ರಜೆಯ ಬಿಸಿಯೂಟ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನ

| Published : May 14 2024, 01:01 AM IST

ಸಾರಾಂಶ

ಕುಷ್ಟಗಿ ತಾಲೂಕಿನಲ್ಲಿ 262 ಶಾಲೆಗಳಿದ್ದು, 201 ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗಿದೆ. ಈ ಪೈಕಿ 35124 ಮಕ್ಕಳು ಬಿಸಿಯೂಟಕ್ಕಾಗಿ ಒಪ್ಪಿಗೆ ಪತ್ರದ ಮೂಲಕ ನೋಂದಣಿ ಮಾಡಿಕೊಂಡಿದ್ದು, ಸುಮಾರು 23000 ಮಕ್ಕಳು ಊಟ ಸವಿಯುತ್ತಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಬರಗಾಲದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಆರಂಭ ಮಾಡಿದ ಬಿಸಿಯೂಟ ಯೋಜನೆ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಮರ್ಪಕವಾದ ಮಳೆಯಾಗದ ಕಾರಣ ಬರಗಾಲ ಆವರಿಸಿದ್ದು, ಕುಷ್ಟಗಿ ತಾಲೂಕು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಬಿಸಿಯೂಟದಿಂದ ವಂಚನೆಯಾಗಬಾರದು ಎಂದು ಬೇಸಿಗೆಯ ರಜೆಯ ಅವಧಿಯಲ್ಲಿಯೂ ಬಿಸಿಯೂಟ ಯೋಜನೆ ಆರಂಭ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕುಷ್ಟಗಿ ತಾಲೂಕಿನಲ್ಲಿ 262 ಶಾಲೆಗಳಿದ್ದು, 201 ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗಿದೆ. ಈ ಪೈಕಿ 35124 ಮಕ್ಕಳು ಬಿಸಿಯೂಟಕ್ಕಾಗಿ ಒಪ್ಪಿಗೆ ಪತ್ರದ ಮೂಲಕ ನೋಂದಣಿ ಮಾಡಿಕೊಂಡಿದ್ದು, ಸುಮಾರು 23000 ಮಕ್ಕಳು ಊಟ ಸವಿಯುತ್ತಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಶಾಲೆಗಳಲ್ಲಿ ಆರಂಭವಾದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳು ಅನ್ನ ಸಾಂಬಾರು, ಉಪ್ಪಿಟ್ಟು, ಪಲಾವ್ ಸೇವನೆ ಮಾಡುತ್ತಿದ್ದಾರೆ.

ಅಡುಗೆದಾರರಿಗೆ ಕೆಲಸ:ಬೇಸಿಗೆ ರಜೆಯಲ್ಲಿ ಕೆಲಸವಿಲ್ಲದೆ ಖಾಲಿ ಇರುತ್ತಿದ್ದ ಬಿಸಿಯೂಟ ಅಡುಗೆ ಸಿಬ್ಬಂದಿಗೂ ಈ ಯೋಜನೆಯಿಂದ ಕೆಲಸ ಸಿಕ್ಕಂತಾಗಿದ್ದು ನೆಮ್ಮದಿ ಕಾಣುವಂತಾಗಿದೆ. ಶಾಲೆ ಆರಂಭವಾಗುವ ತನಕ ಮೇ ತಿಂಗಳ ಕೊನೆ ವಾರದವರೆಗೂ ಕೆಲಸ ದೊರಕಲಿದೆ.

ಗ್ರಾಮೀಣ ಮಕ್ಕಳಿಗೆ ಅನುಕೂಲ

ಬರಗಾಲ ಬಿದ್ದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕುಟುಂಬಗಳು ದುಡಿಯಲು ಬೇರೆ ಕಡೆ ಹೋಗುತ್ತಿದ್ದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬೇಸಿಗೆಯ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಬಹಳಷ್ಟು ಉಪಯೋಗವಾಗಿದೆ ಎನ್ನಬಹದು.

ನೋಡಲ್ ಅಧಿಕಾರಿಗಳು

ಕುಷ್ಟಗಿ ತಾಲೂಕಿನ 201 ಶಾಲೆಗಳಲ್ಲಿ ಆರಂಭವಾದ ಬಿಸಿಯೂಟ ಯೋಜನೆಯನ್ನು ಪರಿಶೀಲನೆ ನಡೆಸಲು ಬಿಇಒ, ಬಿಆರ್‌ಸಿ, ಸಿಆರ್‌ಸಿ ,ಸಿಆರ್‌ಪಿ ಸೇರಿದಂತೆ ಅಕ್ಷರ ದಾಸೋಹದ ಅಧಿಕಾರಿಗಳು ನೋಡಲ್ ಅಧಿಕಾರಗಳಂತೆ ಕೆಲಸ ಮಾಡುತ್ತಿದ್ದಾರೆ.

ಈ ಬಿಸಿಯೂಟ ಯೋಜನೆಯಲ್ಲಿ 210 ಶಿಕ್ಷಕರು ಹಾಗೂ 580 ಜನ ಅಡುಗೆದಾರರು ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಿದ್ದು, ಕೆಲವೊಂದು ಶಾಲೆಯಲ್ಲಿ ಖುದ್ದಾಗಿ ಶಿಕ್ಷಕರು ಮಕ್ಕಳ ಮನೆಗೆ ಹೋಗಿ ಊಟಕ್ಕೆ ಕರೆದುಕೊಂಡು ಬರುವ ಮೂಲಕ ಮಕ್ಕಳಿಗೆ ಬಿಸಿಯೂಟ ನೀಡುವ ಕೆಲಸ ಮಾಡುತ್ತಿದ್ದಾರೆ.

ಶೇ. 30 ಮಕ್ಕಳು ವಂಚಿತ

ಶಾಲೆಗಳು ರಜೆ ಇದ್ದ ಹಿನ್ನೆಲೆಯಲ್ಲಿ ಕೆಲವು ಮಕ್ಕಳು ಕೋಚಿಂಗ್ ಕ್ಲಾಸ್‌ಗಳು, ಅಜ್ಜ, ಅಜ್ಜಿಯ ಮನೆಗೆ ಹಾಗೂ ಸಂಬಂಧಿಕರ ಮನೆಗೆ ಹಾಗೂ ಬೇರೆ ಬೇರೆ ಊರುಗಳಿಗೆ ಜಾತ್ರೆ, ಮದುವೆ ಕಾರ್ಯಕ್ರಮಗಳಿಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಶೇಕಡಾ 30ರಷ್ಟು ಮಕ್ಕಳು ಯೋಜನೆಯಿಂದ ವಂಚಿತರಾಗಿದ್ದಾರೆ ಎನ್ನಬಹದು.ಮಕ್ಕಳಿಗೆ ಅನುಕೂಲ

ಕುಷ್ಟಗಿ ತಾಲೂಕಿನ 201 ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭ ಮಾಡಿದ್ದು, ತಾಂಡಾ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದೆ. ಈ ಯೋಜನೆಯಲ್ಲಿ 210 ಶಿಕ್ಷಕರು ಹಾಗೂ 580 ಅಡುಗೆದಾರರು ಕೆಲಸ ಮಾಡುತ್ತಿದ್ದಾರೆ. ಶಾಲೆಗೆ ಬಂದ ಎಲ್ಲ ಮಕ್ಕಳಿಗೂ ಊಟ ಕೊಡುವ ವ್ಯವಸ್ಥೆ ಮಾಡಲಾಗಿದೆ.

ಕೆ ಶರಣಪ್ಪ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕುಷ್ಟಗಿ40-50 ಮಕ್ಕಳು

ನಮ್ಮ ಶಾಲೆಯಲ್ಲಿ ಸುಮಾರು 70 ವಿದ್ಯಾರ್ಥಿಗಳು ಬಿಸಿಯೂಟವನ್ನು ಸೇವಿಸಲು ಒಪ್ಪಿಗೆ ಪತ್ರವನ್ನು ಕೊಟ್ಟಿದ್ದು, ನಾವು ಮನೆಗೆ ಹೋಗಿ ಕರೆದುಕೊಂಡು ಊಟವನ್ನು ಕೊಡುತ್ತಿದ್ದೇವೆ. ಪ್ರತಿದಿನ 40ರಿಂದ 50 ಮಕ್ಕಳು ಇರುತ್ತಾರೆ.

ಅಮರಗುಂಡಯ್ಯ ಹಿರೇಮಠ ಪ್ರಭಾರಿ ಮುಖ್ಯ ಗುರುಗಳು ಸಹಿಪ್ರಾಶಾ ಕೇಸೂರು.