ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ನಗರಗಳ ಬೆಳವಣಿಗೆ, ಯೋಜನಾಶೈಲಿ, ವ್ಯಾಪಾರ ವಾಣಿಜ್ಯ ಹಾಗೂ ವಾಸ್ತುಶಿಲ್ಪಗಳು ಅತ್ಯುನ್ನತ ಮಟ್ಟದಲ್ಲಿದ್ದವು.
ಸಂಡೂರು: ಇತಿಹಾಸವೆಂದರೆ ಕೇವಲ ರಾಜರ ಆಳ್ವಿಕೆ ಮತ್ತು ಯದ್ಧಗಳ ಕಥೆಯಲ್ಲ. ಅದು ಅಂದಿನ ಜನಸಾಮಾನ್ಯರ ದಿನ ನಿತ್ಯದ ಬದುಕು ಹಾಗೂ ಬವಣೆಗಳ ನೈಜ ದಾಖಲೆಯೂ ಹೌದು. ಇತಿಹಾಸದ ಇಂತಹ ಆಳವಾದ ಒಳನೋಟ ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸರಿಯಾಗಿ ಗ್ರಹಿಸಿ ದಾಖಲಿಸಬೇಕು ಎಂದು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ ಅಭಿಪ್ರಾಯಪಟ್ಟರು.
ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಜ್ಞಾನ ಸರೋವರದಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ಶನಿವಾರ ಆಯೋಜಿಸಲಾಗಿದ್ದ ವಿಜಯನಗರ ಕಾಲದ ನಗರೀಕರಣ ಎಂಬ ವಿಷಯ ಕುರಿತ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದರು.ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ನಗರಗಳ ಬೆಳವಣಿಗೆ, ಯೋಜನಾಶೈಲಿ, ವ್ಯಾಪಾರ ವಾಣಿಜ್ಯ ಹಾಗೂ ವಾಸ್ತುಶಿಲ್ಪಗಳು ಅತ್ಯುನ್ನತ ಮಟ್ಟದಲ್ಲಿದ್ದವು. ಅಂದಿನ ನಗರ ನಿರ್ಮಾಣ ಕೌಶಲ್ಯ ಹಾಗೂ ವೈಭವ ಸಮಕಾಲೀನ ವಿದೇಶಿ ಪ್ರವಾಸಿಗರು ಮುಕ್ತಕಂಠದಿಂದ ಕೊಂಡಾಡಿದ್ದಾರೆ ಎಂದು ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವದುರ್ಗ ವಿಸ್ತರಣಾ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋವರ್ಧನ ತಮ್ಮ ತಂದೆ ತಾಯಿಗಳಾದ ದಿ.ಎಸ್.ಡಿ. ಆಂಜನೇಯ ಹಾಗೂ ನಾರಾಯಣಮ್ಮ ಸ್ಮರಣಾರ್ಥ ಆಯೋಜಿಸಲಾಗಿದ್ದ ಪ್ರಥಮ ಉಪನ್ಯಾಸ ಸರಣಿ ಉದ್ಘಾಟಿಸಿ, ತಂದೆ ತಾಯಿಗಳ ಆದರ್ಶಗಳು ಮತ್ತು ಅವರು ಕಂಡ ಸಮಾಜಮುಖಿ ಕನಸುಗಳೇ ಇಂತಹ ಅರ್ಥಪೂರ್ಣ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಲು ನಮಗೆ ಸದಾ ಪ್ರೇರಣೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಮಾತನಾಡಿ,ವಿಜಯನಗರ ಕಾಲದ ಸಾಹಿತ್ಯ ಮತ್ತು ಶಾಸನಗಳು ಅಂದಿನ ಶ್ರೀಮಂತ ಸಂಸ್ಕೃತಿ, ಸಮೃದ್ಧ ಜನಜೀವನ ಹಾಗೂ ನಗರ ಬದುಕಿನ ವೈಭವ ಕಣ್ಣಿಗೆ ಕಟ್ಟುವಂತೆ ಬಿಂಬಿಸುತ್ತವೆ. ಇಂತಹ ಚಾರಿತ್ರಿಕ ಮೌಲ್ಯ ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಖನಿಜ ಸಂಸ್ಕರಣೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಎಸ್.ಎಂ.ಶಶಿಧರ್ ಮಾತನಾಡಿ, ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ಹಳೆಯ ಶಾಸನಗಳು ಮತ್ತು ತಾಳೆಗರಿ ಓದುವುದು, ಇದುವರೆಗೂ ಸ್ಪಷ್ಟವಾಗಿ ಗ್ರಹಿಸಲಾಗದ ಪ್ರಾಚೀನ ಭಾಷಾ ಲಿಪಿ ಸುಲಭವಾಗಿ ಡಿಕೋಡ್ ಮಾಡಲು ಸಾಧ್ಯವಾಗಿದೆ. ಇಂದಿನ ಇತಿಹಾಸ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಎಐ ತಂತ್ರಜ್ಞಾನವು ಕ್ರಾಂತಿಕಾರಿ ಪಾತ್ರ ವಹಿಸುತ್ತಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ನರಸಿಂಹಮೂರ್ತಿ ಟಿ.ಎಸ್, ಡಾ.ವಿರುಪಾಕ್ಷಪ್ಪ ಎಂ ಹಾಗೂ ಕನ್ನಡ ವಿಭಾಗದ ಅಧ್ಯಾಪಕ ಡಾ ಮಲ್ಲಯ್ಯ ಸಂಡೂರು, ಡಾ. ಗುಡ್ಡಪ್ಪ, ಡಾ.ರೇಣುಕಾ ಪೂಜಾರಿ, ಕ್ರೀಡಾ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ ಸೇರಿದಂತೆ ಇತಿಹಾಸ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜ್ಯೋತಿ ಪ್ರಾರ್ಥಿಸಿದರು. ಕರಿಬಸವರಾಜ ಸ್ವಾಗತಿಸಿದರು. ರವಿಚಂದ್ರ ನಿರೂಪಿಸಿದರೆ, ಡಿ.ಎಸ್. ಮಂಜುನಾಥ್ ವಂದಿಸಿದರು.
