ಶಿರಹಟ್ಟಿ: ಹೋಳಿ ಹಿನ್ನೆಲೆ ಬುಧವಾರ ಪಟ್ಟಣದ ಜನತೆ ಬಣ್ಣದಾಟದಲ್ಲಿ ಕುಣಿದು ಕುಪ್ಪಳಿಸಿದರು. ಯುವಕರು, ಮಕ್ಕಳು, ಮಹಿಳೆಯರು ಎಲ್ಲರೂ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.ಮಧ್ಯರಾತ್ರಿಯೇ ಕಾಮನನ್ನು ಸುಟ್ಟು ಬೆಳಗ್ಗೆ ೭ ಗಂಟೆಯಿಂದಲೇ ಬಣ್ಣದಾಟ ಪ್ರಾರಂಭವಾಯಿತು. ಬೆಳಕು ಹರಿಯುತ್ತಲೇ ಸಣ್ಣಸಣ್ಣ ಮಕ್ಕಳು ಮನೆಮಂದಿಗೆಲ್ಲ ಬಣ್ಣ ಎರಚಿ ಸೌಹಾರ್ದಯುತವಾಗಿ ಸಡಗರ, ಸಂಭ್ರಮದಿಂದ ಕಾಮನ ಹಬ್ಬ, ಹೋಳಿ ಆಚರಿಸಿ ಖುಷಿಪಟ್ಟರು.ರಮ್ಯವಾಗಿ ಬೇಸಿಗೆ ಋತುಗಳಲ್ಲಿ ಅಂಬೆಗಾಲಿಡುತ್ತಾ ಆಗಮಿಸುವ ಪ್ರಥಮ ಹಬ್ಬವೇ ರಂಗು ರಂಗಿನ ಹೋಳಿ ಹಬ್ಬ. ಇದನ್ನು ಕಾಮನಹಬ್ಬ, ಹೋಳಿಹಬ್ಬ, ಬಣ್ಣಗಳ ಹಬ್ಬ ಎಂತೆಲ್ಲ ಕರೆಯಲಾಗುತ್ತಿದೆ. ಚಿಕ್ಕ ಮಕ್ಕಳಾದಿಯಾಗಿ ಹಿರಿಯ ನಾಗರಿಕರವರೆಗೆ, ಹೆಣ್ಣು- ಗಂಡೆಬ್ಬ ಭೇದವಿಲ್ಲದೇ ಜಾತಿ ಕುಲ ಮತಗಳ ಸಂಕೋಲೆಗಳನ್ನು ಕಳಚಿಟ್ಟು ಪ್ರಕೃತಿಯ ಅದ್ಭುತ ಸೃಷ್ಟಿಗಳಾದ ಹತ್ತಾರು ಬಗೆಯ ಬಣ್ಣಗಳನ್ನು ಪರಸ್ಪರ ಒಬ್ಬರ ಮೇಲೊಬ್ಬರು ಆನಂದದಿಂದ ಎರಚುವ ಈ ಹಬ್ಬದ ಸಂಭ್ರಮವನ್ನು ವರ್ಣಿಸಲು ಪದಗಳಿಂದ ಸಾಧ್ಯವಿಲ್ಲ. ಕಾಮನನ್ನು ದಹಿಸಿ ತನ್ನ ಕಾಮನೆಗಳನ್ನು ನಿಯಂತ್ರಿಸಿ ರತಿ- ಮನ್ಮಥರಂತೆ ಆದರ್ಶ ದಂಪತಿಗಳಾಗಿ ಬಾಳುವಂತ ಬುದ್ಧಿಯನ್ನು ಪರಶಿವ ಎಲ್ಲರಿಗೂ ದಯಪಾಲಿಸಲಿ ಎಂದು ಪ್ರಾರ್ಥಿಸುವ ಮೂಲಕ ಕಾಮಣ್ಣನ ಹಬ್ಬ ಆಚರಿಸುವುದು ವಿಶೇಷ.
ಶಿರಹಟ್ಟಿಯಲ್ಲಿ ಹೋಳಿ ಆಚರಣೆಯನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಬೃಹತ್ತಾದ ಹುಲಗಾಮನನ್ನು ಸಿದ್ಧಪಡಿಸಿ ಮಂಗಳವಾರ ರಾತ್ರಿಯೇ ಕಾಮನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕುಂಬಾರ ಓಣಿಯಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ಬಣ್ಣ ಎರಚುವುದು ಪ್ರಾರಂಭವಾಯಿತು.ರಸ್ತೆಗಳಲ್ಲಿ ಯುವಕರ ಗುಂಪುಗಳು ಹಲಗೆ ಬಡಿದು ಕುಣಿಯುತ್ತ ಸ್ನೇಹಿತರಿಗೆ, ಪರಿಚಯಸ್ಥರಿಗೆ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಶಯ ಕೋರಿದರು. ಪಟ್ಟಣದ ಕುಂಬಾರ ಓಣಿ, ಮರಾಠ ಗಲ್ಲಿ, ಮಹಿಷಿ ಓಣಿ, ಕುರುಬರ ಓಣಿ, ಮ್ಯಾಗೇರಿ ಓಣಿ, ಅಂಬೇಡಕರ ನಗರ, ವಿಜಯ ನಗರ, ವಿದ್ಯಾ ನಗರ ಹೀಗೆ ಎಲ್ಲೆಡೆ ಜನರು ಪರಸ್ಪರ ಬಣ್ಣ ಹಚ್ಚುವ ಮೂಲಕ ಜಾನಪದ ಹಾಡು ಹೇಳುತ್ತಾ ಸಂಭ್ರಮಿಸಿದರು.ಪೊಲೀಸ್ ಬಂದೋಬಸ್ತ್: ಬಣ್ಣದಾಟದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ಅವರು ಬಿಗಿಯಾದ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ಎಲ್ಲ ವೃತ್ತಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಣ್ಣದಾಟದ ನಂತರ ರಂಗಪಂಚಮಿಯ ಭವ್ಯ ಮೆರವಣಿಗೆ ನಡೆಯಿತು.ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ರತಿ- ಮನ್ಮಥರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ರಗ್ಗಲಗಿ, ತಮಟೆ ಇತ್ಯಾದಿ ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದ ಯುವಕರು, ಬಣ್ಣ ಹಚ್ಚುವುದನ್ನು ಮೆರವಣಿಗೆಯಲ್ಲೂ ಮುಂದುವರಿಸಿದ್ದರು.