ಒಳಮೀಸಲಾತಿ ವರದಿ ಅನುಷ್ಠಾನಗೊಳ್ಳಲಿದೆ

| Published : Aug 09 2025, 02:02 AM IST

ಒಳಮೀಸಲಾತಿ ವರದಿ ಅನುಷ್ಠಾನಗೊಳ್ಳಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯ ಒಳಾಂಗಣ, ಹೊರಾಂಗಣ ವಿನ್ಯಾಸದ ಅಗತ್ಯ ವಸ್ತುಗಳ ಮಾರಾಟ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗದ ಒಳಮೀಸಲಾತಿ ವರದಿ ಅನುಷ್ಠಾನಗೊಳ್ಳಲಿದೆ. ಸಮುದಾಯವರು ತಾಳ್ಮೆಯಿಂದ ಇರಬೇಕು. ವರದಿ ಅನುಷ್ಠಾನಕ್ಕೆ ಯಾರ ಆಕ್ಷೇಪವಿಲ್ಲ. ಎಲ್ಲಾ ಬಲಗೈ-ಎಡಗೈ ಸಮುದಾಯದ ಶಾಸಕರು, ಸಚಿವರು ಒಗ್ಗಟ್ಟಾಗಿದ್ದೇವೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಮೈಸೂರು ವಿವಿ ಡಾ. ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರವು ಶುಕ್ರವಾರ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕಯುತ ಸಂಸದೀಯಪಟು ವೈ. ರಾಮಕೃಷ್ಣ ಅವರ ಸಾಧನೆಗಳು ಬದುಕು, ಸಂಘಟನೆ ಮತ್ತು ರಾಜಕಾರಣ ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ನಾಗಮೋಹನದಾಸ್ ಆಯೋಗವು 1300 ಪುಟದ ವೈಜ್ಞಾನಿಕವಾದ ವರದಿಯಾಗಿದ್ದು, ಆಳವಾಗಿ ಅಧ್ಯಯನ ಮಾಡಬೇಕಿದೆ. ಈಗಾಗಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ತೀರ್ಮಾನಿಸಲಿದೆ ಎಂದು ಅವರು ಹೇಳಿದರು.

ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಸುಳ್ಳಾಗಿದೆ. ವರದಿ ಅನುಷ್ಠಾನಕ್ಕೆ ಯಾರ ಆಕ್ಷೇಪವಿಲ್ಲ. ಎಲ್ಲಾ ಬಲಗೈ-ಎಡಗೈ ಸಮುದಾಯದ ಶಾಸಕರು, ಸಚಿವರು ಒಗ್ಗಟ್ಟಾಗಿದ್ದೇವೆ. ಆ.16 ರಂದು ನಡೆಯುವ ಸಂಪುಟ ಸಭೆಯಲ್ಲಿ ಒಟ್ಟಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

101 ಪಂಗಡಗಳಿಗೂ ಯಾವುದೇ ಅನ್ಯಾಯ ಆಗುವುದಿಲ್ಲ. ಹಾವನೂರು, ಸದಾಶಿವ, ಮಾಧುಸ್ವಾಮಿ ಆಯೋಗಗಳ ವರದಿಯಲ್ಲಿ ಹಾಗೂ ನ್ಯಾ. ನಾಗಮೋಹನ ದಾಸ್ ವರದಿಯಲ್ಲಿ ಸಣ್ಣ ಪ್ರಮಾಣದ ಅಂಕಿ- ಅಂಶ ವ್ಯತ್ಯಾಸವಿದೆ. ಆದರೆ, ನಾಗಮೋಹದಾಸ್ ಅವರು ಬಹಳ ವೈಜ್ಞಾನಿಕ ವರದಿ ನೀಡಿದ್ದಾರೆ ಎಂದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನೆಯಲ್ಲಿ ನಡೆದ ಮೊದಲ ಸಭೆಯಲ್ಲಿಯೇ ವರದಿ ಅನುಷ್ಠಾನಗೊಂಡ ನಂತರ ಎದುರಿಸಬೇಕಾದ ಸವಾಲುಗಳನ್ನು ತೀರ್ಮಾನಿಸಿ, ಎಲ್ಲಾ ದಲಿತ ಸಮುದಾಯದ ಶಾಸಕರು, ಸಚಿವರು ನಿರ್ಧಾರ ಕೈಗೊಂಡಿದ್ದಾರೆ. ವರದಿಯಲ್ಲಿ ಏರು ಪೇರುಗಳು ಇದ್ದರೆ ಚರ್ಚೆ ಮಾಡಿ ವಿಧಾನಸಭೆಯಲ್ಲಿ ಸರಿಪಡಿಸಿ ತೀರ್ಮಾನ ಮಾಡುತ್ತೇವೆ. ಬೇರೆ ಗೊಂದಗಳಿಗೆ ಅವಕಾಶ ಕೊಡಬಾರದು ಎಂದು ಮಾತನಾಡಿಕೊಂಡಿದ್ದೇವೆ. ಎಡ- ಬಲ ನಾಯಕರೆಲ್ಲ ಸೇರಿ ಸಮುದಾಯಕ್ಕೆ ಸಂದೇಶ ಕೊಡಲಿದ್ದೇವೆ ಎಂದು ಅವರು ಹೇಳಿದರು.

35 ವರ್ಷದ ಒಳ ಮೀಸಲು ಜಾರಿಗೆ ಹೋರಾಟ ನಡೆದಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆಯೇ ಸಾಮಾಜಿಕ ನ್ಯಾಯದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದ್ದು, ಯಾವುದೇ ಗೊಂದಲ ಬೇಡ. ಸ್ಲೋ ಅಂಡ್ ಸ್ಟಡಿ ವಿನ್ಸ್ ದ ರೇಸ್ ಎಂದು ಅವರು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವರಾದ ಕೋಟೆ ಎಂ. ಶಿವಣ್ಣ, ಬಿ. ಸೋಮಶೇಖರ್, ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್, ಮಾಜಿ ಸದಸ್ಯ ಆರ್. ಧರ್ಮಸೇನ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಮಾತಾಂಗ ಟ್ರಸ್ಟ್ ಅಧ್ಯಕ್ಷರಾದ ವೈ. ರಾಮಕೃಷ್ಣ ಪುತ್ರ ಲೋಕೇಶ್, ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಸ್. ಮೂರ್ತಿ, ಡಾ. ಬಾಬೂ ಜಗಜೀವನ ರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಪೀಠದ ನಿರ್ದೇಶಕ ಪ್ರೊ.ಕೆ. ಸದಾಶಿವ ಇದ್ದರು.