ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂದೆದ್ದ ಜನತೆ

| Published : Mar 26 2024, 01:00 AM IST

ಸಾರಾಂಶ

ಬಣ್ಣದ ಹಬ್ಬ ಹೋಳಿ ಕಲಬುರಗಿಯಲ್ಲಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯ್ತು. ಹೋಳಿ ಹಬ್ಬದ ಹಿನ್ನೆಲೆ ಜಿಲ್ಲೆಯಾದ್ಯಂತ ಬಣ್ಣದಲ್ಲಿ ಜನ ಮಿಂದೆದ್ದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಣ್ಣದ ಹಬ್ಬ ಹೋಳಿ ಕಲಬುರಗಿಯಲ್ಲಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯ್ತು. ಹೋಳಿ ಹಬ್ಬದ ಹಿನ್ನೆಲೆ ಜಿಲ್ಲೆಯಾದ್ಯಂತ ಬಣ್ಣದಲ್ಲಿ ಜನ ಮಿಂದೆದ್ದರು.

ಕಲಬುರಗಿ ನಗರದಲ್ಲಿ ಯುವಕ, ಯುವತಿ ಡಾನ್ಸ್ ಮಾಡುವ ಮೂಲಕ ಗಮನ ಸೆಳೆದರೆ, ಗ್ರಾಮೀಣ ಕಲಬುರಗಿಯಲ್ಲಿ ತರಹೇವಾರಿ ವೇಷ ತೊಟ್ಟ ಯುವಕರು ಹೋಳಿ ಸಂಪ್ರದಾಯಗಳನ್ನು ತಮ್ಮೂರುಗಳಲ್ಲಿ ಆಚರಿಸುತ್ತ ಸಂಭ್ರಮಿಸಿದರು.

ಕಲಬುರಗಿ ನಗರದ ಬ್ರಹ್ಮಪೂರ, ಷಹಾಬಜಾರ್‌, ಸ್ಟೇಷನ್‌ ಬಜಾರ್‌, ಕುಂಬಾರವಾಡಿ, ಸಮತಾ ಕಾಲೋನಿ, ರಿಂಗ್‌ ರಸ್ತೆ ಓಝಾ ಬಡಾವಣೆ, ದತ್ತ ನಗರ, ದೇವ ನಗರ ಇಲ್ಲೆಲ್ಲಾ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಪಟ್ಟರು.

ಸೂಪರ್‌ ಮಾರ್ಕೇಟ್‌, ಗಂಜ್‌ ಪ್ರದೇಶ, ಬಸವೇಶ್ವರ ನಗರ ಇಲ್ಲೆಲ್ಲಾ ಬಮ್ಣದೋಕುಳಿಯಿಂದ ತುಂಬಿದ್ದ ನೀರಿನ ಬ್ಯಾರಲ್‌ಗಳಿರುವ ಬಂಡಿಗಳೊಂದಿಗೆ ಯುವಕರು ಹಲಗೆ, ಬಾಂಜಾ, ಭಜಂತ್ರಿ ಬಡಿಯುತ್ತ ಹಾಡು ಹಾಕಿ ಕುಮಿದು ಕುಪ್ಪಳಿಸುತ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಪಟ್ಟರು.

ಬೆಳಗ್ಗೆಯಿಂದಲೇ ಉರಿ ಬಿಸಿಲ ಉಪಟಳವಿತ್ತು. ಇದರಿಂದಾಗಿ ನಗರದಲ್ಲಿ ಈ ಬಾರಿ ಬಣ್ಣದ ಹಬ್ಬದಲ್ಲಿ ಅಷ್ಟೊಂದು ಲವಲವಿಕೆ, ಉತ್ಸಾಹ ಕಂಡು ಬರಲಿಲ್ಲ. ಆದಾಗ್ಯೂ ಜನ ಅಲ್ಲಲ್ಲಿ ನೆರಳಲ್ಲಿ ಬಣ್ಣದಾಟ ಆಡಿದ ನೋಟಗಳು ಕಂಡವು.

ಹೋಳಿ ಕಾಮ ದಹನ: ಹೋಳಿ ಹಬ್ಬದ ಮುನ್ನಾದಿನವಾದ ಹುಣ್ಣಿಮೆಯದು ನಗರ ಹಾಗೂ ಜಿಲ್ಲಾದ್ಯಂತ ಪ್ರಮುಖ ಗಲ್ಲಿಗಳು, ಬಡಾವಣೆ, ವೃತ್ತಗಳಲ್ಲಿ ಯುವಕರು ಸೇರಿಕೊಂಡು ಕಾಮ ಹನ ಆಚರಿಸಿದರು.

ಕುಣಿದು ಕುಪ್ಪಳಿಸಿದ ಬಿಜೆಪಿ ಅಭ್ಯರ್ಥಿ ಜಾಧವ್‌: ಹೋಳಿ ದಿನ ಇಲ್ಲಿನ ಜಗತ್‌ ವೃತ್ತದಲ್ಲಿರುವ ಪತ್ರಿಕಾ ಭವನಕ್ಕೆ ಆಗಮಿಸಿದ ಡಾ. ಉಮೇಶ ಜಾಧವ್‌ ಅಲ್ಲಿ ಹಬ್ಬ ಆಿಸಲು ಸೇರಿದ್ದ ಪತ್ರಕರ್ತರೊಂದಿಗೆ ಕುಣಿದು ಕುಪ್ಪಳಿಸಿದರು. ಈ ಸಂದಬ್ಱದಲ್ಲಿ ಹಾಕಲಾಗಿದ್ದ ಹೋಳಿ ಹಬ್ಬದ ಹಾಡುಗಳಿಗೆ ಸಂಸದ ಉಮೇಶ ಜಾಧವ್ ಸಂಭ್ರಮ ಪಟ್ಟರಲ್ಲದೆ ಕುಣಿದು ಕುಪ್ಪಳಿಸಿದರು.

ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿದ್ದರು. ಪತ್ರಕರ್ತರೊಂದಿಗೆ ಬಣ್ಣದೋಕುಳಿ ಆಡಿದ ಉಮೇಶ ಜಾಧವ್, ಬಹುಹೊತ್ತು ಪತ್ರಿಕಾ ಭವನದಲ್ಲೇ ಇದ್ದು ಡಿಜೆ ಸೌಂಡ್‌ಗೂ ಹೆಜ್ಜೆ ಹಾಕಿ ಗಮನ ಸೆಳೆದರು.