ಸ್ಲಂ ನಿವಾಸಿಗಳ ಕುಂದು-ಕೊರತೆ ಸಭೆ ನಡೆಸಲು ಮನವಿ

| Published : Aug 08 2024, 01:41 AM IST

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಸ್ಲಂ ಸಮಿತಿಯಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಅವಳಿ ನಗರದ ಅಘೋಷಿತ ಕೊಳಚೆ ಪ್ರದೇಶಗಳ ಘೋಷಣೆ, ಕೊಳೆಗೇರಿ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಸ್ಲಂ ಸಮಿತಿಯಿಂದ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್‌ ಆರ್. ಮಾನ್ವಿ ಮಾತನಾಡಿ, ಅವಳಿ ನಗರದ ಸ್ಲಂ ಪ್ರದೇಶದ ಕುಟುಂಬಗಳ ವಸತಿ, ಮೂಲಭೂತ ಸೌಲಭ್ಯ, ಹಕ್ಕುಪತ್ರ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆ ಮತ್ತು ಇನ್ನೂ ಹಲವಾರು ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಸ್ಲಂ ಜನರ ಪರವಾದ ಹೋರಾಟಗಳನ್ನು ನಡೆಸಿ ಜಿಲ್ಲಾಧಿಕಾರಿ ಮತ್ತು ಸ್ಲಂ ಬೋರ್ಡ್ ಅಧಿಕಾರಿಗಳ ಗಮನಕ್ಕೆ ತಗರಲಾಗುತ್ತಿದೆ. ನಗರದ ಸ್ಲಂ ಪ್ರದೇಶದಲ್ಲಿ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿ ಈಗಾಗಲೇ ಅನೇಕ ಕೊಳೆಗೇರಿ ಪ್ರದೇಶಗಳಲ್ಲಿ ನೂರಾರು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ವಸತಿ ಯೋಜನೆಯ ಕಾಮಗಾರಿಯನ್ನು ಸರಿಯಾಗಿ ಮಾಡಬೇಕು. ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಘೋಷಣೆಗಾಗಿ ಸ್ಥಳೀಯ ನಿವಾಸಿಗಳ ಎಲ್ಲ ದಾಖಲೆಗಳೊಂದಿಗೆ ಹಾಗೂ ನಗರಸಭೆಯಿಂದ ನೀಡಲಾಗಿರುವ ಠರಾವು ಪ್ರತಿ ಮತ್ತು ನಿರಾಕ್ಷೇಪಣಾ ಪತ್ರದೊಂದಿಗೆ ಅರ್ಜಿಗಳನ್ನು ಸಲ್ಲಿಸಿ ಎರಡು ವರ್ಷಗಳಾದರೂ ಈ ವರೆಗೊ ಸ್ಲಂ ಘೋಷಣೆ ಕುರಿತು ಸ್ಲಂ ಬೋರ್ಡ್‌ನಿಂದ ಅಗತ್ಯ ಕ್ರಮ ಕೈಗೊಳ್ಳದೇ ಸ್ಲಂ ಜನ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ. ಪ್ರತಿ ತಿಂಗಳು ಸ್ಲಂ ಜನರ ಸಮಸ್ಯೆಗಳ ಕುರಿತು ಸಭೆ ನಡೆಸಬೇಕೆಂದು ಸ್ಲಂ ಬೋರ್ಡ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಇದರ ಪ್ರಕಾರ ಬರುವ ಸೋಮವಾರದ ಒಳಗೆ ಸಭೆ ಆಯೋಜಿಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಲಂ ನಿವಾಸಿಗಳ ಕುಂದು-ಕೊರತೆಗಳ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ಮಾಡಿದರೆ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ನಗರದ ಸಾವಿರಾರು ಸ್ಲಂ ನಿವಾಸಿಗಳೊಂದಿಗೆ ಸ್ಲಂ ಬೋರ್ಡ್ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಯ ಮುಂದೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೆಹರುನ್ನಿಸಾ ಢಾಲಾಯತ, ಮೈಮುನ ಬೈರಕದಾರ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಕ್ಕುಬಾಯಿ ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಮಲೇಶಪ್ಪ ಕಲಾಲ, ಮೆಹರುನಿಸಾ ಡಂಬಳ, ಚಂದ್ರಪ್ಪ ಲಕ್ಕುಂಡಿ, ದುರ್ಗಪ್ಪ ಮಣವಡ್ಡರ, ಶರಣಪ್ಪ ಬಿಂಗದಕಟ್ಟಿ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ಶಿವಾನಂದ ಶಿಗ್ಲಿ, ರಾಜೇಸಾಬ ಸೈಯದ, ಮಂಜುನಾಥ ಒಂಟಿಯಲಿ ಹಾಗೂ ನೂರಾರು ಸ್ಲಂ ನಿವಾಸಿಗಳು ಇದ್ದರು.