ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ ವೈಭವ

| Published : Feb 12 2025, 12:30 AM IST

ಸಾರಾಂಶ

ರಾತ್ರಿ 8ಕ್ಕೆ ಕಾವೇರಿ ಆರತಿ ಓಂಕಾರದ ಮೂಲಕದ ಚಾಲನೆ ದೊರಕಿತು. ದೂಪಾರತಿಯನ್ನು ಮಾಡಿದ ಅರ್ಚಕರ ತಂಡವು ಗಂಟೆಗಳ ನಾದವನ್ನು ಹೊಮ್ಮಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ದಕ್ಷಿಣ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಮಂಗಳವಾರ ಹರಿದು ಬಂದ ಭಕ್ತಸಾಗರವು ಕಾವೇರಿ ಆರತಿಯ ವೈಭವವನ್ನು ಕಣ್ಣು ತುಂಬಿಕೊಂಡು ಪುನೀತರಾದರು.

ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಆಯೋಜಿಸಲಾಗಿರುವ 13ನೇ ಕುಂಭಮೇಳದ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದ ಸ್ನಾನಘಟ್ಟದಲ್ಲಿ ಗಂಗೆಯನ್ನು ನಿರ್ಮಿಸಿದ ಅರ್ಚಕರು ಬೆಳಗಿದ ದೀಪಗಳು ಕಾವೇರಿ, ಕಪಿಲೆ, ಸ್ಪಟಿಕ ನದಿಗಳ ಸಂಗಮದಲ್ಲಿ ಪ್ರಜ್ವಲಿಸಿದವು. ಈ ವೇಳೆ ಭಕ್ತರು ಜೀವನದಿಗಳಾದ ಕಾವೇರಿ, ಕಪಿಲೆಗೆ ಜಯಕಾರ ಹಾಕಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ತಿರುಚ್ಚಿ ಸಂಸ್ಥಾನ ಮಠದ ಶ್ರೀ ಜಯೇಂದ್ರತೀರ್ಥಪುರಿ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಮಂಗಳವಾದ್ಯಗಳಲ್ಲಿ ಕರೆ ತರಲಾಯಿತು.

ನಂತರ ರಾತ್ರಿ 8ಕ್ಕೆ ಕಾವೇರಿ ಆರತಿ ಓಂಕಾರದ ಮೂಲಕದ ಚಾಲನೆ ದೊರಕಿತು. ದೂಪಾರತಿಯನ್ನು ಮಾಡಿದ ಅರ್ಚಕರ ತಂಡವು ಗಂಟೆಗಳ ನಾದವನ್ನು ಹೊಮ್ಮಿಸಿತು. ಚಾಮರಗಳನ್ನು ಬೀಸಿದರು. ಶಿವಸ್ತುತಿಯು ಮೊಳಗುತ್ತಿದ್ದಂತೆ ದೀಪಗಳನ್ನು ಒಂಭತ್ತು ಅರ್ಚಕರು ಹೊತ್ತಿಸಿದರು. ಕಾವೇರಿ ಮಾತೆಗೆ ಮೂರು ಸುತ್ತು ಬೆಳಗಿ, ಆಗಸಕ್ಕೆ ತೋರಿದರು. ಕಾಲಭೈರವ, ರುದ್ರ ಶ್ಲೋಕಗಳ ಗೀತೆಗಳ ಹಿಮ್ಮೇಳವು ಭಾವ ತೀವ್ರತೆಯನ್ನು ಹೆಚ್ಚಿಸಿತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ, ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಮೊದಲಾದವರು ಇದ್ದರು.