ಏಕಲವ್ಯ ವಸತಿ ಶಾಲೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ

| Published : Nov 10 2024, 01:38 AM IST

ಏಕಲವ್ಯ ವಸತಿ ಶಾಲೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಏಕಲವ್ಯ ವಸತಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತಪಟ್ಟ ವಿದ್ಯಾರ್ಥಿ ಮನೆಗೆ ಗೃಹ ಸಚಿವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು, ವೈಯಕ್ತಿಕವಾಗಿ ೨ ಲಕ್ಷ ರು.ಗಳ ನಗದನ್ನು ಮೃತ ವಿದ್ಯಾರ್ಯ ತಂದೆ- ತಾಯಿಗಳಿಗೆ ನೀಡಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನಲ್ಲಿ ಏಕಲವ್ಯ ಶಾಲೆ ಸೇರಿದಂತೆ ಹಲವು ವಸತಿ ಶಾಲೆಗಳನ್ನು ತರುವುದಕ್ಕಾಗಿ ನಾನು ಹಗಲಿರುಳು ಶ್ರಮಿಸಿದ್ದೇನೆ, ಈ ಶಾಲೆಗಳ ನಿರ್ಮಾಣಕ್ಕೆ ಇಲಾಖೆ ಮತ್ತು ಸರ್ಕಾರಗಳ ಬಳಿ ಅಲೆದಿದ್ದೇನೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯದೊಂದಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ನನ್ನ ಶ್ರಮವನ್ನು ನಿಮ್ಮಂತಹವರು ಬಂದು ಹಾಳು ಮಾಡುತ್ತೀರಾ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಬಜ್ಜಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅಭಿಲಾಷ್ ಮೃತಪಟ್ಟ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯದ ಕೊರತೆ ಹಾಗೂ ವಿದ್ಯಾರ್ಥಿನಿ ನಿಲಯದ ಅವ್ಯವಸ್ಥೆಯನ್ನು ಕಂಡು ಕೆಂಡಾಮಂಡಲವಾದ ಗೃಹ ಸಚಿವರು, ಶಾಲಾ ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಶಾಲೆಯ ಪ್ರಾಂಶುಪಾಲರು, ಎಲ್ಲಾ ಶಿಕ್ಷಕರು, ಸಿಬ್ಬಂದಿಯ ಸಭೆ ಕರೆದು ಹಲವು ಸಲಹೆ- ಸೂಚನೆಗಳನ್ನು ನೀಡಿ ಎಚ್ಚರಿಕೆಯನ್ನು ನೀಡಿದರು.

ಸ್ಥಳದಲ್ಲೇ ಇದ್ದ ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ತ್ಯಾಗರಾಜು ಹಾಗೂ ಕೆ.ಆರ್.ಡಿ.ಎಲ್ ಇಂಜಿನಿಯರ್‌ಗೆ ವಸತಿ ನಿಲಯದ ಮೂಲಭೂತ ಸೌಕರ್ಯಗಳ ಕೊರತೆಯ ಕಾಮಗಾರಿ ಪಟ್ಟಿಯನ್ನು ಮಾಡಿ ಸಲ್ಲಿಸುವಂತೆ ಆದೇಶಿಸಿದರು.

ಏಕಲವ್ಯ ವಸತಿ ಶಾಲೆಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತೆಗೆದುಕೊಂಡಿದೆ, ಸುಮಾರು ೮ ತಿಂಗಳಿಂದ ವಸತಿ ನಿಲಯದಲ್ಲಿ ಸಂಪೂರ್ಣ ಶಿಕ್ಷಕರು ಮತ್ತು ಸಿಬ್ಬಂದಿಯು ಕನ್ನಡಿಗರ ಬದಲಾಗಿ ಹೊರ ರಾಜ್ಯಗಳಿಂದ ನೇಮಕಗೊಂಡಿದ್ದಾರೆ. ಇವರಲ್ಲಿ ಶೇ.೯೫ ರಷ್ಟು ಮಂದಿಗೆ ಕನ್ನಡ ಬಾಷೆ ಬರುವುದಿಲ್ಲ ಜೊತೆಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿರುವುದಿಲ್ಲ, ಇದನ್ನು ಅರಿತ ಗೃಹ ಸಚಿವರು, ಸುಮಾರು ೨ ಗಂಟೆಗಳ ಕಾಲ ಹೊಸ ಶಿಕ್ಷಕ ಸಿಬ್ಬಂದಿಯ ಸಭೆ ನಡೆಸಿ ಹಲವು ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿದರು ಹಾಗೂ ಮತ್ತೆ ಭೇಟಿ ನೀಡುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ವಸತಿ ನಿಲಯದ ಗುಣಮಟ್ಟದಲ್ಲಿ ಹಲವು ಬದಲಾವಣೆ ತರುವಂತೆ ತಿಳಿಸಿದರು.

ಕಿತ್ತೂರು ರಾಣಿ ಚನ್ನಮ್ಮ ಮತ್ತು ಮುರಾರ್ಜಿ ವಸತಿ ಶಾಲೆಗಳ ಪರಿಶೀಲನೆ:

ಏಕಲವ್ಯ ವಸತಿ ಶಾಲೆ ಪರಿಶೀಲನೆಗೆ ಮುನ್ನ ಡಾ.ಜಿ.ಪರಮೇಶ್ವರ ಹುಲಿಕುಂಟೆ ಗ್ರಾಮದ ಹೆಣ್ಣು ಮಕ್ಕಳ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿದರು. ಇತ್ತೀಚೆಗೆ ವಸತಿ ಶಾಲೆಗಳಲ್ಲಿ ಉದ್ದೇಶ ಪೂರ್ವಕವಾಗಿ ಸಮರ್ಪಕವಾಗಿ ಸಿಸಿ ಕ್ಯಾಮೆರಾಗಳನ್ನು ಸಹ ಅಳವಡಿಸದೆ ಇರುವುದು ಇದರ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು, ಗೃಹ ಸಚಿವರು ವಸತಿ ಶಾಲೆಯನ್ನು ಪರಿಶೀಲಿಸಿ ಪ್ರತಿಯೊಂದರಲ್ಲೂ ಸಮರ್ಪಕವಾಗಿ ಕಾರ್ಯನಿರ್ವಹಿಸಿಕೊಂಡು ಹೋಗುವಂತೆ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಎಚ್ಚರಿಸಿದರು.

ಮಾಧ್ಯಮಗಳಿಗೆ ಸಲಹೆ ನೀಡಿದ ಗೃಹ ಸಚಿವ:

ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸುವಾಗ ಸಂಪೂರ್ಣವಾಗಿ ಘಟನೆಯ ನೈಜತೆಯನ್ನು ಅರ್ಥಮಾಡಿಕೊಳ್ಳಬೇಕು, ಸಮಾಜದಲ್ಲಿ ಹಲವು ತಪ್ಪುಗಳಿದ್ದರೆ ಅವುಗಳನ್ನು ತಿದ್ದುವ ಕೆಲಸ ಮಾಡಬೇಕು, ಇದರಿಂದ ನಮ್ಮ ತಪ್ಪುಗಳನ್ನು ಸಹ ತಿದ್ದುಕೊಂಡು ಕೆಲಸ ಮಾಡುವ ಅವಕಾಶ ಇರುತ್ತದೆ, ಆದರೆ ಇತ್ತೀಚೆಗೆ ಹಲವರು ಮಾಧ್ಯಮದವರು ಅರಿವಿಲ್ಲದ ವರದಿಗಳನ್ನು ನೀಡುತ್ತಿದ್ದಾರೆ, ಯೂ ಟ್ಯೂಬ್ ಚಾನಲ್‌ಗಳು ಸಹ ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ಮಾಡುತ್ತಿದ್ದು, ಇವರಲ್ಲಿ ಹಲವರಿಗೆ ಮಾಧ್ಯಮದ ಜ್ಞಾನವೇ ಇರುವುದಿಲ್ಲಾ. ಇದರಿಂದ ಯೂಟ್ಯೂಬ್‌ಗಳಲ್ಲೂ ಸಹ ಸುಳ್ಳು ಸುದ್ದಿ ಮತ್ತು ವರದಿಗಳು ಬರುತ್ತಿವೆ, ಇನ್ನಾದರೂ ಮಾಧ್ಯಮದವರು ನೈಜತೆಯನ್ನು ಅರಿತು ಜವಾಬ್ದಾರಿಯಿಂದ ಸುದ್ದಿ ಪ್ರಕಟಿಸಿ ಸಮಾಜಮುಖಿ ಕೆಲಸ ಮಾಡಬೇಕೆಂದು ಎಚ್ಚರಿಸಿದರು.

ಮೃತ ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ: ಏಕಲವ್ಯ ವಸತಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತಪಟ್ಟ ವಿದ್ಯಾರ್ಥಿ ಮನೆಗೆ ಗೃಹ ಸಚಿವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು, ವೈಯಕ್ತಿಕವಾಗಿ ೨ ಲಕ್ಷ ರು.ಗಳ ನಗದನ್ನು ಮೃತ ವಿದ್ಯಾರ್ಯ ತಂದೆ- ತಾಯಿಗಳಿಗೆ ನೀಡಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು. ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದ ಸಹಜ ಸಾವು ಎಂದು ವರದಿ ಬಂದಿರುವುದಾಗಿ ತಿಳಿದು ಬಂದಿದ್ದು, ಇನ್ನು ಹೆಚ್ಚಿನ ಮಾಹಿತಿಗಾಗಿ ಎಫ್‌ಎಸ್‌ಎಲ್ ಗೆ ಕಳುಹಿಸಿಕೊಡಲಾಗಿದೆ.

ಸಚಿವರೊಂದಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಅಶೋಕ್, ಉಪವಿಭಾಗಾಧಿಕಾರಿ ಶಿವಪ್ಪ ಗೋಟೂರು, ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.