ಹೆಣ ಹೂಳಲು ಭೂಮಿ ಕೊಡಿ: ಡಿಸಿಗೆ ಮನವಿ

| Published : Jun 30 2024, 12:55 AM IST

ಸಾರಾಂಶ

ಶಹಾಪುರ ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಬದುಕು ಕಟ್ಟಿಕೊಳ್ಳಲು ಅಲ್ಲ, ನಮ್ಮವರ ಹೆಣ ಹೂಳಲು ಒಂದಿಷ್ಟು ಭೂಮಿ ಕೊಡಿಸಿ, ಹೆಣಗಳಿಗೆ ಮುಕ್ತಿ ನೀಡಿ ಎಂದು ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಎಸ್.ಎಂ.ಸಾಗರ್ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಶನಿವಾರ, ನಗರದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕೊಂದುಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾಗರ ಇಂತಹ ಮನವಿ ಮೂಲಕ ಗಮನ ಸೆಳೆದರು. ಅನೇಕ ಮನವಿಗಳನ್ನೂ ನೀಡಿದರು ಆಡಳಿತ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ತಾಲೂಕಿನಲ್ಲಿ ಮೂರು ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಜಮೀನು ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಭೂಮಿ ಮೌಲ್ಯಮಾಪನ ಆಧಾರದ ಮೇಲೆ ಭೂಮಿ ಖರೀದಿಸಲಾಗುವುದು. ಆದಷ್ಟು ಬೇಗ ಸ್ಮಶಾನಕ್ಕೆ ಭೂಮಿ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.

ಅನ್ನದಲ್ಲಿ ಹುಳು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ: ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಅನ್ನದಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆ ಮತ್ತು ಮೂಲಭೂತ ಸೌಕರ್ಯಗಳ ಒದಗಿಸಿಕೊಡುವಲ್ಲಿ ತಾಲೂಕು ಅಧಿಕಾರಿ ಶಾರದಾದೇವಿ ಹಾಗೂ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.

ಈ ಕಾರ್ಯಕ್ರಮ ಮುಗಿದ ತಕ್ಷಣ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಂಟಿಯಾಗಿ ಹಾಸ್ಟೆಲ್ ಗೆ ಭೇಟಿ ನೀಡಿ, ಅಲ್ಲಿನ ವಾಸ್ತವ ಸ್ಥಿತಿ ಬಗ್ಗೆ ವರದಿ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಈ ಸಭೆಗೆ ಹಾಜರಾಗದ ತಾಲೂಕು ಅಧಿಕಾರಿಗೆ ನೋಟಿಸ್ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ನಿರ್ದೇಶನ ನೀಡಿದರು.

ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ: ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಅಹವಾಲುಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸುವುದರ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಎಚ್ಚರಿಕೆ ನೀಡಿದರು.

ಜನಸಾಮಾನ್ಯರು ಸ್ಥಳೀಯ ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಹಾಗೂ ಶೀಘ್ರ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪ್ರತಿ ತಿಂಗಳು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರಿ ಜಮೀನು ಒತ್ತುವರಿ: ಗೌಡೂರು ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿರುವ ಸರ್ಕಾರಿ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಹಸೀಲ್ದಾರರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮೂರಿಗೆ ಇದೊಂದೇ ಸರ್ಕಾರಿ ಜಮೀನಿದ್ದು, ಇದು ಸಾರ್ವಜನಿಕರ ಉಪಯೋಗಕ್ಕಾಗಲಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ತಕ್ಷಣ ಎಡಿಎಲ್ ಆರ್ ಜೊತೆ ಗ್ರಾಮಕ್ಕೆ ತೆರಳಿ ಸರ್ವೇ ಮಾಡಿ ವರದಿ ಸಲ್ಲಿಸಿ ಎಂದು ಸೂಚಿಸಿದರು.

ಗ್ರಾಮಾಡಳಿತ ಅಧಿಕಾರಿಗಳು ಗ್ರಾಮಕ್ಕೆ ಬಾರದೆ ಶಹಾಪುರದಲ್ಲಿ ರೂಮ್ ಮಾಡಿಕೊಂಡು ಅಲ್ಲಿಂದ ತಮ್ಮ ಕಾರ್ಯಾಭಾರ ನಡೆಸುತ್ತಿದ್ದಾರೆ. ಗ್ರಾಮದ ಜನರು ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಶಹಾಪುರಕ್ಕೆ ಬಂದು ತಮ್ಮ ಕೆಲಸ ಮಾಡಿಕೊಂಡು ಹೋಗುವ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ 339 ಕೆರೆಗಳ ಸರ್ವೇ ಕಾರ್ಯ ಮಾಡಲಾಗಿದ್ದು, ಒಂದು ಕೆರೆಯಲ್ಲಿ ಶಾಲೆ ಮತ್ತು ಇನ್ನೊಂದು ಕೆರೆಯಲ್ಲಿ ಆಶ್ರಯ ನಿವೇಶನ ಹಂಚಿಕೆ ಮಾಡಿರುವುದರಿಂದ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದ್ದು, ಅವರಿಂದ ನಿರ್ದೇಶನ ಬಂದ ತಕ್ಷಣ ಕ್ರಮ ವಹಿಸಲಾಗುವುದು. ಫೆಬ್ರವರಿಯಿಂದ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಸರ್ವೇ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ 41, ತಾಲೂಕು ಪಂಚಾಯಿತಿ 22, ಆರೋಗ್ಯ ಇಲಾಖೆ 5, ಪೊಲೀಸ್ ಇಲಾಖೆ 3, ನಗರ ಸಭೆ 3 ಜೆಸ್ಕಾಂ 4 ಅರ್ಜಿಗಳು ಸೇರಿದಂತೆ ಒಟ್ಟು 97 ಅರ್ಜಿಗಳು ಸ್ವೀಕೃತಿಯಾದವು. ಅರ್ಜಿಗಳನ್ನು ಅದ್ಯತೆ ಮೇರೆಗೆ ವಿಲೇವಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಡಿವೈಎಸ್‌ಪಿ ಜಾವಿದ್ ಇನಾಮ್ದಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡಿ, ಶಹಾಪುರ ತಾಲೂಕು ಪಂಚಾಯಿತಿ ಇಒ ಸೋಮಶೇಖರ್ ಬಿರಾದಾರ್, ತಹಸೀಲ್ದಾರ್ ಉಮಾಕಾಂತ ಹಳ್ಳೆ ಸೇರಿದಂತೆ ಇತರರಿದ್ದರು.

ಬರ ಪರಿಹಾರ: ರೈತರ ದಾರಿ ತಪ್ಪಿಸಿದ ಅಧಿಕಾರಿಗಳು:

ಯಾದಗಿರಿ: ಜಿಲ್ಲೆಯಲ್ಲಿ ಶೇ.70 ರಷ್ಟು ರೈತರಿಗೆ ಬರ ಪರಿಹಾರ ಹಣ ಜಮಾ ಆಗಿಲ್ಲ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಪರಿವಾಣ ಜನಸ್ಪಂದನ ಸಭೆಯಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು, ಹೀಗಾಗಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ 12 ಕೋಟಿ 85 ಲಕ್ಷ ರು. ಬರ ಪರಿಹಾರ 1,00,490 ರೈತರ ಖಾತೆಗೆ ಜಮೆ ಮಾಡಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ ಇನ್ನೂ ರೈತರಿಗೆ ಜಮೆ ಮಾಡಬೇಕಾಗಿದೆ. ಆಧಾರ್ ಸೀಡಿಂಗ್, ಫ್ರೂಟ್ ತತ್ರಾಂಶ ಮಿಸ್ ಮ್ಯಾಚಿಂಗ್ ಎಫ್ಐಡಿ ಸಮಸ್ಯೆ ಇರುವ ಸಂಬಂಧಪಟ್ಟ ರೈತರನ್ನು ಸಂಪರ್ಕಿಸಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕಾಗಿದೆ. ದಾಖಲೆಗಳ ಕೊಟ್ಟರೆ ಪರಿಶೀಲಿಸುತ್ತೇನೆ ಎಂದರು.