ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ 77 ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ನಾಟಕೋತ್ಸವದಲ್ಲಿ ಪ್ರತಿ ದಿನ ಸಂಜೆ 6 ಗಂಟೆ ನಾಟಕ ಪ್ರದರ್ಶನಗೊಳ್ಳಲಿದೆ. ನಂತರ ಮೂರೂ ದಿನವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಸಾಧಕರನ್ನು ಅಭಿನಂದಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಹಸಿರು ಭೂಮಿ ಟ್ರಸ್ಟ್ ಹಾಗೂ ಮೇಲುಕೋಟೆ ದೃಶ್ಯ ಟ್ರಸ್ಟ್ ಆಶ್ರಯದಲ್ಲಿ ಡಿ.21ರಿಂದ 3 ದಿನಗಳು ಮೇಲುಕೋಟೆ ಪುತಿನಾ ಕಲಾ ಮಂದಿರದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ರಂಗ ನಮನ, ಹೊಂಬಾಳೆ ನಾಟಕೋತ್ಸವ ನಡೆಯಲಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ 77 ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ನಾಟಕೋತ್ಸವದಲ್ಲಿ ಪ್ರತಿ ದಿನ ಸಂಜೆ 6 ಗಂಟೆ ನಾಟಕ ಪ್ರದರ್ಶನಗೊಳ್ಳಲಿದೆ. ನಂತರ ಮೂರೂ ದಿನವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಸಾಧಕರನ್ನು ಅಭಿನಂದಿಸಲಾಗುವುದು ಎಂದರು.
ಡಿ.21ರಂದು ಬೆಂಗಳೂರಿನ ಕಲಾ ಮಾಧ್ಯಮ ರಂಗ ತಂಡದಿಂದ ನನ್ನ ತೇಜಸ್ವಿ ನಾಟಕವನ್ನು ನಾಗತೀಹಳ್ಳಿ ಚಂದ್ರಶೇಖರ್, ಡಿ.22ರಂದು ಚಿತ್ರನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತ ರಂಗ ತಂಡದಿಂದ ಕೊಡಲ್ಲ ಅಂದ್ರೆ ಕೊಡಲ್ಲ ನಾಟಕವನ್ನು ಪ್ರೊ.ಕೃಷ್ಣೇಗೌಡ, ಡಿ.23ರಂದು ಮೈಸೂರಿನ ನೇಪಥ್ಯ ರಂಗತಂಡದಿಂದ ದೇವನೂರು ಮಹದೇವ ರಚನೆಯ ‘ಒಡಲಾ’ ನಾಟಕವನ್ನು ಟಿ.ಎನ್.ಸೀತಾರಾಮು ಉದ್ಘಾಟಿಸುವರು ಎಂದು ವಿವರಿಸಿದರು.ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಡಿ.23ರಂದು ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ. 2 ಸ್ಥಳೀಯ ಸಂಸ್ಥೆಗಳು ಸೇರಿ 45 ವಿವಿಧ ಕಂಪನಿಗಳು ಭಾಗವಹಿಸಿ ಉದ್ಯೋಗಾಕಾಂಕ್ಷಿಗಳ ಆಯ್ಕೆ ಮಾಡಲಿವೆ. ಈ ಬಾರಿ 500ಕ್ಕೂ ಹೆಚ್ಚು ಉದ್ಯೋಗ ಒದಗಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಸಿರು ಭೂಮಿ ಟ್ರಸ್ಟ್ ಅಧ್ಯಕ್ಷ ಜ್ಞಾನೇಶ್, ಎನ್.ಸಿ.ಸೋಮೇಗೌಡ, ಕೆ.ಆರ್.ಗಿರೀಶ್, ಕೋಕಿಲ, ಶಿವಣ್ಣ ಇದ್ದರು.ಜನರ ಕೊರತೆ ಗ್ರಾಮ ಸಭೆ ಮುಂದೂಡಿಕೆ
ಮಂಡ್ಯ: ತಾಲೂಕಿನ ಬೂದನೂರು ಗ್ರಾಪಂನಿಂದ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಜನರ ಅಗತ್ಯ ಕೋರಂ ಇಲ್ಲದೆ ಮುಂದೂಡಲಾಯಿತು. ಗ್ರಾಮಸಭೆ ನೋಡಲ್ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ಸಭೆ ಆಗಮಿಸಿದ್ದರು. ಸಭೆಯನ್ನು ಬೆಳಗ್ಗೆ 11 ಆರಂಭಿಸಲು ಪಿಡಿಒ ಸ್ವಾಮಿ, ಕಾರ್ಯದರ್ಶಿ ಪವಿತ್ರ, ಗ್ರಾಮ ಆಡಳಿತಾಧಿಕಾರಿ ಮೇಘ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಜರಾಗಿ ಅರ್ಧ ಗಂಟೆಗಳ ಕಾದರು. ನೋಡಲ್ ಅಧಿಕಾರಿ ಮತ್ತೆ 15 ನಿಮಿಷ ಕಾಲಾವಕಾಶ ನೀಡಿ ಕಾಯ್ದರೂ ಜನ ಬರಲೇ ಇಲ್ಲ. ಬಳಿಕ ಅಧ್ಯಕ್ಷೆ ಮಾನಸ, ಗ್ರಾಮಸಭೆ ಮುಂದೂಡಿರುವುದಾಗಿ ಘೋಷಿಸಿದರು. ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೋಭಾಶ್ರೀ ಮಾತನಾಡಿ, ಮುಂದಿನ ಗ್ರಾಮಸಭೆ ದಿನಾಂಕ ಘೋಷಿಸುವಂತೆ ಒತ್ತಾಯಿಸಿದಾಗ ನೋಡೆಲ್ ಅಧಿಕಾರಿ ವಾರದಲ್ಲೇ ಸಭೆ ದಿನಾಂಕಗೊಳಿಸುವ ಭರವಸೆ ನೀಡಿದರು. ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್ ಮಾತನಾಡಿ, ಗ್ರಾಮಸಭೆಗೆ ಇಲಾಖಾ ಅಧಿಕಾರಿಗಳನ್ನು ಕರೆಸುವಂತೆ ಆಗ್ರಹಿಸಿ ಇಲಾಖಾ ಸೌಲಭ್ಯ ಮಾಹಿತಿಯನ್ನಾದರೂ ಒದಗಿಸುವಂತೆ ಒತ್ತಾಯಿಸಿದರು.