ಎಚ್‌ಎಂಟಿ ಕಾರ್ಖಾನೆ ಪುನಶ್ಚೇತನ?

| Published : Jun 30 2024, 12:55 AM IST / Updated: Jun 30 2024, 12:56 AM IST

ಸಾರಾಂಶ

ಹರಿಯಾಣದ ಪಿಂಜೋರ್ ನಲ್ಲಿರುವ ಹಿಂದೂಸ್ತಾನ್ ಮಶೀನ್ ಆ್ಯಂಡ್ ಟೂಲ್ಸ್ (ಎಚ್‌ಎಂಟಿ) ಕಾರ್ಖಾನೆಗೆ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ನವದೆಹಲಿ

ಹರಿಯಾಣದ ಪಿಂಜೋರ್ ನಲ್ಲಿರುವ ಹಿಂದೂಸ್ತಾನ್ ಮಶೀನ್ ಆ್ಯಂಡ್ ಟೂಲ್ಸ್ (ಎಚ್‌ಎಂಟಿ) ಕಾರ್ಖಾನೆಗೆ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರ ಮಧ್ಯಾಹ್ನ ದೆಹಲಿಯಿಂದ ಪಿಂಜೋರ್‌ ಗೆ ಭೇಟಿ ನೀಡಿದ ಸಚಿವರು, ಇಡೀ ಕಾರ್ಖಾನೆಯನ್ನು ಒಂದು ಸುತ್ತು ಹಾಕಿ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಿದರು. ಯಂತ್ರಗಳ ಕಾರ್ಯಾಚರಣೆ ವೇಳೆ ಉತ್ಪಾದನಾ ಕ್ಷಮತೆಯನ್ನು ಖುದ್ದು ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದರು. ಬಳಿಕ, ಕಾರ್ಖಾನೆಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿ, ಕಾರ್ಖಾನೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಈ ವೇಳೆ, ಅಧಿಕಾರಿಗಳು ಕಾರ್ಖಾನೆ ಹೊಂದಿರುವ ಆಸ್ತಿ, ಆಸ್ತಿಗಳಿಗೆ ಸಂಬಂಧಪಟ್ಟ ಕೋರ್ಟ್ ವ್ಯಾಜ್ಯಗಳು, ಉದ್ಯೋಗಿಗಳ ಬಿಕ್ಕಟ್ಟು ಇತ್ಯಾದಿ ಅಂಶಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಬಳಿಕ, ಕಾರ್ಖಾನೆಯ ನೌಕರರು, ಕಾರ್ಮಿಕರ ಯೂನಿಯನ್ ಮುಖಂಡರ ಜತೆಗೂ ಚರ್ಚೆ ನಡೆಸಿದರು.

ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರದ್ದು. ಎಲ್ಲರು ಬದ್ಧತೆ, ಕ್ಷಮತೆಯಿಂದ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ಎಲ್ಲರೂ ಕೆಲಸ ಮಾಡೋಣ ಎಂದು ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದರು.