ದತ್ತಪೀಠದ ಬಳಿ ಹೋಳಿ ಆಚರಣೆ

| Published : Mar 15 2025, 01:07 AM IST

ಸಾರಾಂಶ

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಹೊರ ವಲಯದಲ್ಲಿ ಹೋಳಿ ಹುಣ್ಣಿಮೆ ಪೂಜೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಹೋಳಿಯನ್ನು ಆಚರಿಸಿದರು.

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಹೊರ ವಲಯದಲ್ಲಿ ಹೋಳಿ ಹುಣ್ಣಿಮೆ ಪೂಜೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಹೋಳಿಯನ್ನು ಆಚರಿಸಿದರು.

ಪ್ರತಿ ಹುಣ್ಣಿಮೆ ದಿನದಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದು ತೆರಳುತ್ತಿದ್ದಾರೆ. ಆದರೆ, ಶುಕ್ರವಾರ ಕಾರ್ಯಕರ್ತರು ಹುಣ್ಣಿಮೆ ಪೂಜೆ ಜತೆಗೆ ಬಣ್ಣದ ಓಕುಳಿ ಪರಸ್ಪರ ಎರಚಿ ಹೋಳಿ ಹಬ್ಬ ಆಚರಿಸಿದರು. ದತ್ತಪೀಠದ ಹೊರ ವಲಯದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ನಡೆದಿದೆ.

ಭಜರಂಗದಳದ ಮುಖಂಡ ರಘು ಸಕಲೇಶಪುರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಬೆಳಿಗ್ಗೆ ದತ್ತಪೀಠಕ್ಕೆ ಆಗಮಿಸಿದ್ದು, ಗುಹೆಯೊಳಗೆ ವಿಐಪಿ ದ್ವಾರದಲ್ಲಿ ಪ್ರವೇಶ ಮಾಡಲು ಅವಕಾಶ ನೀಡಬೇಕೆಂದು ಗೇಟ್‌ನ ಮುಂಭಾಗದಲ್ಲಿ ಸೇರಿಕೊಂಡರು. ಆದರೆ, ಇದಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ, ಈ ಸಂದರ್ಭದಲ್ಲಿ ವಾಗ್ವಾದ ನಡೆಯಿತು.

ಇದೊಂದು ಹೊಸ ಆಚರಣೆ, ಕೋರ್ಟ್‌ನ ಆದೇಶ ಉಲ್ಲಂಘನೆಯಾಗುತ್ತದೆ. ಪಾದುಕೆಗಳ ದರ್ಶನ ಪಡೆಯಲು ಅವಕಾಶ ನೀಡ ಲಾಗುವುದು. ಆದರೆ, ನಿಷೇಧಿತ ಪ್ರದೇಶದಲ್ಲಿ ಬಣ್ಣ ಎರಚಿ ಹೋಳಿ ಆಚರಿಸಲು ಅನುಮತಿ ನೀಡುವುದಿಲ್ಲ ಎಂದು ಮುಜರಾಯಿ ಅಧಿಕಾರಿಗಳು ಹೇಳಿದರು.

ದತ್ತ ಪಾದುಕೆಗಳ ದರ್ಶನದ ಬಳಿಕ ಗಾಳಿಕೆರೆ ಮಾರ್ಗದಲ್ಲಿರುವ ಹೋಮದ ಶೆಡ್‌ನಲ್ಲಿ ಕೆಲ ಹೊತ್ತು ಬಣ್ಣವನ್ನು ಪರಸ್ಪರ ಎರಚಿದ ನಂತರ ವಾಪಸ್‌ ತೆರಳಿದರು.ಬಂದೋಬಸ್ತ್‌:

ಶನಿವಾರದಿಂದ ಮೂರು ದಿನಗಳ ಕಾಲ ದತ್ತಪೀಠದಲ್ಲಿ ಉರುಸ್‌ ನಡೆಯಲಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಆಗಮಿಸಲಿದ್ದಾರೆ.

ಉರುಸ್‌ ಹಿನ್ನಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಧಾರ್ಮಿಕ ಕೇಂದ್ರಗಳು, ಸೂಕ್ಷ್ಮ ಪ್ರದೇಶ ಹಾಗೂ ದತ್ತಪೀಠ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

14 ಕೆಸಿಕೆಎಂ 3ದತ್ತಪೀಠದ ಹೊರ ವಲಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪರಸ್ಪರ ಬಣ್ಣವನ್ನು ಎರಚುವ ಮೂಲಕ ಹೋಳಿಯನ್ನು ಆಚರಿಸಿದರು.