ತೇಜಸ್ವಿ ವೃತ್ತದಲ್ಲಿ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲವನ್ನು ಸ್ವೀಕರಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಯಾಗಿದ್ದು, ವೃತ್ತ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಅಗತ್ಯವಾಗಿದೆ. ಆದರೆ ವ್ಯಾಪಾರಸ್ಥರು ಹಾಗೂ ಕಟ್ಟಡ ಮಾಲೀಕರ ಹಿತವನ್ನೂ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ರಸ್ತೆ ಅಗಲ, ವೃತ್ತದ ವಿನ್ಯಾಸ ಮತ್ತು ಅಗತ್ಯವಿರುವ ಜಾಗದ ಕುರಿತು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟವಾಗಿ ಪರಿಶೀಲಿಸಬೇಕು. ಏಕಾಏಕಿ ತೆರವುಗೊಳಿಸಿದರೆ ತೊಂದರೆಯಾಗಲಿದ್ದು, ಕಾನೂನುಬದ್ಧ ಪ್ರಕ್ರಿಯೆ ಹಾಗೂ ವಾಸ್ತವ ಸ್ಥಿತಿಯನ್ನು ಪರಿಗಣಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತೇಜಸ್ವಿ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆ ಅಗಲೀಕರಣ ಮತ್ತು ಒತ್ತುವರಿ ತೆರವು ಕಾರ್ಯಕ್ಕೂ ಮುನ್ನ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ವಾಸ್ತವ ಸ್ಥಿತಿ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

ತೇಜಸ್ವಿ ವೃತ್ತದಲ್ಲಿ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲವನ್ನು ಸ್ವೀಕರಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಯಾಗಿದ್ದು, ವೃತ್ತ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಅಗತ್ಯವಾಗಿದೆ. ಆದರೆ ವ್ಯಾಪಾರಸ್ಥರು ಹಾಗೂ ಕಟ್ಟಡ ಮಾಲೀಕರ ಹಿತವನ್ನೂ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ರಸ್ತೆ ಅಗಲ, ವೃತ್ತದ ವಿನ್ಯಾಸ ಮತ್ತು ಅಗತ್ಯವಿರುವ ಜಾಗದ ಕುರಿತು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟವಾಗಿ ಪರಿಶೀಲಿಸಬೇಕು. ಹಲವು ವ್ಯಾಪಾರಸ್ಥರು ಬ್ಯಾಂಕ್ ಹಾಗೂ ವಿವಿಧ ಸಂಘಗಳಿಂದ ಸಾಲ ಪಡೆದು, ಖಾತೆ ಮತ್ತು ತೆರಿಗೆ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಏಕಾಏಕಿ ತೆರವುಗೊಳಿಸಿದರೆ ತೊಂದರೆಯಾಗಲಿದ್ದು, ಕಾನೂನುಬದ್ಧ ಪ್ರಕ್ರಿಯೆ ಹಾಗೂ ವಾಸ್ತವ ಸ್ಥಿತಿಯನ್ನು ಪರಿಗಣಿಸಬೇಕು ಎಂದು ಹೇಳಿದರು.ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಹಾಗೂ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಸೆ. 2ರಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸ್ಥಳೀಯರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ರಸ್ತೆ ಅಗಲೀಕರಣಕ್ಕೆ ವ್ಯಾಪಾರಸ್ಥರು ವಿರೋಧಿಸುತ್ತಿಲ್ಲ, ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿಯ ಜತೆಗೆ ತಮ್ಮ ಜೀವನೋಪಾಯಕ್ಕೂ ಅವಕಾಶ ಕಲ್ಪಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ ಎಂದರು.ತೇಜಸ್ವಿ ವೃತ್ತದ ವ್ಯಾಪಾರಿ ವಿಂಪು ಸಂತೋಷ ಮಾತನಾಡಿ, ಹಲವು ವರ್ಷಗಳಿಂದ ಬೇಕರಿ ಸೇರಿದಂತೆ ವಿವಿಧ ವ್ಯಾಪಾರ ನಡೆಸುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದು, ಬ್ಯಾಂಕ್ ಹಾಗೂ ಸಂಘಗಳಿಂದ ಸಾಲ ಪಡೆದು ಅಂಗಡಿಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯವಿರುವಷ್ಟು ಜಾಗವನ್ನು ನಿಯಮಾನುಸಾರ ಬಿಟ್ಟುಕೊಡಲು ಸಿದ್ಧರಿದ್ದು, ತೆರವಿಗೆ ಸೂಕ್ತ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿನ್ ಪ್ರಸಾದ್, ಸಫಿರ್‌, ಲೋಹಿತ್ ಸೇರಿದಂತೆ ಇನ್ನಿತರರು ಇದ್ದರು.