ರಾಣಿಬೆನ್ನೂರಲ್ಲಿ ನೀರಿನ ಬರದಲ್ಲೂ ಹೋಳಿ ಸಂಭ್ರಮ

| Published : Mar 28 2024, 12:49 AM IST

ಸಾರಾಂಶ

ನೀರಿನ ತೀವ್ರ ಬರದಲ್ಲೂ ಬುಧವಾರ ರಾಣಿಬೆನ್ನೂರು ನಗರದಲ್ಲಿ ಬಣ್ಣದಾಟವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಯುವಕರು ಬಣ್ಣದಾಟವಾಗಿ ಸಂಭ್ರಮಿಸಿದರು.

ರಾಣಿಬೆನ್ನೂರು: ನೀರಿನ ತೀವ್ರ ಬರದಲ್ಲೂ ಬುಧವಾರ ನಗರದಲ್ಲಿ ಬಣ್ಣದಾಟವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆಯಿಂದಲೆ ಚಿಣ್ಣರು ರಾಜೇಶ್ವರಿನಗರ, ಮೃತ್ಯುಂಜಯನಗರ, ಹೌಸಿಂಗ್ ಬೋರ್ಡ್ ಕಾಲನಿ, ಗೌರಿಶಂಕರನಗರ, ದೊಡ್ಡಪೇಟೆ, ಕುರುಬಗೇರಿ, ಮಾರುತಿನಗರ, ಕೋಟೆ ಮುಂತಾದ ಪ್ರದೇಶಗಳಲ್ಲಿ ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬ ಆರಂಭಿಸಿದರು. ಹತ್ತು ಗಂಟೆ ನಂತರ ಯುವಕರು, ವಯಸ್ಕರು ರಂಗಿನಾಟಕ್ಕೆ ಮುಂದಾದರು. ಹೌಸಿಂಗ್ ಬೋರ್ಡ್ ಕಾಲನಿ, ವೀರಭದ್ರೇಶ್ವರನಗರ, ದೊಡ್ಡಪೇಟೆ ಮುಂತಾದ ಪ್ರದೇಶಗಳಲ್ಲಿ ಮಹಿಳೆಯರು ಕೂಡ ಹೆಚ್ಚಿನ ಉತ್ಸಾಹದಿಂದ ಬಣ್ಣದಾಟದಲ್ಲಿ ನಿರತರಾಗಿದ್ದರು.

ಬೈಕ್ ರ‍್ಯಾಲಿ: ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೈಕುಗಳ ಮೇಲೆ ತಿರುಗಾಡುತ್ತ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಲ್ಲಿ ಯುವಕರು ಹಲಗೆ ಬಾರಿಸುತ್ತಾ ಪರಸ್ಪರ ಬಣ್ಣ ಎರಚುತ್ತಾ ಸಂಭ್ರಮಿಸಿದರು.

ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹರಿಜನಕೇರಿಯಿಂದ ಬೆಂಕಿ ತಂದ ನಂತರ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಕಾಮಣ್ಣ ಮೂರ್ತಿಗಳನ್ನು ದಹಿಸಲಾಯಿತು. ದುರ್ಗಾ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ಕಾಮನ ಪ್ರತಿಕೃತಿಗೆ ಮಧ್ಯಾಹ್ನ 1.30ರ ಸುಮಾರು ಬೆಂಕಿ ಹಚ್ಚಲಾಯಿತು. ಆನಂತರ ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮನ ಮೂರ್ತಿಗೆ ಬೆಂಕಿ ಹಚ್ಚುವ ಮೂಲಕ ಬಣ್ಣದಾಟಕ್ಕೆ ತೆರೆ ಎಳೆಯಲಾಯಿತು.

ತಿಂಡಿ ವ್ಯವಸ್ಥೆ: ನಗರದ ಸಂಗಮ್ ಸರ್ಕಲ್ ಬಳಿಯ ಆಟೋ ಸ್ಟ್ಯಾಂಡ್‌ ವತಿಯಿಂದ ಬಣ್ಣದಾಟದಲ್ಲಿ ತೊಡಗಿದವರಿಗಾಗಿ ಉಚಿತ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್: ಹೋಳಿ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಹೋಳಿ ನಿಮಿತ್ತ ಚಿಕ್ಕೇರೂರಲ್ಲಿ ಮದ್ಯ ಮಾರಾಟ ನಿಷೇಧ:

ಹೋಳಿ ಹಬ್ಬದ ಪ್ರಯುಕ್ತ ಹಾವೇರಿಯ ಚಿಕ್ಕೇರೂರು ಗ್ರಾಮದಲ್ಲಿ ರಂಗಪಂಚಮಿ ದಿನ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಮಾ. ೨೯ರ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೨ ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.