚಯಿಸಲಾದ ಕಂಬಳಾ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಂಬಳಾ ಓಟಗಾರರನ್ನು ಸಾವಿರಾರು ಮಂದಿ ಪ್ರೇಕ್ಷಕರು ಕಿರುಚಾಟ, ಚಪ್ಪಾಳೆ, ಶಿಳ್ಳೆಯೊಂದಿಗೆ ಪ್ರೋತ್ಸಾಹಿಸಿದರು. ಕಂಬಳದಲ್ಲಿ 150 ಜೊತೆ ಕೋಣಗಳು ಭಾಗವಹಿಸಿದ್ದು, ಸ್ಪರ್ಧೆ ಸೋಮವಾರ ಮುಂಜಾನೆವರೆಗೂ ನಿರಂತರವಾಗಿ ನಡೆಯಿತು. ಆರು ವಿಭಾಗಗಳಲ್ಲಿ ಕಂಬಳ ಆಯೋಜಿಸಲಾಗಿತ್ತು. ಜೋಡುಕರೆ ಕಂಬಳವನ್ನು ಸಾವಿರಾರು ಮಂದಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. 20 ಎಕರೆ ವಿಶಾಲ ಪ್ರದೇಶದಲ್ಲಿ ಆಯೋಜಿಸಿರುವ ಸ್ಪರ್ಧೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ಬಗೆಯ ಅನುಭವ ನೀಡಿತು. ಇದರಿಂದಾಗಿ ದಸರಾದಲ್ಲಿ ಕರಾವಳಿ-ಮೈಸೂರು ಭಾಗದ ಸಂಸ್ಕೃತಿಗಳ ಸಮ್ಮಿಲನವಾಯಿತು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಜೆ ಮೈಸೂರಿಗೆ ಆಗಮಿಸಿ ಕಂಬಳ ವೀಕ್ಷಿಸಿದರು. ಬೆಂಗಳೂರಿನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಸಾತಗಳ್ಳಿ ಬಳಿ ಆಯೋಜಿಸಿರುವ ಕಂಬಳದ ಸ್ಥಳಕ್ಕೆ ತೆರಳಿ ಜೋಡುಕರೆ ಕಂಬಳ ವೀಕ್ಷಿಸಿದರು.