ಸಾರಾಂಶ
ಲಡಾಯಿ ಕಟ್ಟೆಯ ಇತಿಹಾಸ ಪರಿಚಯಿಸುವ ಹಿನ್ನೆಲೆ ರೋಣ ಹಾಗೂ ಯಲಬುರ್ಗಾ ತಾಲೂಕಿನ ತಹಸೀಲ್ದಾರ್‌ರು ಪ್ರತಿ ವರ್ಷ ಸೆ.೧೭ರಂದು ಲಡಾಯಿ ಕಟ್ಟೆಗೆ ಆಗಮಿಸಿ,ಪೂಜೆ ಸಲ್ಲಿಸುತ್ತಿದ್ದರು. ರಾಷ್ಟ್ರಗೀತೆ, ನಾಡಗೀತೆ ಹಾಡುವ ಪರಂಪರೆ ಹುಟ್ಟು ಹಾಕಿದ್ದರು. ಆದರೆ, ಪ್ರಸ್ತುತ ಎರಡು ತಾಲೂಕುಗಳ ತಹಸೀಲ್ದಾರ್‌ರು ಲಡಾಯಿ ಕಟ್ಟೆಗೆ ಸಾಂಕೇತಿಕ ಪೂಜಾ ಪರಂಪರೆ ಕೈಬಿಟ್ಟಿದ್ದಾರೆ.
ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾ:ಕೊಪ್ಪಳ-ಗದಗ ಜಿಲ್ಲೆಗಳ ಗಡಿಭಾಗದ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐತಿಹಾಸಿಕ ಸ್ಮಾರಕವಾಗಿರುವ ಲಡಾಯಿ ಕಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದೇ ವಂಚಿತವಾಗಿದೆ.
ತಾಲೂಕಿನ ಕರಮುಡಿ ಹಾಗೂ ಗಜೇಂದ್ರಗಡ ತಾಲೂಕಿನ ಹಾಲಕೆರೆ ಗ್ರಾಮಗಳಿಗೆ ಹೊಂದಿರುವ ಜಾಗದಲ್ಲಿ ಅಂದಿನ ರಜಾಕಾರರ ವಿರುದ್ಧ ದಂಗೆ ಏಳುವ ಮೂಲಕ ಲಡಾಯಿ (ಯುದ್ಧ) ಪ್ರಾರಂಭವಾಗುತ್ತದೆ. ಕರಮುಡಿ ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟರೆ, ಹಾಲಕೆರೆ ಗ್ರಾಮವು ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಕರಮುಡಿ ಗಡಿ ಕಾಯಲು ರಜಾಕಾರರನ್ನು ನೇಮಿಸಿದ್ದು, ರಜಾಕಾರರು ಹಾಗೂ ಮುಂಬೈ ಸರ್ಕಾರದ ಪೊಲೀಸರ ಮಧ್ಯೆ ಲಡಾಯಿ ನಡೆದು ಪೇದೆಗಳಾದ ರಾಮಪ್ಪ ಪವಾರ್, ವೀರನಗೌಡ ಹಾಲಕೇರಿ ಹಾಗೂ ಅಯ್ಯನಗೌಡರ ಹುತಾತ್ಮರಾಗುತ್ತಾರೆ. ಅವರ ಸ್ಮರಣಾರ್ಥ ಗ್ರಾಮದವರು ಲಡಾಯಿಕಟ್ಟೆ ನಿರ್ಮಿಸಿದ್ದಾರೆ. ಕರಮುಡಿಯ ದಿ. ಅನ್ನದಾನಪ್ಪ ನಿಂಗೋಜಿ ತಮ್ಮ ಗೆಳೆಯರನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಕವಾಯತು ಮಾಡಿಸಿ, ದೇಶ ಭಕ್ತಿಗೀತೆಯೊಂದಿಗೆ ಸಾಮೂಹಿಕ ಶ್ರದ್ಧಾಂಜಲಿ ಅರ್ಪಿಸಿದ್ದರು. ಲಡಾಯಿ ಕಟ್ಟೆ ನಿರ್ಮಿಸಿ ೭೮ ವರ್ಷ ಕಳೆದಿದ್ದು, ಅಲ್ಲಲ್ಲಿ ಬಿರುಕುಗಳು ಉಂಟಾಗಿದೆ. ಯುದ್ಧದ ವಿವರ ಹಾಗೂ ಕಾಳಗದಲ್ಲಿ ಮೃತಪಟ್ಟವರ ಹೆಸರನ್ನು ನಾಮಫಲಕದಲ್ಲಿ ಅಳವಡಿಸಲಾಗಿದ್ದು, ಇತಿಹಾಸದ ನೆನಪು ಮೆಲುಕು ಹಾಕುತ್ತಿದೆ.ಸ್ಮರಣೆ ಮರೆತ ತಹಸೀಲ್ದಾರ್:
ಲಡಾಯಿ ಕಟ್ಟೆಯ ಇತಿಹಾಸ ಪರಿಚಯಿಸುವ ಹಿನ್ನೆಲೆ ರೋಣ ಹಾಗೂ ಯಲಬುರ್ಗಾ ತಾಲೂಕಿನ ತಹಸೀಲ್ದಾರ್‌ರು ಪ್ರತಿ ವರ್ಷ ಸೆ.೧೭ರಂದು ಲಡಾಯಿ ಕಟ್ಟೆಗೆ ಆಗಮಿಸಿ,ಪೂಜೆ ಸಲ್ಲಿಸುತ್ತಿದ್ದರು. ರಾಷ್ಟ್ರಗೀತೆ, ನಾಡಗೀತೆ ಹಾಡುವ ಪರಂಪರೆ ಹುಟ್ಟು ಹಾಕಿದ್ದರು. ಆದರೆ, ಪ್ರಸ್ತುತ ಎರಡು ತಾಲೂಕುಗಳ ತಹಸೀಲ್ದಾರ್‌ರು ಲಡಾಯಿ ಕಟ್ಟೆಗೆ ಸಾಂಕೇತಿಕ ಪೂಜಾ ಪರಂಪರೆ ಕೈಬಿಟ್ಟಿದ್ದಾರೆ. ಆದರೆ, ನಿಂಗೋಜಿ ಕುಟುಂಬಸ್ಥರಾದ ವಕೀಲ ಎಸ್.ಎ. ನಿಂಗೋಜಿ ಅವರು ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಕರೆದುಕೊಂಡು ಹೋಗಿ ಇತಿಹಾಸ ತಜ್ಞರಿಂದ ಕಟ್ಟೆಯ ಇತಿಹಾಸ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಾದರೂ ಸರ್ಕಾರ ಲಡಾಯಿ ಕಟ್ಟೆ ಸ್ಮಾರಕ ಸಂರಕ್ಷಿಸುವ ಕೆಲಸ ಮಾಡಬೇಕಾಗಿದೆ.ಯಲಬುರ್ಗಾ ತಾಲೂಕಿನ ಕರಮುಡಿ ಗಡಿಭಾಗದ ಐತಿಹಾಸಿಕ ಲಡಾಯಿ ಕಟ್ಟೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹುತಾತ್ಮರ ತ್ಯಾಗದ ಪ್ರತಿರೂಪವಾಗಿದೆ. ಇದನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕಿದೆ. ಲಡಾಯಿ ಕಟ್ಟೆ ಇತಿಹಾಸದ ಬಗ್ಗೆ ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ. ಸೆ. ೧೭ರಂದು ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಲಡಾಯಿ ಕಟ್ಟೆಗೆ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಆಗಮಿಸಲಿದ್ದು, ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.ಎಸ್.ಎ. ನಿಂಗೋಜಿ ವಕೀಲರು, ಯಲಬುರ್ಗಾ