ಸಾರಾಂಶ
ಕಾರವಾರ: ನಗರದಲ್ಲಿ ಈ ಬಾರಿ ಹೋಳಿ ಸಂಭ್ರಮಾಚರಣೆ ಸ್ವಲ್ಪ ಕಳೆಗುಂದಿತ್ತು. ಸೋಮವಾರ ಎಸ್‌ಎಸ್‌ಎಲ್‌ಸಿ ಒಳಗೊಂಡು ಕೆಲವು ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಹೋಳಿ ಹಬ್ಬ ರಂಗು ಕಳೆದುಕೊಂಡಿತ್ತು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ, ನೆರೆಹೊರೆಯವರೊಂದಿಗೆ ಕೂಡಿಕೊಂಡು ಬಣ್ಣವನ್ನು ಹಚ್ಚಿ ಪರಸ್ಪರ ಶುಭ ಕೋರಿದರು. ಪುಟಾಣಿಗಳು ಬಣ್ಣದ ನೀರನ್ನು ಪಿಚಕಾರಿಯಲ್ಲಿ ತುಂಬಿಕೊಂಡು ರಸ್ತೆಯ ಮೇಲೆ ಸಂಚರಿಸುತ್ತಿದ್ದವರಿಗೆ ನೀರನ್ನು ಹಾರಿಸಿ ಸಂಭ್ರಮಿಸಿದರು. ಈ ಬಾರಿ ವಿವಿಧ ತರಗತಿಗಳ ಪರೀಕ್ಷೆ ನಡೆಯುತ್ತಿರುವುದರಿಂದ ಹೋಳಿಯ ಸಂಭ್ರಮ ತುಸು ಕಡಿಮೆಯಾಗಿತ್ತು. ಹೋಳಿ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿತ್ತು. ಬಣ್ಣ ಹಚ್ಚಿಕೊಂಡ ಯುವಕ-ಯುವತಿಯರು ಕಾರು, ದ್ವಿ ಚಕ್ರವಾಹನದಲ್ಲಿ ನಗರವನ್ನು ಸುತ್ತಾಟ ನಡೆಸಿ ಪರಿಚಿತರಿಗೆ ಬಣ್ಣ ಹಚ್ಚಿದರು.ಬಣ್ಣದೋಕುಳಿಯಲ್ಲಿ ಮಿಂದೆದ್ದವರು ಅರಬ್ಬಿ ಸಮುದ್ರದಲ್ಲಿ ಸ್ನಾನ ಮಾಡುವ ವಾಡಿಕೆ ನಡೆದುಕೊಂಡು ಬಂದಿದ್ದು, ಪ್ರಸಕ್ತ ವರ್ಷ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಹೆಚ್ಚಿನ ಜನರು ಇರಲಿಲ್ಲ.
ನಗರದಲ್ಲಿ ಪೊಲೀಸರ ಕೊರತೆ ಎದ್ದು ಕಾಣುತ್ತಿತ್ತು. ಸಮುದ್ರ ಸ್ನಾನಕ್ಕೆ ತೆರಳಿದವರು ಮೋಜು ಮಸ್ತಿಯಲ್ಲಿ ತೊಡಗಿದ್ದರೆ ಅವರ ನಿಯಂತ್ರಣಕ್ಕೆ ಪೊಲೀಸರು ಇರಲಿಲ್ಲ. ಸಮುದ್ರದಲ್ಲಿ ಅಲೆಗಳ ಅಬ್ಬರವನ್ನೂ ಲೆಕ್ಕಿಸದೇ ಕೆಲವರು ದಡವನ್ನು ಬಿಟ್ಟು ಮುಂದೆ ಮುಂದೆ ಹೋಗುತ್ತಿದ್ದರು. ವಿದ್ಯಾರ್ಥಿಗಳ ಪರೀಕ್ಷೆ ಎನ್ನುವುದು ಈ ಬಾರಿಯ ರಂಗು ರಂಗಿನ ಬಣ್ಣದಾಟದ ಹಬ್ಬಕ್ಕೆ ರಂಗು ನೀಡಿರಲಿಲ್ಲ.ಬಣ್ಣದೋಕುಳಿಯಲ್ಲಿ ಮಿಂದೆದ್ದ ಹಳಿಯಾಳಪಟ್ಟಣದ ಸೇರಿದಂತೆ ಹಾಗೂ ಕೆಲವು ಗ್ರಾಮೀಣ ಭಾಗಗಳಲ್ಲಿ ಸೋಮವಾರ ಬಣ್ಣದ ಹಬ್ಬ ಹೋಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆದರೆ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಹಬ್ಬದಲ್ಲಿ ಪಾಲ್ಗೊಂಡಿಲ್ಲ.ಎಲ್ಲೆಡೆ ಬಣ್ಣದೋಕುಳಿ ನಡುವೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ, ಐದು, ಎಂಟು, ಒಂಬತ್ತು ಮತ್ತು ಹನ್ನೊಂದನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಆರಂಭಗೊಂಡಿದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ಬಿಟ್ಟು ಬರುತ್ತಿರುವ ದೃಶ್ಯ ಕಂಡುಬಂತು. ಯುವಜನರು, ಮಕ್ಕಳು ಬೆಳಗ್ಗೆಯಿಂದಲೇ ರಸ್ತೆಗಿಳಿದು ಪರಸ್ಪರ ಬಣ್ಣದಾಟದಲ್ಲಿ ತೊಡಗಿ ಶುಭ ಕೋರಿ ಸಂಭ್ರಮಿಸಿದರು.ವಿವಿಧ ವೇಷ ಭೂಷಣಗಳನ್ನು ಧರಿಸಿದ ಯುವ ಸಮೂಹವು ಗುರುತು ಸಿಗದ ಹಾಗೇ ಮುಖಕ್ಕೆಲ್ಲ ಬಣ್ಣ ಮೆತ್ತಿಕೊಂಡು ಪಟ್ಟಣದಲ್ಲಿ ಸುತ್ತಾಡುತ್ತ, ಸ್ನೇಹಿತರಿಗೆ, ಪರಿಚಯಸ್ಥರಿಗೆ ಬಣ್ಣ ಹಚ್ಚಿ ಪರಸ್ಪರ ಶುಭಾಶಯ ಕೋರಿದರು. ಮಕ್ಕಳು ಸೇರಿದಂತೆ ಮಹಿಳೆಯರು ಮನೆಯ ವಠಾರದಲ್ಲಿಯೇ ಹಾಗೂ ಬಡಾವಣೆಗಳಲ್ಲಿ ಬಣ್ಣದೊಕುಳಿಯಲ್ಲಿ ಆಡಿ ಸಂಭ್ರಮಿಸಿದರು. ವಿವಿಧೆಡೆ ಯುವಸಮೂಹಕ್ಕೆ ಸಂಗೀತದೊಂದಿಗೆ ಬಣ್ಣದ ಜಲಸ್ನಾನ ಮಾಡಿ ಸಂಭ್ರಮಿಸಲು ವ್ಯವಸ್ಥೆ ಮಾಡಲಾಗಿತ್ತು. ಯುವಸಮೂಹ ಮತ್ತು ಮಕ್ಕಳು ಬಣ್ಣದ ನೀರಿನಲ್ಲಿ ನೆನೆಯುತ್ತಾ ಹೆಜ್ಜೆ ಹಾಕಿ ನಲಿದಾಡಿದರು. ಮಾಜಿ ಶಾಸಕ ಸುನೀಲ ಹೆಗಡೆ ಅವರು ತಮ್ಮ ಬೆಂಬಲಿಗರೊಂದಿಗೆ ಪಟ್ಟಣದೆಲ್ಲೆಡೆ ಸಂಚರಿಸಿ ಹೋಳಿಯಲ್ಲಿ ಪಾಲ್ಗೊಂಡರು.
ಗೋಕರ್ಣದಲ್ಲಿ ಸ್ಥಳೀಯರೊಂದಿಗೆ ಹೋಳಿ ಸಂಭ್ರಮಿಸಿದ ವಿದೇಶಿ, ಸ್ವದೇಶಿ ಪ್ರವಾಸಿಗರುಪುರಾಣ ಪ್ರಸಿದ್ಧ ಕ್ಷೇತ್ರ, ಪ್ರವಾಸಿ ತಾಣವಾದ ಗೋಕರ್ಣದಲ್ಲಿ ಸೋಮವಾರ ಹೋಳಿ ಹಬ್ಬವನ್ನು ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರು ಸ್ಥಳೀಯರೊಂದಿಗೆ ಸಂಭ್ರಮದಿಂದ ಆಚರಿಸಿದರು.ಹೋಳಿ ಹಬ್ಬ ಈ ಭಾಗದಲ್ಲಿ ಮುಂದಿನ ಪೂರ್ಣಿಮೆಯಂದು ಸುಗ್ಗಿ ಹಬ್ಬದೊಂದಿಗೆ ಆಚರಿಸುವುದು ವಾಡಿಕೆಯಾಗಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗಾಗಿ ಸ್ಥಳೀಯರು ಹಾಗೂ ವಿವಿಧ ಹೊಟೆಲ್-ರೆಸಾರ್ಟ್‌ನವರು ಜತೆಯಾಗಿ ಬಣ್ಣ ಎರಚುತ್ತಾ ಸಡಗರದಿಂದ ಹಬ್ಬ ಆಚರಿಸುತ್ತಾ ಬಂದಿದ್ದು, ಅದರಂತೆ ಈ ಬಾರಿಯೂ ನಡೆಯಿತು. ಪೇಟೆಯಲ್ಲಿ ಅತ್ತ ಇತ್ತ ಬಣ್ಣ ಹಚ್ಚಿಕೊಂಡು ತಿರುಗಾಡುತ್ತಿರುವುದು ಒಂದು ಕಡೆಯಾದರೆ ಕಡಲತೀರದ ವಸತಿ ಗೃಹಗಳಲ್ಲಿ ತಂಗಿರುವ ಪ್ರವಾಸಿಗರು ತಮ್ಮ ಗೆಳೆಯ, ಗೆಳತಿರೊಂದಿಗೆ ರಂಗಿನಾಟವಾಡುತ್ತಾ ಸಂಭ್ರಮಿಸಿದರು.ಹೋಳಿ ಜೊತೆ ನೀರಿನ ಉಳಿತಾಯ ನಿಯಮ: ಈ ವರ್ಷದ ಪ್ರವಾಸದ ಹಂಗಾಮು ಮುಗಿಸಿ ವಿದೇಶ ಸೇರುವ ವಿವಿಧ ಪ್ರವಾಸಿಗರು ಸಹ ಈ ಭಾಗದಲ್ಲಿ ಈ ತಿಂಗಳಲ್ಲಿ ಹೋಳಿ ಇಲ್ಲದಿದ್ದರೂ ಈಗಲೇ ಹೋಳಿ ಆಡಿ ಬಣ್ಣ ಹಚ್ಚಿ ಸಂಭ್ರಮಿಸಿ ಇಲ್ಲಿಂದ ಬಹುತೇಕ ಎಲ್ಲರೂ ಬೀಳ್ಕೊಡಲು ತಯಾರಿ ಮಾಡಿದಂತಿತ್ತು. ಈ ಬಾರಿ ಹಲವು ರೆಸಾರ್ಟ್‍ಗಳಲ್ಲಿ ರಾಸಾಯನಿಕ ಇಲ್ಲದ ಹಾಗೆ ನೀರ ಕಡಿಮೆ ಬೇಕಾಗುವ ಬಣ್ಣವನ್ನು ಉಪಯೋಗಿಸಿ ಬೇಸಿಗೆಯಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಅಂಗಡಿಗಳಲ್ಲಿ ಅಪಾಯವಿಲ್ಲದ ಬಣ್ಣಗಳಿಗಾಗಿ ಜನರು ಹುಡುಕಾಡಿದರು.ಭಟ್ಕಳದಾದ್ಯಂತ ಸಂಭ್ರಮದ ಹೋಳಿ ಹಬ್ಬಭಟ್ಕಳ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾವಿನಕುರ್ವೆ ಬಂದರಿನಲ್ಲಿ ವರ್ಷಂಪ್ರತಿಯಂತೆ ಈ ಸಲವೂ ಹೋಳಿ ಹಬ್ಬವನ್ನು ಸಂಪ್ರದಾಯದಂತೆ ಸಡಗರದಿಂದ ಆಚರಿಸಲಾಯಿತು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಹೋಳಿ ಹಬ್ಬದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ಸಮುದ್ರ ತೀರದಲ್ಲಿ ತಲೆತಲಾಂತರದಿಂದ ಮಾಡಿಕೊಂಡು ಬಂದ ಪದ್ದತಿಯಂತೆ ಕಾಮದಹನ ಮಾಡಲಾಯಿತು. ಹೋಳಿ ಹಬ್ಬದ ಪ್ರಯುಕ್ತ ಎಲ್ಲೆಡೆ ಯುವಕರು ಬಣ್ಣ ಹಾಕುತ್ತಿರುವುದು ಕಂಡು ಬಂತು. ತಾಲೂಕಿನಲ್ಲಿ ಕುಂಬ್ರಿ ಮರಾಠಿ ಸಮಾಜದವರು ಹಿಂದಿನ ಸಂಪ್ರದಾಯದಂತೆ ಹೋಳಿ ಹಬ್ಬದ ಪ್ರಯುಕ್ತ ಮನೆ ಮನೆಗೆ ತೆರಳಿ ಡೆಕ್ಕೆ ಕುಣಿತ ಮಾಡಿ ಗಮನ ಸೆಳೆದರು. ಕೆಲವು ಕಡೆ ವಿವಿಧ ಸಮುದಾಯದ ಯುವಕರು ಮನೆಮನೆಗೆ ತೆರಳಿ ಕೋಲಾಟ ಮಾಡಿದರು. ಒಟ್ಟಾರೆ ತಾಲೂಕಿನಲ್ಲಿ ಬಣ್ಣಗಳ ಹಬ್ಬ ಹೋಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹೊನ್ನಾವರದಲ್ಲಿ ಹೋಳಿ ಸಂಭ್ರಮಬಣ್ಣಗಳ ಹಬ್ಬ ಎಂದೇ ಕರೆಯಲ್ಪಡುವ ಹೋಳಿ ಹಬ್ಬವನ್ನು ಸೋಮವಾರ ತಾಲೂಕಿನಾದ್ಯಂತ ಸಡಗರದಿಂದ ಆಚರಿಸಲಾಯಿತು.ಬಣ್ಣ ಎರಚುವುದು, ಮೆರವಣಿಗೆ, ವಿಭಿನ್ನ ನೃತ್ಯಗಳ ಮೂಲಕ ಯುವಕರು, ಮಕ್ಕಳು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.
ತಾಲೂಕಿನ ವಿವಿಧೆಡೆ ಬಣ್ಣಗಳ ಹಬ್ಬ ಹೋಳಿ ಆಚರಿಸಲಾಯಿತು. ಹಬ್ಬದ ಸಡಗರದಲ್ಲಿ ವಿಶೇಷವಾಗಿ ಯುವಕರು ಬಣ್ಣಗಳನ್ನು ಎರಚಿ ಸಂತೋಷ ಹಂಚಿಕೊಂಡರೆ ಇನ್ನೂ ಕೆಲವರು ವಿಭಿನ್ನ ನೃತ್ಯಗಳ ಮೂಲಕ ಹಬ್ಬಕ್ಕೆ ಮೆರಗು ತಂದುಕೊಟ್ಟರು. ತಾಲೂಕಿನ ಬಹುತೇಕ ಕಡೆಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಪಟ್ಟಣದಲ್ಲಿ ಹಬ್ಬದ ಉತ್ಸಾಹ ಕಂಡುಬಂತು. ಯುವಕರ ವಿಶೇಷ ನೃತ್ಯ ಮೆರವಣಿಗೆ ಗಮನ ಸೆಳೆಯಿತು. ಯುವಕರು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ಬಣ್ಣ ಎರಚಿ ಕಾಣಿಕೆ ಪಡೆದರು. ಯುವಕರು ಬೈಕ್ ಮೂಲಕ ವಿವಿಧೆಡೆ ಸಂಚರಿಸಿದರು.