ಅಂಬೇಡ್ಕರ್‌ ರಚಿಸಿದ ಸಂವಿಧಾನ ಜನತೆಗೆ ನೀಡಿದ ಕೊಡುಗೆಯಾಗಿದೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಳ್ಳುವ ಮೂಲಕ ಸುಭದ್ರ ನಾಡು ಕಟ್ಟುವಲ್ಲಿ ಶ್ರಮಿಸೋಣ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿ:

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ 135ನೇ ಜನ್ಮದಿನಾಚರಣೆಯನ್ನು ಮಂಗಳವಾರ ನಗರದಲ್ಲಿ ವಿವಿಧ ಸಂಘ-ಸಂಸ್ಥೆ, ರಾಜಕೀಯ ಪಕ್ಷ, ಸಾರ್ವಜನಿಕರು ಅದ್ಧೂರಿಯಾಗಿ ಆಚರಿಸಿದರು. ನಗರದಾದ್ಯಂತ ಅಭಿಮಾನಿಗಳಿಂದ ಎಲ್ಲೆಡೆ ಬೈಕ್‌ ರ‍್ಯಾಲಿ ನಡೆಯಿತು.

ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿಯ ಅಂಬೇಡ್ಕರ್‌ ವೃತ್ತ, ಕೆಎಂಸಿಆರ್‌ಐ ಬಳಿಯ ಅಂಬೇಡ್ಕರ್‌ ಮೂರ್ತಿಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಆಮ್‌ ಆದ್ಮಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ನಾಯಕರು, ಸಂಘಟನೆಗಳ ಪ್ರಮುಖರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಬಳಿಕ ಅಂಬೇಡ್ಕರ್‌ ಸಾಧನೆ, ಬೆಳೆದು ಬಂದ ಹಾದಿ, ಅವರು ರಚಿಸಿದ ಸಂವಿಧಾನದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಭದ್ರ ನಾಡು ಕಟ್ಟೋಣ:

ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿದ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಅಂಬೇಡ್ಕರ್‌ ರಚಿಸಿದ ಸಂವಿಧಾನ ಜನತೆಗೆ ನೀಡಿದ ಕೊಡುಗೆಯಾಗಿದೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಳ್ಳುವ ಮೂಲಕ ಸುಭದ್ರ ನಾಡು ಕಟ್ಟುವಲ್ಲಿ ಶ್ರಮಿಸೋಣ ಎಂದರು.

ಶೋಷಿತರಿಗಾಗಿ ಹೋರಾಟ:

ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಡಾ. ಅಂಬೇಡ್ಕರ್‌ ಅ‍ವರು ಎಲ್ಲ ಜನಾಂಗವನ್ನು ಒಟ್ಟಿಗೆ ಸೇರಿಸಿ ಜಾತಿ, ಪಂಗಡಗಳೆನ್ನದೇ ಎಲ್ಲರೂ ಒಂದೇ ಸೂರಿನಲ್ಲಿ ಬದುಕಬೇಕೆಂದು ಹೋರಾಟ ಮಾಡಿದವರು. ಶೋಷಿತ ಜನಾಂಗವನ್ನು ಮುಂದಕ್ಕೆ ತರಲು ಸತತ ಹೋರಾಟ ನಡೆಸಿದವರು ಎಂದು ಬಣ್ಣಿಸಿದರು.

ಕನಸು ನನಸಾಗಿಸೋಣ:

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ಅಂಬೇಡ್ಕರ್‌ ಕನಸು ನನಸಾಗಿಲ್ಲ. ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಮಾನತೆ ಎನ್ನುವುದು ಇಂದಿಗೂ ಪೂರ್ಣವಾಗಿಲ್ಲ. ಹಾಗಾಗಿ ನಾವೆಲ್ಲರೂ ಸೇರಿ ಅಂಬೇಡ್ಕರ್‌ ಕನಸನ್ನು ನನಸು ಮಾಡುವ ದಾರಿಯಲ್ಲಿ ಸಾಗಬೇಕಿದೆ ಎಂದರು.

ಪಾಲಿಕೆಯಿಂದ ನಮನ:

ಉಪಮೇಯರ್‌ ಸಂತೋಷ ಚವ್ಹಾಣ, ಪ್ರತಿಪಕ್ಷದ ನಾಯಕ ಇಮ್ರಾನ್ ಯಲಿಗಾರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಉಪ ಆಯುಕ್ತ ವಿಜಯಕುಮಾರ, ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಸವಣೂರ, ಗಿರೀಶ ತಳವಾರ ಸೇರಿದಂತೆ ಹಲವರು ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿದರು.

ಗಣ್ಯರಿಂದ ನಮನ:

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ಪಾಫ ಹಳ್ಳೂರ, ಜೆಡಿಎಸ್‌ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಶ್ರೀಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಅಧ್ಯಕ್ಷ ಬಾಳು ಮಗಜಿಕೊಂಡಿ, ವಿಎಕೆ ಫೌಂಡೇಶನ್‌ ಅಧ್ಯಕ್ಷ ವೆಂಕಟೇಶ ಅಶೋಕ ಕಾಟವೆ, ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ಸಮತಾ ಸೇನಾದ ಗುರುನಾಥ ಉಳ್ಳಿಕಾಶಿ, ಮಾದಿಗ ದಂಡೋರ ಎಂಆರ್‌ಪಿಎಸ್‌ನ ಮಂಜುನಾಥ ಕೊಂಡಪಲ್ಲಿ, ಪಾಲಿಕೆ ಸದಸ್ಯರು, ಶ್ರೀಭುವನೇಶ್ವರಿ ಸೇವಾ ಸಂಘ, ಲೀಡಕರ್‌ ಬಾಯ್ಸ್, ಸಮಾನ ಮನಸ್ಕ ಗೆಳೆಯರ ಬಳಗ, ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದ ಪದಾಧಿಕಾರಿಗಳು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಬೈಕ್‌ ರ‍್ಯಾಲಿ:

ವಿವಿಧ ಪ್ರಗತಿಪರ ಸಂಘಟನೆ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ನಗರದಾದ್ಯಂತ ವಾದ್ಯ ಪರಿಕರಗಳ ಸಮೇತ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಹಲವೆಡೆ ಬೈಕ್‌ ರ‍್ಯಾಲಿ, ಡಿಜೆ ಮೆರವಣಿಗೆ ನಡೆಯಿತು. ಅಂಬೇಡ್ಕರ್‌ ವೃತ್ತದಲ್ಲಿ ಸಮಾನ ಮನಸ್ಕ ಬಳಗದಿಂದ ಅನ್ನಸಂತರ್ಪಣೆ ನಡೆಯಿತು. ಹೆಗ್ಗೇರಿಯ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಜಯಂತ್ಯುತ್ಸವದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.