ಸಾರಾಂಶ
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಧ್ವಜಾರೋಹಣ ಮಾಡಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಏಕಶಿಲಾ ಬೆಟ್ಟದಲ್ಲಿ ಬುಧವಾರ ೬೮ ಅಡಿ ಉದ್ದದ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಧ್ವಜಾರೋಹಣ ಮಾಡಿದರಲ್ಲದೆ, ಮುಂದಿನ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದ ವೇಳೆಗೆ ಬೆಟ್ಟದಲ್ಲಿ ಮತ್ತಷ್ಟು ಅಚ್ಚುಕಟ್ಟಾಗಿ ಧ್ವಜಾರೋಹಣ ಸಮಾರಂಭ ಜರುಗಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಶಾಸಕರು ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಐತಿಹಾಸಿಕ ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿ ಕನ್ನಡ ಧ್ವಜಾರೋಹಣ ಮಾಡಿದ ಮೊದಲ ಶಾಸಕ ನಾನಾಗಿದ್ದೇನೆ. ಇದು ನನಗೆ ಹೆಚ್ಚು ಸಂತಸ ಕೊಡುವ ಸಂಗತಿಯಾಗಿದೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಜತನದಿಂದ ಕಾಪಾಡುವ ಕೆಲಸ ಪ್ರತಿಯೊಬ್ಬ ಕನ್ನಡಿಗರಿಂದಾಗಬೇಕು. ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ಕನ್ನಡಕ್ಕಾಗಿ ಹೋರಾಟ ನಡೆಸಿದ ಜಿಲ್ಲೆಯ ಮಹನೀಯರನ್ನು ಸ್ಮರಿಸುವಂತಾಗಬೇಕು ಎಂದರು.ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ನವ ಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ಮಲ್ ಮಂಜುನಾಥ್, ಕನ್ನಡ ಗೆಳೆಯರ ಬಳಗದ ಚಂದ್ರಶೇಖರ ಆಚಾರ್ ಕಪ್ಪಗಲ್, ಪಾಲಿಕೆ ಸದಸ್ಯ ಕುಬೇರ, ಜಗನ್ನಾಥ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.