ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ತೇರು ಹನುಮಪ್ಪ ದೇವಸ್ಥಾಮದ ಮುಂಭಾಗದಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳು, ಯುವಕರು ಹಲಗೆ ಬಾರಿಸುತ್ತಾ, ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಬಿಸಿಲ ತಾಪ ಹೆಚ್ಚಿದಷ್ಟು ಹೋಳಿ ರಂಗಿನಾಟ ಜೋರಾಗಿತ್ತು.

ಹಿಂದೂ ಮಹಾಗಣಪತಿ ಸಮಿತಿಯವರು 5ನೇ ವರ್ಷದ ಅದ್ದೂರಿ ಹೋಳಿ ಉತ್ಸವ ಹಮ್ಮಿಕೊಂಡಿದ್ದರು. ನೂರಾರು ಯುವಕರು ಸಾಮೂಹಿಕವಾಗಿ ಹೋಳಿ ಆಚರಿಸಿದರು. ಸರಳ ತಂತ್ರಜ್ಞಾನದಿಂದ ಮಳೆ ಸುರಿಯುವ ವ್ಯವಸ್ಥೆ ಮಾಡಲಾಗಿತ್ತು. ಯುವಕರು ಧ್ವನಿವರ್ಧಕಗಳ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಕೃತಕ ಮಳೆಯಲ್ಲಿ ಮಿಂದೆದ್ದರು. ಕ್ರೇನ್ ಗೆ ಕಟ್ಟಲಾಗಿದ್ದ ಬಣ್ಣ ತುಂಬಿದ ಮಡಿಕೆ ಒಡೆಯುವ ಸಾಹಸದ ಆಟ ಗಮನ ಸೆಳೆಯಿತು. ಹಿಂದೂ ಮಹಾಗಣಪತಿ ಸಮಿತಿಯ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.

ಮಡಿಕೆ ಒಡೆಯುವ ಸ್ಪರ್ಧೆಯ ಸಂದರ್ಭದಲ್ಲಿ ಯುವಕರ ಗುಂಪುಗಳ ನಡುವೆ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಕಾರ್ಯಕ್ರಮ ಮೊಟಕುಗೊಳಿಸಿ, ಗುಂಪುಗಳನ್ನು ಚದುರಿಸಿದರು.

ಪಟ್ಟಣದ ವಿವಿಧ ವಾರ್ಡ್, ಓಣಿಗಳಲ್ಲಿ ರಂಗಿನಾಟ ಜೋರಾಗಿ ನಡೆಯಿತು. ಮಹಿಳೆಯರು, ಚಿಣ್ಣರು ಮನೆ ಮನೆಗೆ ತೆರಳಿ ಪರಸ್ಪರ ಬಣ್ಣ ಎರಚಿ ಹೋಲಿ ಶುಭಾಶಯ ಕೋರಿದರು.


ಗ್ರಾಮೀಣ ಪ್ರದೇಶದಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು. ಬೆಳಗಿನಜಾವ ರತಿ ಕಾಮಣ್ಣನನ್ನು ಬೆಂಕಿಯಲ್ಲಿ ದಹಿಸಿದರು.