ಲೋಕಸಭೆಗೆ ಗಾಯತ್ರಿ ಸಿದ್ದೇಶ್ವರ ಆಯ್ಕೆಯಾದರೆ ಇತಿಹಾಸ: ಶ್ಯಾಮ್‌

| Published : Apr 05 2024, 01:01 AM IST

ಸಾರಾಂಶ

ದಾವಣಗೆರೆ ಸೇರಿದಂತೆ ದೇಶಾದ್ಯಂತ ಬಿಜೆಪಿ ಅಭೂತಪೂರ್ವ ದಿಗ್ವಿಜಯ ಸಾಧಿಸುವ ಮೂಲಕ ಮತ್ತೊಮ್ಮೆ ಹೊಸ ಇತಿಹಾಸ ಸೃಷ್ಟಿಸಲಿದೆ

ದಾವಣಗೆರೆ: ದಾವಣಗೆರೆ ಸೇರಿದಂತೆ ದೇಶಾದ್ಯಂತ ಬಿಜೆಪಿ ಅಭೂತಪೂರ್ವ ದಿಗ್ವಿಜಯ ಸಾಧಿಸುವ ಮೂಲಕ ಮತ್ತೊಮ್ಮೆ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ, ಯುವ ಉದ್ಯಮಿ ಮಾಯಕೊಂಡ ಜಿ.ಎಸ್.ಶ್ಯಾಮ್ ಹೇಳಿದರು.

ತಾಲೂಕಿನ ಮಾಯಕೊಂಡ ಕ್ಷೇತ್ರದ ಅಣಜಿ ಹೋಬಳಿ ವಿವಿಧ ಗ್ರಾಮಗಳಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರದ ವೇಳೆ ಗ್ರಾಮಸ್ಥರುಗಳನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲಾದ್ಯಂತ ಬಿಜೆಪಿ ಅಲೆ ಹೆಚ್ಚುತ್ತಲೇ ಇದ್ದು, ಪ್ರಚಾರಕ್ಕೆ ಹೋದಲ್ಲೆಲ್ಲಾ ಜನರು ಸ್ವಯಂ ಪ್ರೇರಣೆಯಿಂದ ಸ್ಪಂದಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಬಿಜೆಪಿ ಪರ ಪ್ರಚಾರಕ್ಕೆಂದು ಹೋದಂತಹ ಸಂದರ್ಭದಲ್ಲಿ ದೊರಕುತ್ತಿರುವ ಜನ ಬೆಂಬಲವೇ ತಮ್ಮ ಮಾತಿಗೆ ಸಾಕ್ಷಿಯಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು. ಇದಕ್ಕಾಗಿ ತಾವು ಬಿಜೆಪಿಯನ್ನೇ ಬೆಂಬಲಿಸುವುದಾಗಿ ಜನರೂ ಸಹ ಸ್ವಯಂ ಪ್ರೇರಿತವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮೆಲ್ಲರ ಉತ್ಸಾಹ ಹೆಚ್ಚಿಸಿದೆ ಎಂದು ತಿಳಿಸಿದರು.

ಹಿಂದುಳಿದವರು, ಪರಿಶಿಷ್ಟರು, ಅಲ್ಪಸಂಖ್ಯಾತರು ಹೀಗೆ ಎಲ್ಲಾ ಜಾತಿ, ಧರ್ಮದವರೂ ಸ್ಪಂದಿಸುತ್ತಿದ್ದಾರೆ. ವಿದ್ಯಾರ್ಥಿ, ಯುವಜನರು, ರೈತರು, ಮಹಿಳೆಯರು, ಹಿರಿಯರು ಹೀಗೆ ಎಲ್ಲರ ಬಾಯಿಂದ ಬರುತ್ತಿರುವ ಮಾತು ಒಂದೇ. ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಈಗಾಗಲೇ ಕ್ಷೇತ್ರಾದ್ಯಂತ ಹಿರಿಯ ನಾಯಕರಾದ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್, ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಗಾಯತ್ರಿ ಸಿದ್ದೇಶ್ವರ ಪರವಾಗಿ ಪ್ರಚಾರ ಕೈಗೊಳ್ಳಲಾಗಿದೆ. ಪಕ್ಷದ ಎಲ್ಲಾ ಹಿರಿಯ, ಕಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸಂಸದ ಸಿದ್ದೇಶ್ವರರ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು, ದಾವಣಗೆರೆ ಜಿಲ್ಲೆಗೆ ಎಸ್.ಎ.ರವೀಂದ್ರನಾಥ, ಜಿ.ಎಂ.ಸಿದ್ದೇಶ್ವರ ಜೋಡಿ ನೀಡಿದ ಕೊಡುಗೆ, ಯೋಜನೆಗಳನ್ನು ಜನರು ಸ್ಮರಿಸುತ್ತಿದ್ದಾರೆ. ಅದೇ ರೀತಿ ಗಾಯತ್ರಿ ಸಿದ್ದೇಶ್ವರರನ್ನು ಭಾರೀ ಮತಗಳ ಅಂತರದಿಂದ ದಾವಣಗೆರೆ ಕ್ಷೇತ್ರದ ನಮ್ಮೆಲ್ಲಾ ಮತದಾರರ ಗೆಲ್ಲಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು. ದಾವಣಗೆರೆ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಸಲ ಸ್ಪರ್ಧಿಸಿ, ಆಯ್ಕೆಯಾದ ಮಹಿಳಾ ಸಂಸದೆಯಾಗಿ ಗಾಯತ್ರಿ ಸಿದ್ದೇಶ್ವರ ಹೊಸ ಇತಿಹಾಸ ಬರೆಯಲಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಮಾವನವರಿಗೆ 2 ಸಲ ಸಂಸದರಾಗಿ, ತಮ್ಮ ಪತಿ ಜಿ.ಎಂ.ಸಿದ್ದೇಶ್ವರರನ್ನು ನಾಲ್ಕು ಸಲ ಸಂಸದರಾಗಿ ಆಯ್ಕೆ ಮಾಡಿದ ದಾವಣಗೆರೆ ಕ್ಷೇತ್ರದ ಸಮಸ್ತ ಮತದಾರರಿಗೆ ಕೃತಜ್ಞತೆ ಅರ್ಪಿಸುವೆ. ಸಂಸದರೆಂದರೆ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟವರು ತಮ್ಮ ಮಾವ ದಿ.ಜಿ.ಮಲ್ಲಿಕಾರ್ಜುನಪ್ಪನವರು. ಜಿಲ್ಲೆಗೆ ಬಿಜೆಪಿ ಸಚಿವರು, ಶಾಸಕರ ಜೊತೆಗೆ ಕೈಜೋಡಿಸಿ, ದಾವಣಗೆರೆ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ. ಚುನಾವಣೆಯಲ್ಲಿ ಸಮಸ್ತ ಮತದಾರರು ತಮಗೆ ಆಶೀರ್ವದಿಸುವ ಮೂಲಕ ಜನಸೇವೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಹಿರಿಯ ಮುಖಂಡ ಅಣಬೇರು ಜೀವನಮೂರ್ತಿ, ಶೋಷಿತ ವರ್ಗಗಳ ಹಿರಿಯ ಮುಖಂಡ ಬಾಡದ ಆನಂದರಾಜ, ಗೋರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಬಿ.ಟಿ.ಸಿದ್ದಪ್ಪ, ಜಿಪಂ ಮಾಜಿ ಅಧ್ಯಕ್ಷೆ ಸಹನಾ ರವಿ, ಮಹಿಳಾ ಮೋರ್ಚಾದ ಎಚ್.ಸಿ.ಜಯಮ್ಮ, ಸವಿತಾ ರವಿಕುಮಾರ ಮಾಯಕೊಂಡ ಕ್ಷೇತ್ರದ ಅಧ್ಯಕ್ಷ ದೇವೇಂದ್ರಪ್ಪ, ಅಣಜಿ ಗುಡ್ಡೇಶ, ಮಳಲ್ಕೆರೆ ಉಮಾಪತಿ, ಸುಭಾಷ್, ಕಾಶೀಪುರ ಸಿದ್ದೇಶ ಇತರರು ಇದ್ದರು.