ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ/ಕುರುಗೋಡು
ಜಿಲ್ಲೆಯ ಕೈಗಾರಿಕೆಗಳಿಗೆ ಕೊಡುವ ನೀರನ್ನು ಸ್ಥಗಿತಗೊಳಿಸಿ ರೈತರ ಬೆಳೆಗಳಿಗೆ ಪೂರೈಸಬೇಕು ಹಾಗೂ ಡಿ. 15ರ ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆಯಿಂದ ಕೋಳೂರು ಕ್ರಾಸ್‌ನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.ಮಳೆ ಅಭಾವದಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ಮೆಣಸಿನಕಾಯಿ, ಹತ್ತಿ, ತೊಗರಿ, ಜೋಳಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಲಕ್ಷಾಂತರ ರು. ಖರ್ಚು ಮಾಡಿ ಮೆಣಸಿನಕಾಯಿ ಬೆಳೆದ ರೈತರಿಗೆ ಸಮರ್ಪಕವಾಗಿ ನೀರು ದೊರೆಯದೇ ಹೋದರೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಮೆಣಸಿನಕಾಯಿ ಬೆಳೆಯಿಂದಲೇ ಜಿಲ್ಲೆಯಲ್ಲಿ ನೂರಾರು ಕೋಟಿ ರು. ಹಾನಿಯಾಗಲಿದೆ. ಕಳೆದ ಎರಡು ವರ್ಷಗಳಿಂದ ಬೆಳೆದ ಬೆಳೆಗಳಿಗೆ ದರವಿಲ್ಲದೆ ಒದ್ದಾಡುತ್ತಿರುವ ರೈತರು, ಈ ಬಾರಿ ಮುಂಗಾರು ಹಂಗಾಮು ಕೈಕೊಟ್ಟಿದ್ದರಿಂದ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜೆ.ಎಂ. ಬಸವರಾಜಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರ ಹಿತ ಕಾಯುವ ದೃಷ್ಟಿಯಿಂದ ತುಂಗಭದ್ರಾ ಬೋರ್ಡ್‌ನ ಅಧಿಕಾರಿಗಳು ಜಲಾಶಯದ ನೀರನ್ನು ರೈತರಿಗೆ ವಿತರಣೆ ಮಾಡಬೇಕು. ಜಿಲ್ಲೆಯ ಕೈಗಾರಿಕೆಗಳಿಗೆ ನಿಗದಿಗೊಳಿಸಿರುವ ನೀರನ್ನು ರೈತರ ಬೆಳೆಗಳಿಗೆ ನೀಡಬೇಕು. ತುಂಗಭದ್ರಾ ಬೋರ್ಡ್ ಸಭೆಯಲ್ಲಿ ನ. 10ಕ್ಕೆ ಎಚ್‌ಎಲ್ ಕಾಲುವೆಗೆ ನೀರು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವೇಳೆ ಸಭೆಯ ನಿರ್ಧಾರದಂತೆ ನೀರು ಸ್ಥಗಿತಗೊಳಿಸಿದರೆ ಇಡೀ ಬಳ್ಳಾರಿ ಜಿಲ್ಲೆಯ ರೈತರ ನೂರಾರು ಕೋಟಿ ರು. ಮೌಲ್ಯದ ಬೆಳೆಗಳು ಸಂಪೂರ್ಣ ಹಾಳಾಗುವ ಸಾಧ್ಯತೆಯಿದೆ. ಹೀಗಾಗಿ ಅನ್ನದಾತರ ಹಿತ ಕಾಯುವ ದೃಷ್ಟಿಯಿಂದ ಡಿ. 15ರ ವರೆಗೆ ಕಾಲುವೆಗಳಿಗೆ ನೀರು ಹರಿಸಿ, ಬೆಳೆಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಪಾದಯಾತ್ರೆಗೆ ಹರಗಿನಡೋಣಿ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಪಾದಯಾತ್ರೆ ಶುರುಗೊಂಡಿತು. ನೂರಾರು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕೋಳೂರು ಕ್ರಾಸ್ ಮೂಲಕ ಸುಮಾರು 15 ಕಿಮೀ ಕ್ರಮಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ತಲುಪಿದರಲ್ಲದೆ, ಎಸ್ಪಿ ಸರ್ಕಲ್ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ರಸ್ತೆಯಲ್ಲಿ ಕುಳಿತು ಕೆಲಹೊತ್ತು ಧರಣಿ ನಡೆಸಿ, ಕಾಲುವೆಗಳಿಗೆ ನೀರು ಹರಿಸುವಂತೆ ರೈತರು ಘೋಷಣೆಗಳನ್ನು ಕೂಗಿದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಅವರು ಹೋರಾಟ ಬೆಂಬಲಿಸಿ ಪಾಲ್ಗೊಂಡಿದ್ದರು. ಜನಕಲ್ಯಾಣ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೋಳೂರು ಚಂದ್ರಶೇಖರಗೌಡ, ಶಿವಯ್ಯ, ದೊಡ್ಡಬಸಪ್ಪ, ರವಿಕುಮಾರ್, ಎಚ್.ಎಂ. ಅಮರೇಶ್, ಕೊಟ್ರಯ್ಯಸ್ವಾಮಿ, ನಾಗಭೂಷಣ, ಪ್ರಭುಗೌಡ, ಪ್ರತಾಪಗೌಡ ಕಲ್ಲುಕಂಬ ಸೇರಿದಂತೆ ನೂರಾರು ರೈತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.ಎಚ್‌ಎಲ್ ಕಾಲುವೆಗೆ ಡಿ. 15ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.