ಸಾವಿರಾರು ವರ್ಷಗಳಿಂದ ಮೌಖಿಕವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬೆಳೆದು ಬಂದಿರುವ ಜಾನಪದ ಸಾಹಿತ್ಯದಲ್ಲಿ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮ ಅಡಕವಾಗಿವೆ.
ಕನ್ನಡಪ್ರಭ ವಾರ್ತೆ ಗದಗ
ಸಾವಿರಾರು ವರ್ಷಗಳಿಂದ ಮೌಖಿಕವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬೆಳೆದು ಬಂದಿರುವ ಜಾನಪದ ಸಾಹಿತ್ಯದಲ್ಲಿ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮ ಅಡಕವಾಗಿವೆ. ದೇಹದ ದಣಿವು ನೀಗಿಸಿ ಕೆಲಸದಲ್ಲಿ ಉತ್ಸಾಹ ತುಂಬುವ ಶಕ್ತಿ ಜಾನಪದಕ್ಕಿದ್ದು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇದನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.ಲಿಂಗಾಯತ ಪ್ರಗತಿಶೀಲ ಸಂಘದ 2823ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಾನಪದ ವಿಶ್ವವಿದ್ಯಾಲಯವು ಹೊಸ ಪ್ರಯೋಗಗಳ ಮೂಲಕ ಈ ಸಾಹಿತ್ಯವನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಈ ಸಂದರ್ಭ ವಿಧಾನಪರಿಷತ್ತಿಗೆ ಮೂರನೇ ಬಾರಿ ಆಯ್ಕೆಯಾದ ಪ್ರೊ. ಎಸ್.ವಿ. ಸಂಕನೂರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪಾಂಡಪ್ಪ ಲಂಬಾಣಿ ಹಾಗೂ ಸ್ಥಳೀಯ ಜಾನಪದ ಕಲಾವಿದರಾದ ಕೋಟುಮಚಗಿಯ ಇಮಾಮಸಾಬ ಹುಯಿಲಗೋಳ, ಲಕ್ಕುಂಡಿಯ ಅನುಸೂಯಾ ಭೂಮಣ್ಣವರ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಎಸ್.ವಿ. ಸಂಕನೂರ, ರಾಜ್ಯ ಸರ್ಕಾರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗದಗ ಜಿಲ್ಲೆಗೆ ಕೈಗಾರಿಕಾ ಯೋಜನೆಗಳನ್ನು ತರುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುತ್ತೇನೆ ಎಂದರು.ಮುಖ್ಯ ಅತಿಥಿಯಾಗಿದ್ದ ಗಾಯಕ ರಾಮು ಮೂಲಗಿ ಜಾನಪದ ಗೀತೆ ಹಾಡಿದರು. ಹಿರಿಯ ಸಾಹಿತಿ ಕೆ.ವಿ. ನಾರಾಯಣಗೆ ಸಂತಾಪ ಸೂಚಿಸಲಾಯಿತು. ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಸಾಗರ ಕದ್ನಳ್ಳಿ ಧರ್ಮಗ್ರಂಥ ಪಠಣ ಹಾಗೂ ಯಶವಂತ ದಳವಾಯಿ ವಚನಚಿಂತನ ಮಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ಕಲ್ಲನಗೌಡರ ಹಾಗೂ ವಿದ್ಯಾ ಗಂಜಿಹಾಳ ನಿರೂಪಿಸಿದರು. ಡಾ. ಆದೇಶ ಅಂಗಡಿ, ಡಾ. ಪ್ರಭು ಗಂಜಿಹಾಳ, ಸೋಮು ಪುರಾಣಿಕ, ಸುನಂದಾ ಪಿಳ್ಳಿ, ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ, ಎಸ್.ಎಸ್. ಜೋಶಿ, ಜಿ.ಬಿ. ಪಾಟೀಲ, ರಾಜೇಂದ್ರ ಗಡಾದ ಉಪಸ್ಥಿತರಿದ್ದರು.