ಶ್ರೀಚಾಮುಂಡೇಶ್ವರಿ ಅಮ್ಮನವರಿಗೆ ಹೋಳಿಗೆ ಅಲಂಕಾರ

| Published : Jul 27 2024, 12:50 AM IST

ಸಾರಾಂಶ

ಶ್ರೀಚಾಮುಂಡೇಶ್ವರಿ ಅಮ್ಮನವರಿಗೆ ಮೊದಲನೇ ಆಷಾಢ ಶುಕ್ರವಾರದಂದು ದೇವಾಲಯದ ಗರ್ಭಡಿಗೆ ಮೋಸಂಬಿ ಹಾಗೂ ಕಿತ್ತಲೆ ಹಣ್ಣಿನ ಅಲಂಕಾರ, ಎರಡನೇ ಶುಕ್ರವಾರದಂದು ಒಣ ಕೊಬ್ಬರಿಯ ಓಳುಗಳಿಂದ ಹಾಗೂ ಮೂರನೇ ಶುಕ್ರವಾರ ಹೋಳಿಗೆಯಿಂದ ಅಲಂಕರಿಸುವ ಮೂಲಕ ಪ್ರತಿವಾರವೂ ದೇವಾಲಯದ ಗರ್ಭಗುಡಿಗೆ ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದಲ್ಲಿ ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ಶ್ರೀಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷವಾದ ಹೋಳಿಗೆ ಅಲಂಕಾರ ಮಾಡಲಾಗಿತ್ತು.

ಪಟ್ಟಣದ ಚಾಮುಂಡೇಶ್ವರಿ ಬೀದಿಯ ಶ್ರೀಚಾಮುಂಡೆಶ್ವರಿ ದೇವಿಗೆ ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್ ಲಕ್ಷೀಶ್ ಶರ್ಮ ಅವರ ನೇತೃತ್ವದಲ್ಲಿ ದೇವಾಲಯದ ಗರ್ಭಗುಡಿಯನ್ನು ಸಂಪೂರ್ಣವಾಗಿ ಹೋಳಿಗೆಯಿಂದ ಅಲಂಕರಿಸಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.

ಬೆಳಗ್ಗಿನಿಂದಲೇ ದೇವಿಗೆ ವಿಶೇಷವಾದ ಲಪಂಚಾಮೃತ ಅಭಿಷೇಕ, ಮಂಗಳ ದ್ರವ್ಯ ಹಾಗೂ ಪುಷ್ಪಯಾಗವನ್ನು ಹಮ್ಮಿಕೊಂಡು ಭಕ್ತಾದಿಗಳ ವಿಶೇಷ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.

ಶ್ರೀಚಾಮುಂಡೇಶ್ವರಿ ಅಮ್ಮನವರಿಗೆ ಮೊದಲನೇ ಆಷಾಢ ಶುಕ್ರವಾರದಂದು ದೇವಾಲಯದ ಗರ್ಭಡಿಗೆ ಮೋಸಂಬಿ ಹಾಗೂ ಕಿತ್ತಲೆ ಹಣ್ಣಿನ ಅಲಂಕಾರ, ಎರಡನೇ ಶುಕ್ರವಾರದಂದು ಒಣ ಕೊಬ್ಬರಿಯ ಓಳುಗಳಿಂದ ಹಾಗೂ ಮೂರನೇ ಶುಕ್ರವಾರ ಹೋಳಿಗೆಯಿಂದ ಅಲಂಕರಿಸುವ ಮೂಲಕ ಪ್ರತಿವಾರವೂ ದೇವಾಲಯದ ಗರ್ಭಗುಡಿಗೆ ವಿಶೇಷವಾಗಿ ಅಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬರುತ್ತಿರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿರುವುದು ವಿಶೇಷವಾಗಿ ಕಂಡು ಬಂದಿದೆ.

ಶ್ರೀಲಕ್ಷ್ಮಿ ದೇವಿಗೆ ವಿಶೇಷ ಪೂಜೆ:

3 ನೇ ಆಷಾಢ ಶುಕ್ರವಾರ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿನ ಶ್ರೀಲಕ್ಷ್ಮಿ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಭಕ್ತರು ಬೆಳಗ್ಗಿನಿಂದ ಸಂಜೆ ವರೆವಿಗೂ ಆಗಮಿಸಿ ದೇವರ ದರ್ಶನ ಪಡೆದರು. ದೇವಾಲಯದ ಮುಂಭಾಗ ದಾನಿಗಳು ಬೆಳಗ್ಗಿನಿಂದ ಸಂಜೆ ವರೆವಿಗೂ ಬಾತು, ಮೊಸರನ್ನ, ಸಿಹಿ ಸೇರಿದಂತೆ ಇತರ ಪ್ರಸಾದವನ್ನು ನೀಡಿದರು.ಶ್ರೀಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಭಾರತೀನಗರ:

ಆಷಾಢ 3ನೇ ಶುಕ್ರವಾರದ ಅಂಗವಾಗಿ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಹೂ ಮತ್ತು ಆಭರಣಗಳಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.ಆಗಮಿಕರಾದ ಕಾರ್ತಿಕ್ ಆರಾಧ್ಯ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ದೇವಿಗೆ ಅಭಿಷೇಕ ಪೂಜೆ ನಂತರ ಹೂ ಮತ್ತು ಆಭರಣಗಳಿಂದ ಅಲಂಕರಿಸಿ ಬೆಳಗ್ಗೆಯಿಂದ ರಾತ್ರಿ 9 ಗಂಟೆವರೆವಿಗೂ ಪೂಜೆಸಲ್ಲಿಸಿ ಭಕ್ತಾಧಿಗಳಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ನಂತರ ಸಾವಿರಾರು ಭಕ್ತಾದಿಗಳಿಗೆ ಸಜನ್ ಜ್ಯೂವೆಲರಿ ಮಾಲೀಕ ಸಜನ್ ಸೇವಾರ್ಥದಲ್ಲಿ ಪ್ರಸಾದ ವಿತರಣೆ ನಡೆಯಿತು.ನಂತರ ಕಾರ್ತಿಕ್ ಆರಾಧ್ಯ ಮಾತನಾಡಿ, ಜು.27ರ ಶನಿವಾರ ಆಷಾಢ ಮಾಸದ ಕೃಷ್ಣ ಸಪ್ತಮಿ ದಿನದಂದು ಅಮ್ಮನವರ ವರ್ಧಂತೋತ್ಸವ ನಡೆಯಲಿದೆ ಎಂದರು.