ಸಾರಾಂಶ
ಕೊರಟಗೆರೆ: ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ದಸರಾ ಕ್ರೀಡಾಕೂಟದ ಆಯೋಜಕರಾದ ಮಂಜುನಾಥ್ ಹಾಗೂ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ವಜೀರ ನಡುವಿನ ಜಗಳದಲ್ಲಿ ತಾಲೂಕಿನ ಕ್ರೀಡಾಪಟುಗಳು ಪಡಬಾರದ ಕಷ್ಟ ಅನುಭವಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಕೊರಟಗೆರೆ: ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ದಸರಾ ಕ್ರೀಡಾಕೂಟದ ಆಯೋಜಕರಾದ ಮಂಜುನಾಥ್ ಹಾಗೂ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ವಜೀರ ನಡುವಿನ ಜಗಳದಲ್ಲಿ ತಾಲೂಕಿನ ಕ್ರೀಡಾಪಟುಗಳು ಪಡಬಾರದ ಕಷ್ಟ ಅನುಭವಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಕ್ರೀಡಾಂಗಣದಲ್ಲಿ ಆ.೨೫ ರಂದು ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗಳ ಸಹಯೋಗದಲ್ಲಿ ಕೊರಟಗೆರೆ ತಾಲೂಕು ದಸರಾ ಕ್ರೀಡಾ ಕೂಟವನ್ನು ಆಯೋಜಿಸಲಾಗಿತ್ತು. ಆದರೆಯಾವುದೇ ಪ್ರಚಾರ ವಿಲ್ಲದೆ, ಕ್ರೀಡಾ ಪಟುಗಳಿಗೂ ಸಹ ಮಾಹಿತಿ ನೀಡದೆ ಕ್ರೀಡಾಕೂಟ ನಡೆಸಲಾಗುತ್ತಿತ್ತು. ತಾಲೂಕಿನಿಂದ ಕೆಲವೇ ಕಲವು ಕ್ರೀಡಾ ಪಟುಗಳು ಬಂದಿದ್ದರು, ಮಧ್ಯಾಹ್ನ ೧೨ ಗಂಟೆ ಯಾದರೂ ಆಯೋಜಕರಾಗಲಿ, ಅಧಿಕಾರಿಗಳಾಗಲಿ ಕ್ರೀಡಾ ಮೈದಾನಕ್ಕೆ ಬಂದಿರಲಿಲ್ಲ. ನಾಲೈದು ಮಂದಿ ದೈಹಿಕ ಶಿಕ್ಷಕರು ಚೇರ್ ಮೇಲೆ ಕುಳಿತು ಟೈಮ್ ಪಾಸ್ ಮಾಡುತ್ತಿದ್ದರು. ಕ್ರೀಡಾ ಚಟುವಕೆ ನಡೆಯಬೇಕಿದ್ದ ಕ್ರೀಡಾಂಗಣ ದೊಡ್ಡ ಕಲ್ಲು, ಜಲ್ಲಿ ಕಲ್ಲುಗಳು, ಮುಳ್ಳುಗಳಿಂದ ತುಂಬಿತ್ತು. ಇದರಿಂದ ರೋಸಿ ಹೋದ ಕ್ರೀಡಾಪಟುಗಳು ಪ್ರತಿಭಟನೆ ಮಾಡಲು ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ಕ್ರೀಡಾಂಗಣಕ್ಕೆ ಆಗಮಿಸಿದ ವಿಚಾರಿಸುವ ವೇಳೆ ಆಯೋಜಕರಾದ ಮಂಜುನಾಥ್ ಹಾಗೂ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವಜೀರ್ ಒಬ್ಬರ ಮೇಲೆ ಒಬ್ಬರು ತಪ್ಪುಗಳನ್ನು ಹಾಕಿಕೊಂಡು ಜಗಳಕ್ಕೆ ಬಿದ್ದರು. ಈ ವೇಳೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಉಳಿದ ಶಿಕ್ಷಕರು ಇಬ್ಬರನ್ನು ಸಮಾಧಾನ ಮಾಡಿದರು. ಇನ್ನೂ ಸರ್ಕಾರದ ನಿಯಮಾವಳಿಯಂತೆ ಕ್ರೀಡಾಪಟುಗಳಿಗೆ ನೀರಿನ ವ್ಯವಸ್ಥೆ, ಊಟ, ತುರ್ತು ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆ್ಯಂಬುಲೆನ್ಸ್ ಇದಾವುದು ಅಲ್ಲಿ ಇರಲಿಲ್ಲ. ಇದನ್ನು ಗಮನಿಸಿದ ನಾಗಣ್ಣ ಕ್ರೀಡಾಕೂಟವನ್ನು 31ರಂದು ನಡೆಸುವಂತೆ ಸೂಚಿಸಿದರು.ಬಾಕ್ಸ್...
ಗೃಹ ಸಚಿವರ ಮೂಗಿನ ಕೆಳಗೆ ಹಣ ಹೊಡೆಯಲು ಸ್ಪರ್ಧೆ ರಾಜ್ಯದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತವರು ಕ್ಷೇತ್ರದಲ್ಲಿಯೇ ಭ್ರಷ್ಟಾಚಾರ ವ್ಯಾಪಕವಾಗಿ ತಾಂಡವಾಡುತ್ತಿದೆ ಎನ್ನುವುದು ಈ ಘಟನೆ ಸಾಕ್ಷಿಯಾಗಿದೆ ಎಂದು ಮೈತ್ರಿ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಅದರಲ್ಲೂ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ನಾ ಮುಂದು ತಾಮುಂದು ಎನ್ನುವಂತೆ ಹಣ ಹೊಡೆಯಲು ಕ್ರೀಡಾಕೂಟವನ್ನು ನೆಪ ಮಾಡಿಕೊಂಡಿರುವುದು ಜಗಜ್ಜಾಹೀರಾಗಿದ್ದು ಸಭ್ಯ ರಾಜಕಾರಣಿ ಎಂದು ಕರೆಸಿಕೊಳ್ಳುವ ಗೃಹ ಸಚಿವರು ಇದನ್ನು ಬೆಂಬಲಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಸಂಬಳ, ಸವಲತ್ತು ನೀಡಿದರೂ ಕ್ರೀಡಾಕೂಟವನ್ನು ಸರಿಯಾಗಿ ಆಯೋಜನೆ ಮಾಡದೆ ಕಾಟಾಚಾರಕ್ಕೆ ನಡೆಸಲು ಮುಂದಾಗಿದ್ದು ಏಕೆ? ಅದರಲ್ಲೂ ಮಕ್ಕಳಿಗೆ ವೇದಿಕೆಯಾಗಬೇಕಿದ್ದ ಕ್ರೀಡಾಕೂಟವೊಂದರಲ್ಲಿ ಕ್ರೀಡಾಪಟುಗಳೇ ಪ್ರತಿಭಟನೆ ಮಾಡುವ ಹಂತ ತಲುಪುವ ಹಾಗೂ ವಿಶೇಷ ಕರ್ತವ್ಯಾಧಿಕಾರಿಗಳ ಮುಂದೆಯೇ ಜವಾಬ್ದಾರಿ ಹೊತ್ತವರು ಜಗಳವಾಡಿಕೊಳ್ಳುವ ಮಟ್ಟ ತಲುಪಿದ್ದು ಅಧಿಕಾರಿಗಳಿಗೆ ಗೃಹ ಸಚಿವರ ಭಯ ಇಲ್ಲವೆಂಬುದನ್ನು ಸಾಬೀತುಪಡಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.ಈ ಎಲ್ಲ ಘಟನೆಗೆ ಕೊರಟಗೆರೆ ಸ್ಫೋರ್ಟ್ಸ್ ಕ್ಲಬ್ ಕಾರ್ಯದರ್ಶಿ ವಿನಯ್‌ಕುಮಾರ್, ಮುಖಂಡ ಗಟ್ಲಹಳ್ಳಿ ಕುಮಾರ್, ಕ್ರೀಡಾ ಪಟುಗಳಾದ ಹರ್ಷಿತ್, ಸಿದ್ದರಾಜು, ರಂಗನಾಥ್, ದಿಲೀಪ್, ಭರತ್, ಅನಿಲ್ ಸೇರಿದಂತೆ ಹಲವರು ಸಾಕ್ಷಿಯಾದರು.