ಪುಸ್ತಕವನ್ನು ಓದುವ ಅಭಿರುಚಿ ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಹಿಂದಿನ ಜನ ಅಪೂರ್ವ ಗ್ರಂಥಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರು.
ಗದಗ: ಮೊಬೈಲ್ ಗೀಳಿನಿಂದ ಇಂದಿನ ಪೀಳಿಗೆ ಪುಸ್ತಕ, ಪತ್ರಿಕೆಗಳನ್ನು ಓದಲು ಮನಸ್ಸು ಮಾಡುತ್ತಿಲ್ಲ. ಅವಸರದ ಜಗತ್ತು ಓದುವ ಸಂಸ್ಕೃತಿಯನ್ನು ದೂರ ಮಾಡುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆ. ಇದನ್ನು ತಡೆಯಲು ಕಬ್ಬಿಗರ ಕೂಟ ಹಮ್ಮಿಕೊಂಡ ಗೃಹ ಗ್ರಂಥಾಲಯ ಯೋಜನೆ ಸಹಕಾರಿಯಾಗಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ. ಕೆ.ಎಚ್. ಬೇಲೂರ ತಿಳಿಸಿದರು.
ನಗರದ ಮಾಜಿ ನಗರಸಭೆ ಸದಸ್ಯ ವಿಜಯಕುಮಾರ ಶೆಟ್ಟರ ಅವರ ಮನೆಯಲ್ಲಿ ಕಬ್ಬಿಗರ ಕೂಟ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜಿಲ್ಲಾದ್ಯಂತ ಆಸಕ್ತರ ಮನೆಗಳಲ್ಲಿ ಆರಂಭಿಸಲು ಉದ್ದೇಶಿಸಿದ ಗೃಹ ಗ್ರಂಥಾಲಯ ಸ್ಥಾಪನೆಯಡಿ ಪ್ರಾರಂಭಿಸಿದ ಪ್ರಥಮ ಗೃಹ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಪಾದಕ ಮಂಜುನಾಥ ಅಬ್ಬಿಗೇರಿ ಮಾತನಾಡಿ, ಪುಸ್ತಕವನ್ನು ಓದುವ ಅಭಿರುಚಿ ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಹಿಂದಿನ ಜನ ಅಪೂರ್ವ ಗ್ರಂಥಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ಆದರೆ ಇಂದಿನ ಪೀಳಿಗೆಯಲ್ಲಿ ಅಂಥ ಪ್ರವೃತ್ತಿ ಕಂಡುಬರುತ್ತಿಲ್ಲ. ಈ ಹಿನ್ನೆಲೆ ಮನೆ ಮನೆಗಳಲ್ಲಿ ಗೃಹಗ್ರಂಥಾಲಯ ಪ್ರಾರಂಭಿಸಿ ಪುಸ್ತಕಗಳು ಮಕ್ಕಳಿಗೆ ಓದಲು ದೊರಕುವಂತೆ ಮಾಡಬೇಕು ಎಂದರು.ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಸ್ಥಾಪಿಸುವ ಯೋಜನೆ ರೂಪಿಸಿದ್ದು, ಆದರೆ ಒಂದು ಪ್ರಮಾಣಪತ್ರ ನೀಡಿ ಗ್ರಂಥಾಲಯ ಪ್ರಾರಂಭಿಸಬೇಕೆಂದು ಹೇಳಿದರೆ ಗ್ರಂಥಾಲಯ ಸ್ಥಾಪನೆಗೆ ಜನ ಮುಂದೆ ಬರುವದಿಲ್ಲ. ಕಾರಣ ಕಬ್ಬಿಗರ ಕೂಟ ಪುಸ್ತಕ ಸಂಸ್ಕೃತಿ ಮತ್ತು ವಾಚನಾಭಿರುಚಿ ಬೆಳೆಸಲು ಉಚಿತವಾಗಿ 10 ಪುಸ್ತಕಗಳನ್ನು ಮತ್ತು ಪ್ರಮಾಣಪತ್ರ ನೀಡಲು ಗೃಹ ಗ್ರಂಥಾಲಯ ಯೋಜನೆ ಕೈಗೊಂಡಿದ್ದು, ಆಸಕ್ತರು ಯಾವುದೇ ಹಣ ಖರ್ಚಿಲ್ಲದೆ ಗೃಹಗ್ರಂಥಾಲಯ ಸ್ಥಾಪನೆಗೆ ಮುಂದೆ ಬರಬೇಕೆಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಅವರು ಗ್ರಂಥಾಲಯವನ್ನು ಮನೆಯಲ್ಲಿ ಸ್ಥಾಪಿಸಲು ಒಪ್ಪಿದ ವಿಜಯಕುಮಾರ ಶೆಟ್ಟರ ಅವರಿಗೆ 10 ಗ್ರಂಥಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಈ ವೇಳೆ 75 ವರ್ಷ ಪೂರೈಸಿದ ಸಾಹಿತಿ ಡಿ.ವಿ. ಬಡಿಗೇರ ಹಾಗೂ ನಗರಸಭೆ ಸದಸ್ಯ ಮುತ್ತಣ್ಣ ಮುಶಿಗೇರ ಅವರನ್ನು ಸನ್ಮಾನಿಸಲಾಯಿತು.ವಿಜಯಕುಮಾರ ಶೆಟ್ಟರ, ರಾಮಚಂದ್ರ ಮಾನೆ, ರಾಜೇಶ್ವರಿ ಶೇಟ್ಟರ, ಪ್ರ.ತೋ. ನಾರಾಯಣಪೂರ, ನಜೀರ ಸಂಶಿ, ವಿರೂಪಾಕ್ಷಪ್ಪ ಗೊಜನೂರ, ಬಸವರಾಜ ಬಟ್ಟೂರ, ಅಬ್ದುಲ್ ರೆಹಮಾನ ಹುಯಿಲಗೋಳ, ಎಂ.ಸಿ. ಬಟ್ಟೂರ, ಎಚ್.ಬಿ. ಯಲಬುರ್ಗಿ, ರೇಣುಕಾ ಅಮಾತೆ, ಸ್ಮಿತಾ ಗುಜಮಾಗಡಿ, ಅನ್ನಪೂರ್ಣ ಯಲಬುರ್ಗಿ, ಡಾ. ಶಿಲ್ಪಾ ಕುಷ್ಟಗಿ, ರಾಜಗೋಪಾಲ, ಮಂಗಳಾ ಜಿ., ಶಂಕ್ರಮ್ಮಾ ಬಟ್ಟೂರ, ರೇಣುಕಾ ಬಟ್ಟೂರ, ಸುವರ್ಣ ಕೊಣ್ಣೂರ, ಡಿ. ರೇಣುಕಾ, ವಿಶ್ವನಾಥ ಖಾನಾಪೂರ, ಮಂಜುನಾಥ ಬಟ್ಟೂರ, ಡಾ. ಕೆ. ಯೋಗೇಶನ್, ಬಸವರಾಜ ವಾರಿ, ಗೋಪಾಲ ಮಳಗಿ, ವಿಶ್ವನಾಥ ಶೆಟ್ಟರ ಮೊದಲಾದವರು ಇದ್ದರು. ಅಂದಾನೆಪ್ಪ ವಿಭೂತಿ ಸ್ವಾಗತಿಸಿದರು. ರಾಜೇಶ್ವರಿ ಶೆಟ್ಟರ ಸ್ವರಚಿತ ಕವನ ವಾಚನ ಮಾಡಿದರು.