ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಕುಷ್ಟಗಿ ನಗರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕುಷ್ಟಗಿ: ಪಟ್ಟಣದ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಕುಷ್ಟಗಿ ನಗರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ರಸ್ತೆಗಳು ಕಿರಿದಾಗಿದ್ದು, ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ಪಾದಚಾರಿಗಳು ಸಂಚರಿಸಲು ತೊಂದರೆಯಾಗುತ್ತಿದೆ. ರಸ್ತೆ ಬದಿಯ ಗೂಡಂಗಡಿಗಳು, ಬಂಡಿ ಅಂಗಡಿಗಳು ಹಾಗೂ ವಾಹನಗಳ ನಿಲುಗಡೆಯಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ವಿವರಿಸಿದರು.ವೇದಿಕೆ ಅಧ್ಯಕ್ಷ ದೇವೇಂದ್ರಪ್ಪ ಕಟ್ಟಿಮನಿ ಮಾತನಾಡಿ, ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಸ್ತೆ ಅಗಲೀಕರಣ ಅಗತ್ಯವಾಗಿದೆ. ರಸ್ತೆ ಬದಿಯ ಒತ್ತುವರಿ ತೆರವುಗೊಳಿಸಿ, ಸಾರ್ವಜನಿಕರು ಸುಲಭವಾಗಿ ಸಂಚರಿಸಲು ಅವಕಾಶ ಕಲ್ಪಿಸಬೇಕು. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
2011ರ ಜನಗಣತಿಯ ಪ್ರಕಾರ ಕುಷ್ಟಗಿ ಪಟ್ಟಣದ ಜನಸಂಖ್ಯೆ ಸುಮಾರು 25 ಸಾವಿರವಿತ್ತು. ಪ್ರಸ್ತುತ ಅಂದಾಜಿನ ಪ್ರಕಾರ ಜನಸಂಖ್ಯೆ 40 ಸಾವಿರ ದಾಟಿದೆ. ಸುತ್ತಮುತ್ತಲಿನ ಗ್ರಾಮಗಳಿಂದಲೂ ಪ್ರತಿದಿನ ಸಾವಿರಾರು ಜನರು ವ್ಯಾಪಾರ, ಉದ್ಯೋಗ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಪಟ್ಟಣಕ್ಕೆ ಬರುತ್ತಾರೆ. ಇದರಿಂದ ವಾಹನಗಳ ಸಂಚಾರ ಹೆಚ್ಚಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗುತ್ತಿದೆ ಎಂದರು.ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿರುವುದು ಹಾಗೂ ಗ್ರಾಹಕರು ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಾದಚಾರಿಗಳು ರಸ್ತೆ ದಾಟಲು ಕಷ್ಟಪಡುತ್ತಿದ್ದು, ಅಪಘಾತ ಸಂಭವಿಸುವ ಭಯವೂ ಇದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೇದಿಕೆ ಉಪಾಧ್ಯಕ್ಷ ಪರಸಪ್ಪ ಅಮರಾವತಿ ಮಾತನಾಡಿ, ಈ ಹಿಂದೆ ರಸ್ತೆ ಸರ್ವೆ ಮತ್ತು ಮಾರ್ಕಿಂಗ್ ಕಾರ್ಯ ನಡೆದಿದ್ದರೂ ಅಗಲೀಕರಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ಈ ಕುರಿತು ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದರು.ಲೋಕೋಪಯೋಗಿ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿ ರಸ್ತೆ ಮರುಸರ್ವೆ ನಡೆಸಬೇಕು. ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀಕರಣ ಹಾಗೂ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮುಂದುವರಿಸಿದರೆ ವೇದಿಕೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಮುಖಂಡರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.