ಇಂದು ಕಟೀಲಿನಲ್ಲಿ ‘ಶಿವಾಜಿ’ ಚಾರಿತ್ರಿಕ ನಾಟಕ ಪ್ರಥಮ ಪ್ರದರ್ಶನ, 13ರಂದು ಮಂಗಳೂರಲ್ಲಿ

| Published : Mar 06 2025, 12:31 AM IST

ಸಾರಾಂಶ

ಅಪ್ರತಿಮ ದೊರೆ ಎನಿಸಿದ ಶಿವಾಜಿ ಕುರಿತ ನಾಟಕ ಮಾರ್ಚ್‌ 6ರಂದ ಸಂಜೆ ಕಟೀಲು ಕ್ಷೇತ್ರದಲ್ಲಿ ಪ್ರಥಮ ಪ್ರದರ್ಶನ ಕಾಣಲಿದ್ದು, ಮಾ.13ರಂದು ಸಂಜೆ ಮಂಗಳೂರು ಪುರಭವನದಲ್ಲಿ ಎರಡನೇ ಪ್ರದರ್ಶನ ಕಾಣಲಿದೆ. ಶಿವಾಜಿ ನಾಟಕ ಪ್ರದರ್ಶನಕ್ಕೆ ಈಗಾಲೇ ಅಪಾರ ಬೇಡಿಕೆ ವ್ಯಕ್ತವಾಗುತ್ತಿದ್ದು, ಸುಮಾರು 500ಕ್ಕೂ ಅಧಿಕ ಪ್ರದರ್ಶನಗಳು ಬುಕ್ಕಿಂಗ್‌ ಆಗಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಾಡಿನಾದ್ಯಂತ ದಾಖಲೆಯ ಸುಮಾರು ಒಂದು ಸಾವಿರ ಪ್ರದರ್ಶನದ ಸನಿಹಕ್ಕೆ ಬಂದಿರುವ ‘ಶಿವದೂತೆ ಗುಳಿಗೆ’ ತುಳು ಚಾರಿತ್ರಿಕ ನಾಟಕದ ಬಳಿಕ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಇನ್ನೊಂದು ಐತಿಹಾಸಿಕ ನಾಟಕ ಪ್ರದರ್ಶನಕ್ಕೆ ಸಜ್ಜಾಗಿದೆ.

ಅಪ್ರತಿಮ ದೊರೆ ಎನಿಸಿದ ಶಿವಾಜಿ ಕುರಿತ ನಾಟಕ ಮಾರ್ಚ್‌ 6ರಂದ ಸಂಜೆ ಕಟೀಲು ಕ್ಷೇತ್ರದಲ್ಲಿ ಪ್ರಥಮ ಪ್ರದರ್ಶನ ಕಾಣಲಿದ್ದು, ಮಾ.13ರಂದು ಸಂಜೆ ಮಂಗಳೂರು ಪುರಭವನದಲ್ಲಿ ಎರಡನೇ ಪ್ರದರ್ಶನ ಕಾಣಲಿದೆ. ಶಿವಾಜಿ ನಾಟಕ ಪ್ರದರ್ಶನಕ್ಕೆ ಈಗಾಲೇ ಅಪಾರ ಬೇಡಿಕೆ ವ್ಯಕ್ತವಾಗುತ್ತಿದ್ದು, ಸುಮಾರು 500ಕ್ಕೂ ಅಧಿಕ ಪ್ರದರ್ಶನಗಳು ಬುಕ್ಕಿಂಗ್‌ ಆಗಿವೆ.

ಈ ಕುರಿತಂತೆ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ನಾಟಕದ ಟೈಟಲ್ ಹಾಡು ಕನ್ನಡ ಭಾಷೆಯಲ್ಲಿದ್ದರೆ ತುಳುವಿನಲ್ಲಿ ಸಂಭಾಷಣೆ ಇರಲಿದೆ. ಹಿಂದಿ ಭಾಷೆಯನ್ನು ಕೂಡ ಬಳಕೆ ಮಾಡುವ ಮೂಲಕ ಭಾಷಾ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ. ಕಥೆ ರಚನೆಕಾರ ಶಶಿರಾಜ್ ರಾವ್ ಕಾವೂರು ಕಥೆ ರಚಿಸಿದ್ದಾರೆ. ಒಟ್ಟು ಮೂರು ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು. ಪ್ರೀತೇಶ್ ಬಳ್ಳಾಲ್‌ಬಾಗ್ ಇತ್ತೀಚಿನ 70 ಶೋಗಳಲ್ಲಿ ಶಿವದೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಶಿವಾಜಿ ಪಾತ್ರದಲ್ಲೂ ಅವರೇ ಇರಲಿದ್ದಾರೆ. ಪ್ರಮೋದ್ ಮರವಂತೆ, ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದಾರೆ. ಶಿವಾಜಿ ಪಾತ್ರಕ್ಕೆ ನಟ ಪೃಥ್ವಿ ಅಂಬರ್ ಕಂಠದಾನ ಮಾಡಿದರೆ, ಗುರು ದಾದಾಜಿ ಪಾತ್ರಕ್ಕೆ ನವೀನ್ ಡಿ ಪಡೀಲ್ ಧ್ವನಿ ನೀಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ಡಾ. ದೇವದಾಸ್ ಕಾಪಿಕಾಡ್ ಹಾಡಿದ್ದಾರೆ ಎಂದರು.

ಶಿವಾಜಿಯ ಸಂಪೂರ್ಣ ಕಥೆ ತಿಳಿದುಕೊಂಡರೆ ಅವರೆಂತಹ ಅನ್ಯಧರ್ಮ ಸಹಿಷ್ಣು ಎನ್ನುವುದು ತಿಳಿಯುತ್ತದೆ. ಶಿವಾಜಿಯ ಬಗ್ಗೆ ತಿಳಿಯದವರು ನಮ್ಮ ಮುಂದಿನ ಚಾರಿತ್ರಿಕ ನಾಟಕ ‘ಶಿವಾಜಿ’ಯನ್ನು ನೋಡಬೇಕು. ಅವರ ಶಿವಾಜಿ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ ಎಂದು ವಿಜಯಕುಮಾರ್‌ ಕೊಡಿಯಾಲಬೈಲ್‌ ಹೇಳಿದರು.

ಶಿವಾಜಿಯಂತಹ ರಾಜ ಬೇರೆ ಇಲ್ಲ: ಶಿವಾಜಿ ಎಲ್ಲ ಜಾತಿ ಧರ್ಮದ ಜನರನ್ನು ಸಮಾನವಾಗಿ ಕಂಡವರು. ಅವರಿಗೆ ಅವರೇ ಸಾಟಿ. ಶಿವಾಜಿ ಒಬ್ಬ ದರೋಡೆಕೋರ ಅನ್ಯಧರ್ಮದ ದ್ವೇಷಿ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಇದು ಖಂಡಿತಾ ಸರಿಯಲ್ಲ. ಶಿವಾಜಿಯ ಬಗ್ಗೆ ಅವರ ಸಾಮ್ರಾಜ್ಯ ಮತ್ತು ಆಡಳಿತದ ಬಗ್ಗೆ ಪಟ್ಟಾಭಿಷೇಕದ ಬಗ್ಗೆ ನಾಟಕದಲ್ಲಿ ವಾಸ್ತವವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ನಾಟಕ ನೋಡಿ ಎಂದು ಶಶಿರಾಜ್‌ ರಾವ್‌ ಕಾವೂರು ಹೇಳಿದರು.

ಮಣಿಕಾಂತ್ ಕದ್ರಿ, ಎ. ಕೆ. ವಿಜಯ್, ಪ್ರೀತೇಶ್ ಬಳ್ಳಾಲ್‌ಬಾಗ್‌ ಇದ್ದರು.---------------ನಾಟಕ ತಂಡ ಕಲಾವಿದರು

ಈ ನಾಟಕ ತಂಡದಲ್ಲಿ ಕಲಾವಿದರಾಗಿ ರಮೇಶ್ ಕಲ್ಲಡ್ಕ, ಪ್ರೀತೇಶ್ ಬಳ್ಳಾಲ್‌ ಭಾಗ್ (ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ), ರೂಪಶ್ರೀ ವರ್ಕಾಡಿ, ರಜಿತ್ ಕದ್ರಿ, ನಿತೇಶ್ ಪೂಜಾರಿ ಏಳಿಂಜ, ಜಯರಾಮ ಆಚಾರ್, ವಿಶಾಲ್‌ರಾಜ್, ಕೋಕಿಲಾ ಯಾದವ ಮಣ್ಣಗುಡ್ಡ, ಸುದರ್ಶನ್ ಬಳ್ಳಾಲ್‌ಬಾಗ್, ಚಂದ್ರಶೇಖ‌ರ್ ಸಿದ್ಧಕಟ್ಟೆ, ವೀರವಸಂತ್, ರಕ್ಷಿತ್ ಜೋಗಿ, ಸಚಿನ್ ಉಪ್ಪಳ, ಪ್ರಶಾಂತ್ ಮರೋಳಿ, ಪ್ರೀತಮ್ ಎಂ. ಎಸ್., ರವಿಚಂದ್ರ ಸೋಮೇಶ್ವರ, ಕಮಲಾಕ್ಷ ಪೂಜಾರಿ ಮಾಣಿ, ಕಿಶೋರ್ ಕುಂಪಲ ಮತ್ತಿತರರಿದ್ದಾರೆ.