ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ನಲ್ಲಿ ಡಿ. 29 ರಿಂದ ಒಂದು ವರ್ಷಗಳ ಕಾಲ 25 ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಪವಿತ್ರವರ್ಷ ಜ್ಯುಬಿಲಿ ಆಯೋಜಿಸಲಾಗಿದೆ ಎಂದು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾರ್ಡ್ ಮೊರಾಸ್ ತಿಳಿಸಿದರು.ಪೋಪ್ ಅವರ ಸೂಚನೆಯಂತೆ 2025ನ್ನು ಪವಿತ್ರ ಜ್ಯುಬಿಲಿ ವರ್ಷ ಎಂದು ವಿಶ್ವದಾದ್ಯಂತ ಆಚರಿಸುತ್ತಿದ್ದು, ಡಿ. 24ರಂದು ಪೋಪ್ ಚಾಲನೆ ನೀಡಿರುವುದಾಗಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಾರಿಯ ಜ್ಯುಬಲಿ ಆಚರಣೆಗೆ ಭರವಸೆಯ ಯಾತ್ರಿಕರು ಎಂಬ ಧ್ಯೇಯವಾಕ್ಯ ಘೋಷಿಸಲಾಗಿದೆ. ಮೈಸೂರು ಧರ್ಮ ಪ್ರಾಂತ್ಯದಲ್ಲಿ ಡಿ. 29 ರಿಂದ ಆಚರಿಸಲಾಗುತ್ತಿದೆ. ಅಂದು ಸಂಜೆ 4 ಗಂಟೆಗೆ ಬನ್ನಿಮಂಟಪದ ದೀನರ ಮಾತೆ ದೇವಾಲಯದಿಂದ 8 ಅಡಿ ಎತ್ತರದ ವಿಶೇಷ ಶಿಲುಬೆಯ ಮೆರವಣಿಗೆ ಹೊರಟು ಸಂತ ಫಿಲೋಮಿನಾ ಚರ್ಚ್ ತಲುಪುತ್ತದೆ. ಬಳಿಕ ಸಂಜೆ 6 ಗಂಟೆಗೆ ಚರ್ಚ್ ಆವರಣದಲ್ಲಿ ಬಲಿಪೂಜೆ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ವೇಳೆ ಕ್ರೈಸ್ತ ಭಕ್ತಿ ಗೀತೆ ಹಾಡಲಾಗುವುದು ಎಂದರು.ಮೈಸೂರು ಧರ್ಮ ಪ್ರಾಂತ್ಯಕ್ಕೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ನಾಲ್ಕು ಜಿಲ್ಲೆಗಳು ಸೇರುತ್ತವೆ. ಈ ಎಲ್ಲಾ ಜಿಲ್ಲೆಗಳಿಂದ ಸುಮಾರು 5 ರಿಂದ 6 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಲ್ಲದೆ, ವಿವಿಧ ಚರ್ಚ್, ಸಂಸ್ಥೆಗಳು, ಜಿಲ್ಲಾ ಕೇಂದ್ರಗಳಲ್ಲಿ ವರ್ಷವಿಡೀ ಆಧ್ಯಾತ್ಮಿಕ, ಸಾಮಾಜಿಕ ಚಟುವಟಕೆ ಹಮ್ಮಿಕೊಳ್ಳಲಾಗುವುದು. ಜ್ಯುಬಿಲಿ ವರ್ಷ 2026ರ ಜ. 6ಕ್ಕೆ ಅಂತ್ಯವಾಗಲಿದ್ದು, ಬಳಿಕ ಶಿಲುಬೆಯನ್ನು ಚರ್ಚ್ನಲ್ಲಿ ಪ್ರತ್ಯೇಕವಾಗಿ ಇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ವರ್ಷ ಪೂರ್ತಿ ಮೈಸೂರು ಧರ್ಮ ಪ್ರಾಂತ್ಯದ ವ್ಯಾಪ್ತಿಗೆ ಬರುವ ಎಲ್ಲಾ ಚರ್ಚ್ ಗಳಿಗೆ ಶಿಲುಬೆಯನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ನಾನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.ಪ್ರಸ್ತುತ ಜಗತ್ತಿನಾದ್ಯಂತ ಹವಾಮಾನ ಬದಲಾವಣೆ, ಯುದ್ಧದ ಪರಿಸ್ಥಿತಿ ಇದ್ದು, ಇದರಿಂದಾಗಿ ಜಗತ್ತಿನ ಜನತೆ ಕಂಗೆಟ್ಟಿದ್ದಾರೆ. ಜನರಲ್ಲಿ ಪ್ರಾರ್ಥನೆ, ಪ್ರೀತಿ, ವಿಶ್ವಾಸದಿಂದ ಭರವಸೆ ಮೂಡಿಸಿ, ಶಾಂತಿ ನೆಲೆಸುವಂತೆ ಮಾಡಬೇಕಿದೆ. ಹೀಗಾಗಿ ಈ ಜ್ಯುಬಿಲಿಯಲ್ಲಿ ಭರವಸೆಯ ಯಾತ್ರಿಕರು ವಿಷಯ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಧರ್ಮಗುರುಗಳಾದ ಸ್ಟ್ಯಾನ್ಲಿ ಅಲ್ಮೆಡಾ, ಸೆಬಾಸ್ಟಿನ್, ಜೋಸೆಫ್ ಮರಿ, ಫಾಕಿಯ ರಾಜ್ ಇದ್ದರು.