ಮರಿಯಮ್ಮನಹಳ್ಳಿ ಸಂಭ್ರಮದ ಹೋಳಿ

| Published : Mar 27 2024, 01:07 AM IST

ಸಾರಾಂಶ

ಮರಿಯಮ್ಮನಹಳ್ಳಿ ಸೇರಿದಂತೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಯುವಕರು ಮತ್ತು ಚಿಕ್ಕಮಕ್ಕಳು ಹಲಗೆ ವಾದನಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಮರಿಯಮ್ಮನಹಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಮಂಗಳವಾರ ಸಂಭ್ರಮ, ಸಂತೋಷದಿಂದ ಆಚರಿಸಲಾಯಿತು. ಸೋಮವಾರ ರಾತ್ರಿ ಓಣಿಗಳಲ್ಲಿ ಕಾಮದಹನ ಮಾಡಿದ ಯುವಕರು ರಾತ್ರಿ ಕೆಲ ಹೊತ್ತು ಹಲಗೆಗಳನ್ನು ಬಾರಿಸುತ್ತ ಕೇಕೆ ಹಾಕುತ್ತಾ, ಕೆಲಕಡೆ ವಿವಿಧ ವಾದ್ಯಗಳ ತಾಳಕ್ಕೆ ಕಕ್ಕಂತೆ ಕುಣಿದು ಕುಪ್ಪಳಿಸಿದರು. ಮರಿಯಮ್ಮನಹಳ್ಳಿ ಸೇರಿದಂತೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಯುವಕರು ಮತ್ತು ಚಿಕ್ಕಮಕ್ಕಳು ಹಲಗೆ ವಾದನಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸುತ್ತಿದ್ದರು.

ಬೆಳಗ್ಗೆಯಿಂದಲೇ ಪಟ್ಟಣದ ಓಣಿ ಓಣಿಗಳಲ್ಲಿ ಯುವಕರು, ಚಿಕ್ಕಮಕ್ಕಳು ಹಾಗೂ ಕೆಲ ಮಹಿಳೆಯರು ಒಬ್ಬರಿಗೊಬ್ಬರು ಬಣ್ಣ ಎರಚುವ ಹೋಳಿ ಆಟದಲ್ಲಿ ತೊಡಗಿಕೊಂಡಿದ್ದರು. ಕೆಲ ಯುವಕರು ಕೋಳಿ ಮೊಟ್ಟೆಗಳನ್ನು ಹಾಗೂ ಟಮೋಟಾಗಳನ್ನು ತೆಲೆಯ ಮೇಲೆ ಒಡೆದು ಬಣ್ಣ ಹಾಕುತ್ತಾ, ಸ್ನೇಹಿತರ ಮೈಮೇಲೆ ಇರುವ ಬಟ್ಟೆಗಳನ್ನು ಹರಿದು ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು.

ಪಟ್ಟಣದಲ್ಲಿ ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಕೆಲ ಅಂಗಡಿ, ಹೋಟೆಲ್‌ಗಳು ವ್ಯಾಪಾರ ವಹಿವಾಟ ಬಂದ್‌ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು, ಹೋಟೆಲ್‌ಗಳನ್ನು ಸೇರಿದಂತೆ ಇತರೆ ವ್ಯಾಪಾರಗಳನ್ನು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸಿದರು.

ಕೊಟ್ಟೂರಿನಲ್ಲಿ ಯುವಕರ ಬಣ್ಣದೋಕಳಿಕನ್ನಡಪ್ರಭ ವಾರ್ತೆ ಕೊಟ್ಟೂರುಹೋಳಿ ಹಬ್ಬವನ್ನು ಪಟ್ಟಣದಲ್ಲಿ ಮಂಗಳವಾರ ಯುವಕರು ಮತ್ತು ಚಿಣ್ಣರು ಸಂಭ್ರಮದಿಂದ ಆಚರಿಸಿದರು. ವಿವಿಧ ಬಗೆಯ ಬಣ್ಣಗಳನ್ನು ಪರಸ್ಪರ ಎರಚಿಕೊಂಡರಲ್ಲದೆ ಮುಖಗಳಿಗೆ ಹಚ್ಚಿಕೊಂಡು ಕುಣಿದಾಡಿ ಕೇಕೆ ಹಾಕುತ್ತಾ ನಲಿದಾಡಿದರು. ಕಾಮದೇವನ ಮೂರ್ತಿಯನ್ನು ಪಟ್ಟಣದಲ್ಲಿ ಎಲ್ಲಿಯೂ ಪ್ರತಿಷ್ಠಾಪಿಸಿರಲಿಲ್ಲವಾದರೂ ಬಣ್ಣದೋಕಳಿ ಆಟವನ್ನು ಮಾತ್ರ ಆಡಿದರು. ಗುಂಪು ಗುಂಪಾಗಿ ಯುವಕರು ಕೆಲ ಪ್ರದೇಶಗಳಲ್ಲಿ ಬೆಳಗ್ಗೆ ೧೧ ಗಂಟೆಯಾದರೂ ಬಣ್ಣ ಎರೆಚುವುದನ್ನು ಮುಂದುವರಿಸಿದರಲ್ಲದೆ ಕೆಲವರಿಗೆ ಒತ್ತಾಯ ಪೂರ್ವಕವಾಗಿ ಬಣ್ಣವನ್ನು ಎರಚಿ ಅತಿರೇಕದ ವರ್ತನೆ ತೋರಿದ್ದು ಜನತೆಯಲ್ಲಿ ಬೇಸರ ತಂದಿತು.