ಸಾರಾಂಶ
ಕೇಂದ್ರ ಸರ್ಕಾರ ಚಾಲಕರನ್ನು ಪ್ರಪಾತಕ್ಕೆ ತಳ್ಳುವ ಕಾರ್ಯಕ್ಕೆ ಮುಂದಾಗುತ್ತಿದೆ. ಕಾನೂನಿನಲ್ಲಿ ಬದಲಾವಣೆ ತಂದು ಚಾಲಕರ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು.
ಅಂಕೋಲಾ:
ಕೇಂದ್ರ ಸರ್ಕಾರ ಚಾಲಕರನ್ನು ಪ್ರಪಾತಕ್ಕೆ ತಳ್ಳುವ ಕಾರ್ಯಕ್ಕೆ ಮುಂದಾಗುತ್ತಿದೆ. ಕಾನೂನಿನಲ್ಲಿ ಬದಲಾವಣೆ ತಂದು ಚಾಲಕರ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕೆಂದು ಜಿಲ್ಲೆ ಮತ್ತು ತಾಲೂಕಿನ ಹಲವು ಚಾಲಕ-ಮಾಲಕ ಸಂಘಟನೆ, ಚಾಲಕ-ಮಾಲಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಚಾಲಕರನ್ನು ಬೀದಿಗೆ ತಳ್ಳುತ್ತಿರುವ ಕೇಂದ್ರ ಸರ್ಕಾರದ ನೀತಿ ಬದಲಿಸಬೇಕು. ಅಪಘಾತ ವೇಳೆ ಅರಿಯದೆ ದೋಷವಾದಲ್ಲಿ ಚಾಲಕರು ಈ ಶಿಕ್ಷೆ ಅನುಭವಿಸುವುದಾದರೆ ಈ ವೃತ್ತಿಗೆ ತಿಲಾಂಜಲಿ ಹೇಳುವುದು ಒಳಿತು. 10 ವರ್ಷ ಶಿಕ್ಷೆ ಮತ್ತು ₹ 7 ಲಕ್ಷ ದಂಡ ಎಂದರೆ ಚಾಲಕರು ಮನೆ ಕಳೆದುಕೊಂಡು ಬೀದಿಗೆ ಬರುವುದು ಗ್ಯಾರಂಟಿ ಎಂದರು. ತಕ್ಷಣ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸಹಸ್ರ ಸಂಖ್ಯೆಯಲ್ಲಿ ಜಮಾಯಿಸಿದ ಚಾಲಕರು, ಮಾಲಕರು ಅಪಘಾತಕ್ಕೆ ವಿಶೇಷವಾದ ಕಾನೂನು ವಿಧಿಸಿದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.ಪಟ್ಟಣದ ಶಾಂತಾದುರ್ಗಾ ದೇವಿದೇಗುಲದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿತು.ಪ್ರಮುಖ ಸುನೀಲ ನಾಯ್ಕ್ ಹೊನ್ನೇಕೆರಿ, ಟಿಪ್ಪರ್ ಲಾರಿ ಮಾಲಕ-ಚಾಲಕರ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲೆಮನೆ, ಟೆಂಪೋ ಮಾಲಕ-ಚಾಲಕರ ಸಂಘದ ಅಧ್ಯಕ್ಷ ಕಿಶೋರ (ಬಾಳಾ) ನಾಯ್ಕ್, ಸಿದ್ದಿ ವಿನಾಯಕ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಪ್ರವೀಣ ನಾಯ್ಕ್ ಸೇರಿದಂತೆ ಹಲವರು ಇದ್ದರು.