ಚಾರಿತ್ರಿಕ ದಾಖಲೆಗಳು ಸಂಶೋಧನೆಗೆ ಪ್ರಾಥಮಿಕ ಆಕರಗಳಾಗಿವೆ: ಮಂಜುನಾಥ

| Published : Mar 21 2024, 01:10 AM IST

ಸಾರಾಂಶ

ದೇಶದ ಆಸ್ತಿಯಾದ ಚಾರಿತ್ರಿಕ ದಾಖಲೆಗಳು ಎಲ್ಲ ಬಗೆಯ ಸಂಶೋಧನೆಗೆ ಪ್ರಾಥಮಿಕ ಆಕರಗಳಾಗಿವೆ. ಪ್ರಾಚೀನ ಕಾಲದ ಬದುಕಿನ ರೀತಿ ನೀತಿಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ಚಾರಿತ್ರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ವಿಭಾಗೀಯ ಪತ್ರಗಾರ ಕಚೇರಿಯ ಹಿರಿಯ ನಿರ್ದೇಶಕ ಎಚ್.ಎಲ್.ಮಂಜುನಾಥ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶದ ಆಸ್ತಿಯಾದ ಚಾರಿತ್ರಿಕ ದಾಖಲೆಗಳು ಎಲ್ಲ ಬಗೆಯ ಸಂಶೋಧನೆಗೆ ಪ್ರಾಥಮಿಕ ಆಕರಗಳಾಗಿವೆ. ಪ್ರಾಚೀನ ಕಾಲದ ಬದುಕಿನ ರೀತಿ ನೀತಿಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ಚಾರಿತ್ರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ವಿಭಾಗೀಯ ಪತ್ರಗಾರ ಕಚೇರಿಯ ಹಿರಿಯ ನಿರ್ದೇಶಕ ಎಚ್.ಎಲ್.ಮಂಜುನಾಥ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಇತಿಹಾಸ ವಿಭಾಗದಿಂದ ಏರ್ಪಡಿಸಿದ್ದ ’ಪರಂಪರೆ ಕೂಟ’ವನ್ನು ಉದ್ಘಾಟಿಸಿ ’ಪ್ರಾಚೀನ ಕಾಲದ ಚಾರಿತ್ರಿಕ ದಾಖಲೆಗಳ ಪ್ರಾಮುಖ್ಯತೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮೈಸೂರು ಮಹಾರಾಜರ ಕಾಲದಲ್ಲಿ ನಡೆದ ಆಡಳಿತ್ಮಾಕ ಸಂಗತಿಗಳನ್ನು ಮೂವತ್ತಕ್ಕೂ ಹೆಚ್ಚು ಇಲಾಖೆಗಳಲ್ಲಿ ನಿರ್ವಹಿಸಿದ ದಾಖಲೆಗಳನ್ನು ಪತ್ರಗಾರ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ನೂರಾರು ವರ್ಷಗಳ ದಾಖಲೆ ಪತ್ರಗಳನ್ನು ಸಂರಕ್ಷಿಸುವುದೇ ಬಹುದೊಡ್ಡ ಸವಾಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಸಂರಕ್ಷಿಸಲಾಗುತ್ತಿದೆ. ರಾಸಾಯನಿಕ ಬಳಸಿ ಟಿಶ್ಯೂ ಲ್ಯಾಮಿನೇಷನ್ ಮಾಡುವುದರ ಮೂಲಕ ಪ್ರಾಚೀನ ದಾಖಲೆಗಳನ್ನು ನೂರಾರು ವರ್ಷಗಳ ಕಾಲ ಹಾಳಾಗದಂತೆ ಕಾಪಾಡಬಹುದು. ವಿದ್ಯಾರ್ಥಿಗಳು ಚಾರಿತ್ರಿಕ ದಾಖಲೆಗಳನ್ನು ಅಧ್ಯಯನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ನೀಲಕಂಠಸ್ವಾಮಿ ಮಾತನಾಡಿ, ದೇಶದ ಗತವೈಭವವನ್ನು ಹಿರಿಯರು ಹಾಕಿಕೊಟ್ಟ ಮಾರ್ಗದ ಪರಂಪರೆಯನ್ನು ಉಳಿಸಿಬೆಳಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ ಯುವಪೀಳಿಗೆ ಮೇಲಿದೆ. ’ಪರಂಪರೆ ಕೂಡ’ದಿಂದ ವಿದ್ಯಾರ್ಥಿಗಳು ಐತಿಹಾಸಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಚಂದ್ರಮ್ಮ ಮಾತನಾಡಿದರು. ಪ್ರತಿಯೊಂದು ಸ್ಥಳಕ್ಕೂ ತನ್ನದೆಯಾದ ಐತಿಹಾಸಿಕ ಮಹತ್ವವಿದೆ. ನಮ್ಮ ಸುತ್ತಮುತ್ತಲಿನ ಸ್ಥಳೀಯ ಚಾರಿತ್ರಿಕ ಸಂಗತಿಗಳ ಬಗ್ಗೆ ಅರಿವು ಇಲ್ಲದಿರುವುದು ನಮ್ಮ ನಿರ್ಲಕ್ಷ್ಯತೆಯಾಗಿದೆ. ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದುಕೊಂಡು ಇತಿಹಾಸ ಸೃಷ್ಟಿಸುವ ಕೆಲಸವನ್ನು ಮಾಡಲು ಮುಂದಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಬಿ.ಗಣೇಶ್ ಪ್ರಕಾಶ್, ಪ್ರೊ.ಮಲ್ಲೇಶ್, ಪ್ರೊ.ಮಂಜುನಾಥ, ಪ್ರೊ.ಮಹದೇವಸ್ವಾಮಿ, ಪ್ರೊ.ಶಿವಸ್ವಾಮಿ, ಪ್ರೊ.ನಾಗೇಂದ್ರಕುಮಾರ್, ಉಪನ್ಯಾಸಕರಾದ ಬಿ.ಗುರುರಾಜು ಯರಗನಹಳ್ಳಿ, ಸಿದ್ದರಾಜು, ಶ್ರೀಕಂಠಸ್ವಾಮಿ, ಮಹದೇವಸ್ವಾಮಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.