ಸಾರಾಂಶ
ನರೇಗಾ ಕಾಮಗಾರಿ ನಡೆಯಬೇಕಾದರೆ ಮೊದಲು ವಾರ್ಡ್‌ಗಳ ಸಭೆ ಮಾಡಿ, ಜನರ ಸಮಸ್ಯೆ ಆಲಿಸಬೇಕು.
ಹನುಮಸಾಗರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ ಹನುಮಸಾಗರ
ನರೇಗಾ ಕಾಮಗಾರಿ ನಡೆಯಬೇಕಾದರೆ ಮೊದಲು ವಾರ್ಡ್‌ಗಳ ಸಭೆ ಮಾಡಿ, ಜನರ ಸಮಸ್ಯೆ ಆಲಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಶಂಕರ ನಾಯಕ ಹೇಳಿದರು.ಇಲ್ಲಿನ ಗ್ರಾಪಂಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
೨೦೨೪-೨೫ ನೇ ಸಾಲಿನ ನರೇಗಾ ಕ್ರಿಯಾ ಯೋಜನೆ ಸಿದ್ಧಗೊಳ್ಳಬೇಕಾದರೆ ಮೊದಲು ಘನ ತ್ಯಾಜ್ಯ ವಿಲೇವಾರಿ ಘಟಕ, ಕೂಸಿನ ಮನೆ, ಗ್ರಂಥಾಲಯ ಸಿದ್ಧಗೊಳಿಸಬೇಕು. ಇವುಗಳ ಬಗ್ಗೆ ಬೇಜವಾಬ್ದಾರಿ ತೊರಿದರೆ ಇನ್ನುಳಿದ ಕಾಮಗಾರಿಗಳಿಗೆ ತೊಂದರೆಯಾಗುತ್ತದೆ. ಇನ್ನೂ ಮುಂದೆ ಆನ್‌ಲೈನ್ ಮೂಲಕ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಯ ಮೊಬೈಲ್ ನಂಬರ್ ಇರಬೇಕು. ಇನ್ನೂ ಸಾಮಾನ್ಯ ಸಭೆ ನಡೆಸುವಾಗ ಈ ಹಿಂದೆ ನಡೆದ ಸಭೆಯ ನಡುವಳಿಗಳ ಬಗ್ಗೆ ಮೆಲಕು ಹಾಕಬೇಕು ಎಂದರು.ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಮಾತನಾಡಿ, ೨೦೨೪-೨೫ನೇ ಸಾಲಿನ ೧೫ ಹಣಕಾಸು ಯೋಜನೆಯಡಿಯಲ್ಲಿ ₹೬೮ ಲಕ್ಷ ೯೫ ಸಾವಿರ ಅನುದಾನ ಹಂಚಿಕೆ ಮಾಡಲಾಗಿದೆ. ಇದನ್ನು ವಾರ್ಡ್ ಪ್ರಕಾರ ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದು ಎಂದರು. ಮಧ್ಯಾಹ್ನ ಸಭೆ:
ಸಾಮಾನ್ಯ ಸಭ್ಯೆ ಬೆಳಗ್ಗೆ 11.30ಕ್ಕೆ ನಡೆಯಬೇಕಿತ್ತು. ಆದರೆ ಮಧ್ಯಾಹ್ನ 1 ಗಂಟೆಯಾದರೂ ಪ್ರಾರಂಭವಾಗಲಿಲ್ಲ. 38 ಜನ ಗ್ರಾಪಂ ಸದಸ್ಯರಲ್ಲಿ ಕನಿಷ್ಠ 20 ಜನ ಗ್ರಾಪಂ ಸದಸ್ಯರು ಹಾಜರಾಗಬೇಕು. ಆದರೆ ಕೊರಂ ಭರ್ತಿಯಾಗದ ಕಾರಣ ಪ್ರಾರಂಭವಾಗಲಿಲ್ಲ. ನಾವು ನಮ್ಮ ಮನೆ ಕೆಲಸ ಹಾಗೂ ಮಕ್ಕಳನ್ನು ಬಿಟ್ಟು ಬಂದಿದ್ದೇವೆ ಊಟದ ಸಮಯವಾದರೂ ಸಭೆ ಪ್ರಾರಂಭವಾಗುತ್ತಿಲ್ಲ ಎಂದು ಮಹಿಳಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಮಧ್ಯಾಹ್ನ 1 ಗಂಟೆಯ ನಂತರ ಕಾಟಾಚಾರಕ್ಕೆ ಎಂಬಂತೆ ಸಾಮಾನ್ಯ ಸಭೆ ನಡೆಸಲಾಯಿತು.
ಪಿಡಿಒ ದೇವೇಂದ್ರಪ್ಪ ಕಮತರ, ಲೆಕ್ಕಿಗರಾದ ವೀರನಗೌಡ ಪಾಟೀಲ್, ಮಹಾಂತಯ್ಯ ಕೋಮಾರಿ, ನರೇಗಾ ಎಂಜಿನಿಯರ್ ಗುರಲಿಂಗಪ್ಪ ಅಂಗಡಿ, ಬಿಎಫ್‌ಟಿ ಮಾರುತಿ ಸಾಳುಂಕಿ, ಗ್ರಾಪಂ ಸದಸ್ಯರಾದ ಮಂಜುನಾಥ ಹುಲ್ಲೂರ, ಶ್ರೀಶೈಲ್ ಮೋಟಗಿ, ಚಂದ್ರು ಬೆಳಗಲ್, ರಮೇಶ ಬಡಿಗೇರ, ಶಿವಪ್ಪ ಕಂಪ್ಲಿ, ಭವಾನಿಸಾ ಪಾಟೀಲ್, ಮಹ್ಮದ ರೀಯಾಜ್ ಖಾಜಿ, ಬಸವರಾಜ ಹಕ್ಕಿ, ರಮೇಶ ಬಡಿಗೇರ, ಪ್ರಶಾಂತ ಕುಲಕರ್ಣಿ ಹಾಗೂ ಮಹಿಳಾ ಸದಸ್ಯರು ಇದ್ದರು.