ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ತಿರಂಗಾ ರ‍್ಯಾಲಿ, ಸೈಕಲ್ ಜಾಥಾ ಹಾಗೂ ಬೈಕ್ ಜಾಥಾ ಆಯೋಜಿಸಲಾಗುವುದು
ಕೊಪ್ಪಳ: ಪ್ರತಿ ಮನೆಯಲ್ಲೂ ಧ್ವಜ ಹಾರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಆ.17ರವರೆಗೆ ದೇಶಾದ್ಯಂತ ನಡೆಯಲಿರುವ ಹರ್ ಘರ್ ತಿರಂಗಾ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲು ಕೈಗೊಂಡ ಕ್ರಮಗಳ ಮಾಹಿತಿ ನೀಡಿದ ಅವರು, ಭಾರತ ಸರ್ಕಾರವು 2022ರಲ್ಲಿ ಆರಂಭಿಸಿದ ಹರ್ ಘರ್ ತಿರಂಗಾ ಅಭಿಯಾನದ ಮುಖ್ಯ ಉದ್ದೇಶ ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ತ್ರಿವರ್ಣ ಧ್ವಜದೊಂದಿಗೆ ವೈಯಕ್ತಿಕ ಹಾಗೂ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸುವುದಾಗಿದೆ.ಈ ಹಿನ್ನೆಲೆ ಆ. 15ರಂದು ಆಚರಿಸಲಾಗುವ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಮನೆ, ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿ, ನಿಗಮ-ಮಂಡಳಿ, ಸ್ವಸಹಾಯ ಗುಂಪು, ಸಾರ್ವಜನಿಕ ಉದ್ಯಮ ಸಂಸ್ಥೆ, ಸಂಘ-ಸಂಸ್ಥೆ, ನಾಗರಿಕ ಸೇವಾ ಸಂಸ್ಥೆ, ಶಾಲಾ-ಕಾಲೇಜುಗಳು ಸೇರಿದಂತೆ ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ಸ್ವಯಂಪ್ರೇರಣೆಯಿಂದ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಪ್ರೇಮ ಅಭಿವ್ಯಕ್ತಪಡಿಸುವಂತೆ ಈ ಮೂಲಕ ಕೋರಲಾಗಿದೆ.ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ತಿರಂಗಾ ರ‍್ಯಾಲಿ, ಸೈಕಲ್ ಜಾಥಾ ಹಾಗೂ ಬೈಕ್ ಜಾಥಾ ಆಯೋಜಿಸಲಾಗುವುದು. ವಿವಿಧ ಇಲಾಖೆ, ಸ್ಥಳೀಯ ಸಂಸ್ಥೆ, ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ರಾಷ್ಟ್ರಗೀತೆಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸಾರ್ವಜನಿಕ ಸ್ಥಳ, ಅಂಗಡಿ-ಮಳಿಗೆ, ರೈಲು ಮತ್ತು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಿರಂಗಾ ಪ್ರದರ್ಶನ ಹಾಗೂ ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರಿ ಕಚೇರಿ, ಆಣೆಕಟ್ಟು,ಸೇತುವೆ, ರೈಲು ಮತ್ತು ಬಸ್ ನಿಲ್ದಾಣ, ಆಸ್ಪತ್ರೆ, ಶಾಲಾ-ಕಾಲೇಜು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ದೀಪಾಲಂಕಾರ ಮಾಡಲು ಸೂಚಿಸಲಾಗಿದೆ.
ಇದರೊಂದಿಗೆ ಸಾರ್ವಜನಿಕ ವೃತ್ತ ಹಾಗೂ ಪಾದಚಾರಿ ಮಾರ್ಗಗಳಲ್ಲಿ ತಿರಂಗಾ ವಿಷಯಾಧಾರಿತ ರಂಗೋಲಿ ಚಿತ್ರ ಬಿಡಿಸುವುದು, ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡಿಸುವುದು, ತಿರಂಗಾ ಕುರಿತ ಚಿತ್ರಕಲೆ ಸ್ಪರ್ಧೆ,ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ರಸಪ್ರಶ್ನೆ ಹಾಗೂ ನಿಬಂಧ ಸ್ಪರ್ಧೆ ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಅಭಿಯಾನಕ್ಕೆ ಅಗತ್ಯವಿರುವ ರಾಷ್ಟ್ರಧ್ವಜಗಳ ಸಂಗ್ರಹಣೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಥಳೀಯ ಪುರಸಭೆ ಹಾಗೂ ಪಪಂ ಮತ್ತು ವಿವಿಧ ಸಂಘ-ಸಂಸ್ಥೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಲಾಗಿದೆ.
ಸ್ವಾತಂತ್ರ‍್ಯವು ಅಸಂಖ್ಯಾತ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಫಲವಾಗಿದೆ. ಈ ಹಿನ್ನೆಲೆ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪ್ರೇಮ ಸ್ಮರಿಸಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ಎಲ್ಲ ನಾಗರಿಕರು ಸ್ವಯಂಪ್ರೇರಣೆಯಿಂದ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.