ಹಲವು ವರ್ಷಗಳಿಂದ ಎರಡೂ ಪಕ್ಷದ ಕಾರ್ಯಕರ್ತರು ಸೇರಿಕೊಂಡು ನವಲಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮರಳನ್ನು ಅಕ್ರಮವಾಗಿ ಸಾಗಿಸಿ ಸರ್ಕಾರಕ್ಕೆ ಕೋಟಿಗಟ್ಟಲೇ ವಂಚಿಸುತ್ತರುವುದು ಮುಂದುವರೆದಿತ್ತು.

ಕನಕಗಿರಿ: ರೈತರ ಜಮೀನಿನಲ್ಲಿ ಅಕ್ರಮ ಮರಳು ದಂಧೆಗೆ ಬಳಸಲಾಗುತ್ತಿದ್ದ ಎಂಟು ಹಿಟಾಚಿಗಳನ್ನು ಪೊಲಿಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ನವಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಅಕ್ರಮ ಮರುಳುಗಾರಿಕೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಅರಿತ ಪೊಲೀಸರು ಡಿ. 29ರ ಸೋಮವಾರ ತಡರಾತ್ರಿ ದಾಳಿ ನಡೆಸಿ ಅಕ್ರಮ ಮರುಳು ದಂಧೆ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮೇಲೆ ಕೇಸ್ ದಾಖಲಿಸಿದ್ದಾರೆ.

ಹಲವು ವರ್ಷಗಳಿಂದ ಎರಡೂ ಪಕ್ಷದ ಕಾರ್ಯಕರ್ತರು ಸೇರಿಕೊಂಡು ನವಲಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮರಳನ್ನು ಅಕ್ರಮವಾಗಿ ಸಾಗಿಸಿ ಸರ್ಕಾರಕ್ಕೆ ಕೋಟಿಗಟ್ಟಲೇ ವಂಚಿಸುತ್ತರುವುದು ಮುಂದುವರೆದಿತ್ತು. ಹೀಗೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿದ ದಂಧೆಕೋರರಿಗೆ ಪೊಲೀಸರು ದಾಳಿ ನಡೆಸಿ ಹಿಟಾಚಿ, ಎಂಟು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಈಚನಾಳ, ಬುನ್ನಟ್ಟಿ, ಗುಡದೂರು, ಉದ್ಯಾಳ, ನವಲಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಮರುಳು ದಂಧೆ ರಾಜಾರೋಷವಾಗಿ ನಡೆಯುತ್ತಿರುವ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕಿದ್ದರೂ ಕಣ್ಮುಚ್ಚಿ ಕುಳಿತಿದ್ದರು. ಅಲ್ಲದೇ ನವಲಿ ಸೇರಿದಂತೆ ಸುತ್ತಮುತ್ತಲಿನ ಸ್ಥಳೀಯ ದಂಧೆಕೋರರ ಜತೆ ಸ್ಥಳೀಯ ಠಾಣೆಯ ಪೊಲೀಸರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದರಿಂದ ಗಂಗಾವತಿ ಡಿವೈಎಸ್ಪಿ ನೇತೃತ್ವದ ತಂಡ ಡಿ. 29ರ ತಡರಾತ್ರಿ ದಾಳಿ ನಡೆಸಿ ಅಕ್ರಮ ಮರುಳು ದಂಧೆಗೆ ಕಡಿವಾಣ ಹಾಕಲು ಮುಂದಾಗಿದೆ.

ದಂಧೆಯ ರೂವಾರಿ: ಮರುಳು ದಂಧೆಯ ರೂವಾರಿ ವಿರೂಪಣ್ಣ ಸೇರಿ 8 ಜನರ ಮೇಲೆ ಕೇಸ್. ಸಚಿವ ತಂಗಡಗಿ ಬೆಂಬಲಿಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ನವಲಿ ಗ್ರಾಮದ ನಿವಾಸಿ ವಿರೂಪಣ್ಣ ಕಲ್ಲೂರು ಈ ಅಕ್ರಮ ದಂಧೆಯ ಮುಖ್ಯ ರೂವಾರಿ ಎನ್ನಲಾಗಿದೆ.

ಸ್ಥಳೀಯ ಪೊಲೀಸರಿಗೆ ಮಾಮುಲು ನೀಡಿ ಒಳಗೊಳಗೆ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿವೆ. ಈ ಎಲ್ಲ ಮಾಹಿತಿ ತಿಳಿದ ಡಿವೈಎಸ್ಪಿ ನೇತೃತ್ವದ ತಂಡ ಬಸವನಗೌಡ ಎನ್ನುವವರು ಎ1 ಆರೋಪಿಯಾದರೆ 2ನೇ ಆರೋಪಿ ವಿರೂಪಣ್ಣ ಕಲ್ಲೂರು ಆಗಿದ್ದು, ಪೀರಸಾಬ್‌, ಹನುಮಂತ ಕಲ್ಲೂರು, ಜಡಿಯಪ್ಪ ಭೋವಿ, ಸಣ್ಣ ವಿರೇಶ, ರಾಮಣ್ಣ ಗಾಳಿ, ರಾಮಣ್ಣ ಧನಕಾಯೋರು ಇವರ ಮೇಲೆ ಪೇದೆ ದೇವರಾಜ್ ಎನ್ನುವವರು ಕೇಸ್ ದಾಖಲಿಸಿದ್ದಾರೆ.

ಪೊಲೀಸರ ವೈಫಲ್ಯ: ನಿರಂತರ ಅಕ್ರಮ ಮರುಳು ದಂಧೆ ನಡೆಯುತ್ತಿರುವ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಮಾಹಿತಿ ನೀಡಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫರಾಗಿದ್ದರಿಂದ ಡಿವೈಎಸ್ಪಿ ಸಮ್ಮುಖದಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಇನ್ನು ಈ ಅಕ್ರಮ ದಂಧೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹತ್ತಾರು ವರ್ಷಗಳ ನಂತರ ಇಂಥದ್ದೊಂದು ದಾಳಿ ನಡೆಸಿರುವುದು ದಂಧೆಕೋರರನ್ನು ಸದೆಬಡಿಯುವಲ್ಲಿ ಪೊಲೀಸ್ ಇಲಾಖೆ ಹೆಜ್ಜೆ ಇಟ್ಟಿದೆ.