ಕನ್ನಡಪ್ರಭ ವಾರ್ತೆ ಮಳವಳ್ಳಿ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೈತ ಹಾಗೂ ದೇಶ ಕಾಯುವ ಯೋಧರಿಗೆ ಗೌರವ ಅರ್ಪಣೆಗಾಗಿ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದಲ್ಲಿ 1407 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಟೀಮ್ ಮಳವಳ್ಳಿ ಯುವಕರ ತಂಡ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವೈದ್ಯರು, ಮಠಧೀಶರು, ಕಲಾವಿದರು, ರೈತರು, ಪೊಲೀಸರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಶಿಕ್ಷಕರು, ಸಾರ್ವಜನಿಕರು ಸೇರಿದಂತೆ ಹಲವು ದಂಪತಿ ಸಮೇತ ಆಗಮಿಸಿ ಅತ್ಯಂತ ಉತ್ಸಾಹದಿಂದ ರಕ್ತದಾನ ಮಾಡಿದರು.

ಮಂಡ್ಯ ಜಿಲ್ಲೆಯ ಜನರು ಮಾತ್ರವಲ್ಲದೇ ರಾಮನಗರ, ಕೊಳ್ಳೇಗಾಲ, ಬೆಂಗಳೂರು, ಮೈಸೂರು, ಸೇರಿದಂತೆ ವಿವಿಧ ಜಿಲ್ಲೆಗಳಿಂದಲ್ಲೂ ನೂರಾರು ರಕ್ತದಾನಿಗಳು ಆಗಮಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.

24 ಗಂಟೆಗಳ ಕಾಲ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ಮಂಡ್ಯ ಮಿಮ್ಸ್, ಮೈಸೂರು ಕೆ.ಆರ್.ಆಸ್ಪತ್ರೆ, ಚಾಮರಾಜನಗರ ಜಿಲ್ಲಾಸ್ಪತ್ರೆ, ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೂಲ್ಯ ಜೀವಗಳ ಉಳಿವಿಗಾಗಿ ನೀಡಲಾಯಿತು.


ಶಿಬಿರಕ್ಕೆ ಗಣ್ಯರ ಆಗಮನ, ಹಲವರಿಂದ ರಕ್ತದಾನ:

ಜಿಲ್ಲಾ ನ್ಯಾಯಧೀಶರಾದ ಎಂ.ಮಹೇಂದ್ರ, ನಾಜೀಯಾ ಕೌಸರ್, ಅಶ್ವಿನಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಶ್ರ ನಿಶ್ಚಲಾನಂದನಾಥ ಸ್ವಾಮೀಜಿ, ಗವಿ ಮಠದ ಷಡಕ್ಷರ ಸ್ವಾಮೀಜಿ, ಮಂಟೇಸ್ವಾಮಿ ಮಠದ ಭರತ್‌ ಬುದ್ದಿ ಸೇರಿದಂತೆ ಹಲವು ಮಠದ ಮಠಧೀಶರು, ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಡಾ.ಸುನೀಲ್, ಜಾನಪದ ಕಲಾವಿದ ಶಿವಾರ ಉಮೇಶ್, ಬಿಜೆಪಿ ಮುಖಂಡ ಅಶೋಕ್ ಜಯರಾಮು, ಯಮದೂರು ಸಿದ್ದರಾಜು ಸೇರಿದಂತೆ ಹಲವು ಗಣ್ಯರು ಶಿಬಿರದಲ್ಲಿ ಭಾಗವಹಿಸಿ ಶುಭ ಕೋರಿದ ಜೊತೆಗೆ ಕೆಲವು ಗಣ್ಯರು ರಕ್ತದಾನ ಮಾಡಿದರು.

ಸಚಿವರಿಂದ ಅಭಿನಂದನೆ:

200 ಬಾರಿ ರಕ್ತದಾನ ಮಾಡಿರುವ ಹಾವೇರಿ ಜಿಲ್ಲೆಯ ಕರಿಬಸಪ್ಪ ಗೊಂದಿ ಹಾಗೂ 58 ಬಾರಿ ರಕ್ತದಾನ ಮಾಡುವ ಜೊತೆಗೆ ಪರಿಸರ ಸಂರಕ್ಷಣೆಗೆ ತನ್ನದೇ ಆದ ಕಾಣಿಕೆ ನೀಡುತ್ತಿರುವ ಶಿವಮೊಗ್ಗದ ಹಾಲೇಶಪ್ಪ ಹಾಗೂ ಪೊಲೀಸ್ ಸಿಬ್ಬಂದಿಗೆ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅಭಿನಂದಿಸಿ ಗೌರವಿಸಿದರು.

ದಾನಿಗಳಿಗೆ ಉಪಾಹಾರ ಹಣ್ಣು ವಿತರಣೆ:

ರಕ್ತದಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ದಾನಿಗಳಿಂದ ಉಪಾಹಾರ ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ರಕ್ತದಾನ ಶಿಬಿರದ ಸ್ವಯಂ ಸೇವಕರು ಯಾವುದೇ ಗೊಂದಲವಾಗದಂತೆ ಅಚ್ಚುಕಟ್ಟಾಗಿ ಉಪಚರಿಸಿದರು.

31ಗಂಟೆ ನಿರಂತರ ಸೇವೆ:

ಐತಿಹಾಸಿಕ ರಕ್ತದಾನ ಶಿಬಿರ ಯಶಸ್ಸಿಗಾಗಿ ಅಹೋರಾತ್ರಿ ಸಂಘಟಕರು, ವೈದ್ಯಕೀಯ ತಂಡ, ಸ್ವಯಂ ಸೇವಕರು ಸುಮಾರು 31 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿ ಸಾರ್ವಜನಿಕರು ಪ್ರಶಂಸೆಗೆ ಪಾತ್ರರಾದರು. ರಕ್ತ ನೀಡಿದ ಪ್ರತಿಯೊಬ್ಬ ದಾನಿಗೂ ಪ್ರಶಂಸನಾ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಾನು ರಕ್ತ ನೀಡಿದೆ ಎಂಬ ಘೋಷಣೆಯಲ್ಲಿ ಫೋಟೊ ಶೂಟ್‌ಗೂ ಅವಕಾಶ ಕಲ್ಪಿಸಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಐತಿಹಾಸಿಕ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಜೀವ ರಕ್ಷಣೆಯ ಈ ಮಹತ್ಕಾರ್ಯವನ್ನು ಯಶಸ್ವಿಗೊಳಿಸಿರುವ ಮಳವಳ್ಳಿ ಟೀಮ್ ತಂಡಕ್ಕೆ ಕ್ಷೇತ್ರದ ಪ್ರತಿನಿಧಿಯಾಗಿ ಕೃತಜ್ಞತೆ ಸಲ್ಲಿಸುವುದಾಗಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಅವರು, ಪ್ರತಿ ವರ್ಷ ಮಳವಳ್ಳಿ ಯುವಕರ ತಂಡ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಪುಣ್ಯದ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಜೀವ ಉಳಿಸುವ ಕಾಯಕ ಮಾಡುತ್ತಿರುವ ಹೃದಯವಂತ ಯುವಕರ ಸೇವೆಯನ್ನು ಅರಿತು ಭಗವಂತ ನಾಡಿಗೆ ಮಳೆ ಸುರಿಸಿ ನಾಡು ಸಮೃದ್ದಿಯಾಗುವಂತೆ ಮಾಡಲಿ ಎಂದು ಆಶೀಸಿದರು.