ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಹಾವೇರಿ ಜನತೆ

| Published : Mar 16 2025, 01:48 AM IST

ಸಾರಾಂಶ

ಹಾವೇರಿ ನಗರದಲ್ಲಿ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು. ಹಲಗೆ ಬಾರಿಸುತ್ತ, ರಂಗುರಂಗಿನ ಬಣ್ಣ ಎರಚುತ್ತ ಯುವಕರು, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಬೆಳಗ್ಗೆಯಿಂದಲೇ ಯುವಕರು ಗುಂಪು ಹಲಗೆ ಬಾರಿಸುತ್ತ ಬೈಕ್‌ಗಳಲ್ಲಿ ನಗರದ ತುಂಬೆಲ್ಲ ಸಂಚರಿಸಿ ಸಿಳ್ಳೆ, ಕೇಕೆ ಹಾಕಿ ಖುಷಿ ಪಟ್ಟರು. ಸುಡು ಬಿಸಿಲನ್ನೂ ಲೆಕ್ಕಿಸದೇ ಯುವಕರ ದಂಡು ಹಲಗೆ ಬಾರಿಸುತ್ತ, ಬಣ್ಣ ಎರಚುತ್ತ ಸಂತಸಪಟ್ಟರು.

ಹಾವೇರಿ: ನಗರದಲ್ಲಿ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು. ಹಲಗೆ ಬಾರಿಸುತ್ತ, ರಂಗುರಂಗಿನ ಬಣ್ಣ ಎರಚುತ್ತ ಯುವಕರು, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಬಣ್ಣದ ಓಕುಳಿಯಲ್ಲಿ ಮಿಂದೆದ್ದರು.

ಬೆಳಗ್ಗೆಯಿಂದಲೇ ಯುವಕರು ಗುಂಪು ಹಲಗೆ ಬಾರಿಸುತ್ತ ಬೈಕ್‌ಗಳಲ್ಲಿ ನಗರದ ತುಂಬೆಲ್ಲ ಸಂಚರಿಸಿ ಸಿಳ್ಳೆ, ಕೇಕೆ ಹಾಕಿ ಖುಷಿ ಪಟ್ಟರು. ಸುಡು ಬಿಸಿಲನ್ನೂ ಲೆಕ್ಕಿಸದೇ ಯುವಕರ ದಂಡು ಹಲಗೆ ಬಾರಿಸುತ್ತ, ಬಣ್ಣ ಎರಚುತ್ತ ಸಂತಸಪಟ್ಟರು. ಮಕ್ಕಳು ಪಿಚಕಾರಿ ಹಾರಿಸುತ್ತ ಸಂಭ್ರಮಿಸಿದರು. ಪ್ರತಿ ಓಣಿಯಲ್ಲೂ ಹಾಡು ಹಚ್ಚಿ ಹೆಜ್ಜೆ ಹಾಕುತ್ತ ಬಣ್ಣ ಎರಚುತ್ತ ಮಹಿಳೆಯರು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.

ಮೊದಲು ಸರ್ಕಾರಿ ಚಾವಡಿಯಲ್ಲಿ ಪ್ರತಿಷ್ಠಾಪಿಸಿದ ರತಿ-ಕಾಮರ ಮೂರ್ತಿ ಬಳಿಕ ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ರತಿ-ಕಾಮರ ಮೂರ್ತಿಗಳನ್ನು ದಹಿಸಲಾಯಿತು. ಆನಂತರ ರಂಗ ಪಂಚಮಿ ಕಳೆಕಟ್ಟಿತ್ತು. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಗುಂಪು ಗುಂಪಾಗಿ ಸೇರಿ ತಮಟೆ ಬಾರಿಸುವುದು, ಬಣ್ಣ ಎರಚುವುದರಲ್ಲಿ ಮಗ್ನರಾಗಿ ಬಣ್ಣದಲ್ಲಿಯೇ ಮಿಂದೆದ್ದರು.

ಇಡೀ ದಿನ ತಮಟೆ ಬಾರಿಸುವುದು, ಬಣ್ಣ ಎರಚುವುದು ಹಾಗೂ ಕಾಮದಹನ ಕಾರ್ಯಕ್ರಮಗಳು ಶಾಂತಿ ಸೌಹಾರ್ದಯುತವಾಗಿ ನಡೆದವು. ಕೆಲವರು ಸೋಗಿನ ಬಂಡಿಯಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆದರು. ಯುವಕರು ಹೆಣ್ಣು ಮಕ್ಕಳ ಉಡುಪು, ವಿಗ್ ಧರಿಸಿ ನೋಡುಗರನ್ನು ರಂಜಿಸಿದರು. ದಾರಿಯುದ್ದಕ್ಕೂ ಬಣ್ಣ ಎರಚಿ ನಗರ ತುಂಬೆಲ್ಲ ರಂಗು ಮೂಡಿಸಿದರು.

ನಗರದ ಗ್ರಾಮದೇವತೆ ಓಣಿಯಿಂದ ಆರಂಭವಾದ ಸೋಗಿನ ಬಂಡಿ ನಗರದ ಗೌಡರ ಓಣಿ, ದೇಸಾಯಿ ಕೆರಿ, ಕಲ್ಲು ಮಂಟಪ ರಸ್ತೆ, ದೊಡ್ಡ ಬಸವೇಶ್ವರ ದೇವಸ್ಥಾನ, ಬಸ್ತಿ ಗಲ್ಲಿ, ಎಂಜಿ ರಸ್ತೆ, ಗೌಳಿ ಗಲ್ಲಿ ಮೂಲಕ ಸಿದ್ದದೇವಪುರಕ್ಕೆ ಪ್ರವೇಶಿಸಿ ಏಲಕ್ಕಿ ಓಣಿ, ಗುಜ್ಜರ ದೇವಸ್ಥಾನ, ಕುಂಬಾರರ ಓಣಿ, ಪುರದ ಓಣಿ, ಹತ್ತರಗೇರಿ, ಎಂಜಿ ರಸ್ತೆ, ಮೇಲಿನ ಪೇಟೆ, ಹಳೆ ಅಂಚೆ ಕಚೇರಿ ಮೂಲಕ ದ್ಯಾಮವ್ವ ಗುಡಿಗೆ ತಲುಪಿ ಮೆರವಣಿಗೆ ಪೂರ್ಣಗೊಂಡಿತು.

ಸೋಗಿನ ಬಂಡಿಗಳ ಮೆರವಣಿಗೆ ಸಂದರ್ಭದಲ್ಲಿ ಬಣ್ಣ ಬಳಿಸಿಕೊಳ್ಳಲು ನಿರಾಕರಿಸುವವರನ್ನು ಹೊತ್ತುಕೊಂಡು ಬಂದು ಬಂಡಿಯ ಕೆಳಗೆ ನಿಲ್ಲಿಸಿ ಬಣ್ಣದ ನೀರನ್ನು ತಲೆಯ ಮೇಲೆ ಸುರಿಯುತ್ತಿರುವ ದೃಶ್ಯ ಮನರಂಜನೆಯನ್ನು ನೀಡಿತು. ಬಿರು ಬಿಸಿಲಿನ ತಾಪಕ್ಕೆ ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ನೀರು ಕುಡಿಯುತ್ತಾ ಕೆಲಕಾಲ ನೆರಳಿನಲ್ಲಿ ವಿಶ್ರಾಂತಿ ಪಡೆದು ಪುನಃ ಬಣ್ಣದಾಟಕ್ಕೆ ಸಜ್ಜಾಗುವುದು ಕಂಡು ಬಂದಿತು. ಗಮನ ಸೆಳೆದ ಸೋಗಿನ ಬಂಡಿಗಳು: ನಗರದಲ್ಲಿ ಸಂಜೆ ಹೋಳಿ ಹಬ್ಬದ ನಿಮಿತ್ತ ಆಯೋಜಿಸಿದ್ದ ಸೋಗಿನ ಬಂಡಿ ಎಲ್ಲರ ಗಮನ ಸೆಳೆಯಿತು. ವಿವಿಧ ಓಣಿಗಳಿಂದ ಸಿದ್ಧಗೊಳಿಸಿದ್ದ ಸೋಗಿನ ಬಂಡಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು.

ಸೋಗಿನ ಬಂಡಿ ಮೆರವಣಿಗೆ ಸಂದರ್ಭದಲ್ಲಿ ಬಣ್ಣ ಸುರಿಯುತ್ತಾ ಸಾಗುತ್ತಿರುವ ದೃಶ್ಯ ಬಣ್ಣದಾಟಕ್ಕೆ ರಂಗು ತಂದಿತು. ನೂರಾರು ಯುವಕರು ಸಿಳ್ಳೆ, ಕೇಕೆ ಹಾಕುತ್ತಾ ಬಂಡಿಯ ಎದುರಿಗೆ ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಾ, ಮತ್ತೆ ಕೆಲವರು ತೂರಾಡುತ್ತಾ ಸಾಗುತ್ತಿರುವುದು ಸಾಕಷ್ಟು ರಂಜನೆ ಒದಗಿಸಿತು. ಬಣ್ಣದ ಪೊಟ್ಟಣ ಕೈಯಲ್ಲಿ ಹಿಡಿದು ಬೀದಿಯಲ್ಲಿ ಸಾಗುತ್ತಿರುವಾಗ ಎದುರಿಗೆ ಬರುವವರಿಗೆ ಬಣ್ಣ ಎರಚುತ್ತಾ ಪರಸ್ಪರ ಶುಭಾಶಯಗಳನ್ನು ಹೇಳಿ ಮುಂದೆ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್: ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು. ಶಾಂತಿಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಎಲ್ಲ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಹೋಳಿಯ ಸಂಭ್ರಮ ಮೇರೆ ಮೀರಿತ್ತು.ನಗರದಾದ್ಯಂತ ಹೋಳಿ ಸಂಭ್ರಮ: ಹೋಳಿ ಹಬ್ಬದ ಅಂಗವಾಗಿ ನಗರದ ಜೆ.ಎಚ್. ಪಟೇಲ್ ಸರ್ಕಲ್, ಬಸವೇಶ್ವರನಗರ, ಜೆ.ಪಿ. ವೃತ್ತ, ಮೈಲಾರ ಮಹದೇವ ವೃತ್ತ, ಸುಭಾಸ್ ವೃತ್ತ, ಶಿವಯೋಗಿಶ್ವರನಗರ, ಎಂ.ಜಿ. ವೃತ್ತ, ಹುಕ್ಕೇರಿಮಠ, ಅಶ್ವಿನಿ ನಗರ, ಶಿವಾಜಿ ನಗರ, ಕಲ್ಲುಮಂಟಪ ರೋಡ್, ಕಾಗಿನೆಲೆ ವೃತ್ತ, ಎಲ್‌ಬಿಎಸ್ ಮಾರುಕಟ್ಟೆ, ಎಪಿಎಂಸಿ, ಪುರದ ಓಣಿ, ಶಿವಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ ಯುವಕ ಯುವತಿಯರು ಹಲಗೆ ಸಪ್ಪಳಕ್ಕೆ ಹೆಜ್ಜೆ ಹಾಕಿ, ಪರಸ್ಪರ ಬಣ್ಣವನ್ನು ಎರಚಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು.