ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಐತಿಹಾಸಿಕ ನವರಾತ್ರಿ ಉತ್ಸವ

| Published : Sep 21 2025, 02:00 AM IST

ಸಾರಾಂಶ

ಶೃಂಗೇರಿದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ನವರಾತ್ರಿ ಮಹೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯೇ ಇದೆ. ಧಾರ್ಮಿಕ, ಸಂಪ್ರದಾಯಿಕವಾಗಿ ಆಚರಿಸಲ್ಪಡುವ ನವರಾತ್ರಿಯಲ್ಲಿ ಮಹೋತ್ಸವಗಳು ಮತ್ತು ದರ್ಬಾರ್‌ ನಡೆಸುವ ಪದ್ಧತಿಯೊಂದಿಗೆ ದೇವಿಗೆ ವಿವಿಧ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುವುದು.

- ಭಾನುವಾರ ಶ್ರೀ ಶಾರದಾಂಬೆಗೆ ಮಹಾಭಿಷೇಕ । ಜಗತ್ ಪ್ರಸೂತಿಕಾ ಅಲಂಕಾರ । ನವರಾತ್ರಿಗೆ ವಿದ್ಯುಕ್ತ ಚಾಲನೆ

ಕನ್ನಡಪ್ರಭ ವಾರ್ತೆ ಶೃಂಗೇರಿ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ನವರಾತ್ರಿ ಮಹೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯೇ ಇದೆ. ಧಾರ್ಮಿಕ, ಸಂಪ್ರದಾಯಿಕವಾಗಿ ಆಚರಿಸಲ್ಪಡುವ ನವರಾತ್ರಿಯಲ್ಲಿ ಮಹೋತ್ಸವಗಳು ಮತ್ತು ದರ್ಬಾರ್‌ ನಡೆಸುವ ಪದ್ಧತಿಯೊಂದಿಗೆ ದೇವಿಗೆ ವಿವಿಧ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುವುದು.

ಶೃಂಗೇರಿ ಪೀಠದಲ್ಲಿ ಗುರು ವಿದ್ಯಾರಣ್ಯರಿಂದ ಆರಂಭವಾದ ನವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನಡೆಸಿಕೊಂಡು ಬರುತ್ತಿರುವುದೇ ಒಂದು ವೈಶಿಷ್ಟ್ಯ. ಧಾರ್ಮಿಕ ಉತ್ಸವ ಜತೆಗೆ ಮತ್ತು ದರ್ಬಾರ್ ನಡೆಸಿಕೊಂಡು ಬರಲಾಗಿದೆ. ದರ್ಬಾರ್‌ ನವರಾತ್ರಿ ಉತ್ಸವದ ಸಮಯದಲ್ಲಿ ನಡೆವ ವಿಶೇಷ ರಾಜ ಸಮಾರಂಭವಾಗಿದ್ದು ಜಗದ್ಗುರು (ಪ್ರಧಾನ ಪೀಠಾಧಿಪತಿ) ಮಠದ ಕಿರೀಟ ಮತ್ತು ಆಭರಣ ಧರಿಸಿ, ಪ್ರತಿ ದಿನ ದರ್ಬಾರ್ ನಡೆಸುವರು. ಕಡೆ ದಿನ ಹಗಲು ದರ್ಬಾರ್‌ ನಡೆಸುವರು.

ಕ್ರೂರ ರಾಕ್ಷಸರನ್ನು ಸಂಹರಿಸಿದ ನೆನಪಿಗಾಗಿ ಜಗನ್ಮಾತೆಗೆ ವಿವಿಧ ರೀತಿ ವಿಶೇಷವಾಗಿ ಅಲಂಕರಿಸಿ ಒಂಬತ್ತು ರಾತ್ರಿ ಪೂಜಿಸಿ ಸಂತುಷ್ಟಿಗೊಳಿಸುವ ವಾಡಿಕೆ ಇದೆ. ವಿಶೇಷ ಪೂಜೆ ಮೂಲಕ ಮತ್ತು ಶರತ್ಕಾಲದಲ್ಲಿ (ಶರಧೃತು) ದೇವಿ ಮಹಾತ್ಮೆ ಪಠಿಸುವುದರಿಂದ ದೇವಿ ಭಕ್ತರಿಗೆ ಸಮೃದ್ಧಿ ನೀಡುತ್ತಾಳೆ ಎಂಬ ನಂಬಿಕೆ ಬೇರೂರಿದೆ.

ಭಾನುವಾರದಿಂದ ಆರಂಭವಾಗಲಿರುವ ನವರಾತ್ರಿ ಉತ್ಸವ ಅ.3 ರವರೆಗೆ ನಡೆಯಲಿದ್ದು, ಮಹಾಲಯ ಅಮಾವಾಸ್ಯೆ ಮಾರನೇ ದಿನ ಸೆ. 22 ರಿಂದ ನವರಾತ್ರಿ ಆರಂಭವಾಗಿ ಅ.3 ರವರೆಗೆ ಪ್ರತೀ ದಿನ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ‍ು ವಿದ್ಯುಕ್ತವಾಗಿ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ.

ಸೆ. 21ರ ಮಹಾಲಯ ಅಮಾವಾಸ್ಯೆ ದಿನ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಮಹಾಭಿಷೇಕ ನಂತರ ಮೂಲಬಿಂಬದ ಹರಿದರ್ಶನ, ನಿರಾಂಜನ, ಮಹಾವ್ಯಾಸ ಪೂರ್ವಕ ಶತರುದ್ರಾಭಿಷೇಕ ನೆರವೇರಲಿದೆ. ಪಂಚಾಮೃತಗಳಿಂದ ದೇವಿಯನ್ನು ಸಂಪ್ರೀತಗೊಳಿಸಲಾಗುತ್ತದೆ. ವಾಡಿಕೆಯಂತೆ 108 ಆವರ್ತಿ ಶ್ರೀ ಸೂಕ್ತ ಪಠಣ ಮಾಡಿ ಅಭಿಷೇಕ, ಮಹಾ ಮಂಗಳಾರತಿ ನೆರವೇರುತ್ತದೆ.

ಸಂಜೆ ಶಕ್ತಿಗಣಪತಿ ಸನ್ನಿಧಿಯಲ್ಲಿ ಶಾರದಾಂಬೆಗೆ ಪ್ರಧಾನ ಆರ್ಚಕರಿಂದ ವಿಶೇಷ ಪೂಜೆ, ಶಾರದೆ ಮೂರ್ತಿಯನ್ನು ಸ್ವರ್ಣ ರಥದಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಪ್ರಾಂಗಣದಲ್ಲಿ ಪ್ರದಕ್ಷಿಣಿ ಹಾಕಲಾಗುವುದು. ಮೆರವಣಿಗೆಯಲ್ಲಿ ವೇದ, ವಾದ್ಯಘೋಷ ಮತ್ತು ಛತ್ರ-ಚಾಮರಗಳನ್ನು (ರಾಜ ಅಭಿಮಾನಿಗಳು) ಹೊತ್ತ ಪರಿಚಾರಕರು ಮೆರವಣಿಯಲ್ಲಿ ಭಾಗವಹಿಸುವರು. ಶರನ್ನವರಾತ್ರಿ ಪ್ರಯುಕ್ತ ಅಷ್ಟದ್ರವ್ಯ ಗಣಹೋಮ, ಸಪ್ತಶತಿ ಪಾರಾಯಣ, ಶತಚಂಡೀ ಮಾಹಾಯಾಗ, ಗಜಪೂಜೆ, ಅಶ್ವ ಪೂಜೆ, ಆಯುಧ ಪೂಜೆ, ಚತುರ್ವೇದ ಪಾರಾಯಣ ನೆರವೇರಲಿದೆ. ದೇಶಿ ಭಾಗವತ ಪಠಣ, ಹರಿವಂಶ, ಲಲಿತೋಪಾಖ್ಯಾನ, ಲಕ್ಷ್ಮಿನಾರಾಯಣ ಹೃದಯ, ಸೂತ ಸಂಹಿತೆ ಮೊದಲಾದ ಗ್ರಂಥಗಳ ಪಠಿಸಲಾಗುವುದು.

ಪ್ರತಿ ದಿನಸಂಜೆ ಶ್ರೀಮಠದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಜಗದ್ಗುರು ಗಳ ನವರಾತ್ರಿ ದರ್ಬಾರ್ ನಡೆಯಲಿದೆ. ಕೊನೆ ದಿನ ರಥಬೀದಿಯಲ್ಲಿ ಶ್ರೀ ಶಾರದಾಂಬೆ ಮಹಾರಥೋತ್ಸವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಹಗಲು ದರ್ಬಾರ್ ನಡೆಯುತ್ತದೆ. ಅಲ್ಲದೇ ವಿಜಯದಶಮಿ, ವಿಜಯೋತ್ಸವ, ಶಮೀ ಪೂಜೆ, ಗಜಾಶ್ವ ಪೂಜೆ, ಆಯುಧಪೂಜೆಯನ್ನು ಪರಂಪರಾಗತವಾಗಿ ನಡೆಸಿಕೊಂಡು ಬರುತ್ತಿರುವಂತೆ ನೇರವೇರಿಸಲಾಗುತ್ತದೆ.

ಸೆ.21ರಂದು ಶಾರದೆ ಜಗತ್ ಪ್ರಸೂತಿಕ ಅಲಂಕಾರದಲ್ಲಿ ಕಂಗೊಳಿಸಲಿದ್ದು, ಸೆ. 22ರ ಸೋಮವಾರ ಶಾರದೆಗೆ ಹಂಸ ವಾಹನ ಅಲಂಕಾರದಲ್ಲಿ ಕಣ್ತುಂಬಿಕೊಳ್ಳಬಹುದು. ಸಂಜೆ ಶ್ರೀ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಂಜೆ ಸಾಂಸ್ಕೃತಿಕ ಮಹೋತ್ಸವದಲ್ಲಿ ಬೆಂಗಳೂರಿನ ವಿದುಷಿ ಶಿವಪ್ರಿಯ ರಾಮಸ್ವಾಮಿ ತಂಡದಿಂದ ನಾಮ ಸಂಕೀರ್ತನೆ ನಡೆಯಲಿದೆ.

ಸೆ. 23ರ ಮಂಗಳವಾರ ಬ್ರಾಹ್ಮಿಅಲಂಕಾರಲ್ಲಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಲಿದ್ದು, ಸಂಜೆ ಚೆನೈನ ವಿದುಷಿ ಸವಿತಾ ಶ್ರೀರಾಮ ತಂಡದವರಿಂದ ನಾಮಸಂಕೀರ್ತನೆ ನೇರವೇರಲಿದೆ. ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಮಸ್ಥರ ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ. ಸೆ.24ರ ಬುಧವಾರ ಶಾರದೆಗೆ ಮಾಹೇಶ್ವರಿ ಅಲಂಕಾರದಲ್ಲಿ ಪೂಜಿಸಲಾಗುವುದು. ಸಂಜೆ ಶೃಂಗೇರಿ ಸಹೋದರಿಯರು ತಂಡದಿಂದ ಭಕ್ತಿ ಸಂಗೀತ, ಬೀದಿ ಉತ್ಸವದಲ್ಲಿ ಕೂತಗೋಡು ಗ್ರಾಮಸ್ಥರು ಭಾಗವಹಿಸುವರು.

ಸೆ.25 ರಂದು ಶಾರದೆಗೆ ಮಯೂರವಾಹನ ಅಲಂಕಾರದಲ್ಲಿ ಪೂಜೆ ಸಲ್ಲಿಸಿ ಸಂಜೆ ಚೆನ್ನೈನ ವಿದುಷಿ ಭುವನೇಶ್ವರಿ ಹಾಗೂ ಕೃತಿಗಾ ತಂಡದಿಂದ ನಾಮಸಂಕೀರ್ತನೆ, ವಿದ್ಯಾರಣ್ಯಪುರ ಗ್ರಾಮಸ್ಥರು ಬೀದಿ ಉತ್ಸವನಡೆಸುವರು. ಸೆ.26ರ ಶುಕ್ರವಾರ ಶಾರದೆ ಗರುಡವಾಹನ ಅಲಂಕಾರದಲ್ಲಿ ದರ್ಶನ ನೀಡಲಿದ್ದು, ಸಂಜೆ ತಿರುನೇಲ್ವಿ ವಿದ್ವಾನ್ ಶ್ರೀ ಐಕೂಡಿ ಕುಮಾರ್ ತಂಡದಿಂದ ನಾಮಸಂಕೀರ್ತನೆ ನಡೆಯಲಿದೆ. ಧರೆಕೊಪ್ಪ ಗ್ರಾಮಸ್ತರಿಂದ ಬೀದಿ ಉತ್ಸವವಿದೆ.

ಸೆ.27 ರ ಶನಿವಾರ ಶಾರದೆಗೆ ಇಂದ್ರಾಣಿ ಅಲಂಕಾರ ಮಾಡಿ ಶತಚಂಡೀಯಾಗ ನೆರವೇರಲಿದೆ. ಸಂಜೆ ಪಾಲಕ್ಕಾಡ್ ನ ವಿದ್ವಾನ್ ಶ್ರೀ ಮೆಲರ್ ಕೋಡ್ ತಂಡದಿಂದ ನಾಮ ಸಂಕೀರ್ತನೆ, ಬೀದಿ ಉತ್ಸವದಲ್ಲಿ ನೆಮ್ಮಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಸೆ.28ರ ಮೋಹಿನಿ ಅಲಂಕಾರದಲ್ಲಿ ಕಂಗೊಳಿಸುವ ಶಾರದೆ, ಸಂಜೆ ಬೆಂಗಳೂರಿನ ಹರಿನಾಮದ್ವಾರ್ ತಂಡದವರಿಂದ ನಾಮಸಂಕೀರ್ತನೆ,ಬೇಗಾರು ಗ್ರಾಮಸ್ಥರು ಪಾಲ್ಗೊಂಡು ಮಹೋತ್ಸವ ಸಂಪನ್ನಗೊಳಿಸುವರು.

ಸೆ.29 ರ ಸೋಮವಾರ ವೀಣಾ ಸಹಿತ ಶಾರದೆಗೆ ಅಲಂಕಾರ ಮಾಡಿ, ಸಂಜೆ ವೀಣಾವಾದನ ಕಾರ್ಯಕ್ರಮ ಏರ್ಪಡಿಸ ಲಾಗಿದೆ. ಬೀದಿ ಉತ್ಸವದಲ್ಲಿ ಶೃಂಗೇರಿ ಪಟ್ಟಣದ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಸೆ. 30ರ ಮಂಗಳವಾರ ರಾಜರಾಜೇಶ್ವರಿ ಅಲಂಕಾರದಲ್ಲಿ ದರ್ಶನ ಕರುಣಸಲಿರುವ ಶಾರದೆಗೆ ಸಂಜೆ ಚೆನೈನ ವಿದುಷಿ ಗಾಯಿತ್ರಿ ತಂಡದವರಿಂದ ನಾಮ ಸಂಕೀರ್ತನೆ, ಮರ್ಕಲ್ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.

ಅ.1ರ ಬುಧವಾರ ಚಾಮುಂಡಿ ಅಲಂಕಾರ, ಮಹಾನವಮಿ, ಗಜಾಶ್ವ ಪೂಜೆ, ಶತಚಂಡಕಾಯಾಗದ ಪೂರ್ಣಾಹುತಿ ನಡೆಯ ಲಿದೆ. ನಾಮಸಂಕೀರ್ತನೆ, ಸಂಜೆಯ ಬೀದಿ ಉತ್ಸವದಲ್ಲಿ ಕೆರೆ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ.2 ರ ಗುರುವಾರ ಶಾರದೆಗೆ ಗಜಲಕ್ಷ್ಮಿ ಅಲಂಕಾರದಲ್ಲಿ ಪೂಜೆಸಲ್ಲಿಸಲಿದ್ದು. ವಿಜಯದಶಮಿ, ವಿಜಯೋತ್ಸವ,ಶಮೀಪೂಜೆ ನಡೆಯಲಿದೆ. ಸಂಜೆ ಬೀದಿ ಉತ್ಸವದಲ್ಲಿ ಸಮಸ್ತ ಭಕ್ತರು ಪಾಲ್ಗೊಳ್ಳಲಿದ್ದಾರೆ. ಅ.3 ರ ಶುಕ್ರವಾರ ವಿಶೇಷ ಅಲಂಕಾರ, ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ,ನವರಾತ್ರಿಯ ಹಗಲು ದರ್ಬಾರ್ ನಡೆಯಲಿದೆ.

20 ಶ್ರೀ ಚಿತ್ರ 1-ಶ್ರೀ ಶಾರದಾ ಪೀಠ