ಕಲ್ಯಾಣ ಕರ್ನಾಟಕ ತತ್ವಪದಕಾರರ ನೆಲೆವೀಡು: ಡಾ. ದಸ್ತಗೀರ್‌ ಸಾಬ್‌

| Published : Jan 31 2024, 02:19 AM IST

ಕಲ್ಯಾಣ ಕರ್ನಾಟಕ ತತ್ವಪದಕಾರರ ನೆಲೆವೀಡು: ಡಾ. ದಸ್ತಗೀರ್‌ ಸಾಬ್‌
Share this Article
  • FB
  • TW
  • Linkdin
  • Email

ಸಾರಾಂಶ

ತತ್ವಪದ ಸಾಹಿತ್ಯವು ಕ್ರಿಶ ಸುಮಾರು 17- 18ನೇ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ವಿಪುಲವಾಗಿ ಹುಟ್ಟಿಕೊಂಡಿತ್ತು. ಹಾಗಾಗಿಯೇ ಈ ಪ್ರದೇಶವು ತತ್ವಪದಕಾರರ ನೆಲೆವೀಡಾಗಿತ್ತು.

ಬಳ್ಳಾರಿ: ತತ್ವಪದ ಎಂದರೆ ಪರಮಾತ್ಮನ ನಿಜಸ್ಥಿತಿಯನ್ನು ತಿಳಿಸುವ ಸಾಹಿತ್ಯವಾಗಿದೆ. ಅದೊಂದು ಅನುಭಾವಿಕ ಪದಗಳ ಸರಣಿಯೂ ಹೌದು ಎಂದು ಬಳ್ಳಾರಿಯ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಲೇಖಕ ಡಾ. ದಸ್ತಗೀರ್ ಸಾಬ್ ದಿನ್ನಿ ತಿಳಿಸಿದರು.

ತಾಲೂಕಿನ ಮೋಕಾ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದಡಿ ಕನ್ನಡ ವಿಭಾಗದಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ "ತತ್ವಪದ ಸಾಹಿತ್ಯ ಮತ್ತು ಲೋಕನೀತಿ " ವಿಷಯ ಕುರಿತು ಮಾತನಾಡಿದರು.

ತತ್ವಪದ ಸಾಹಿತ್ಯವು ಕ್ರಿಶ ಸುಮಾರು 17- 18ನೇ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ವಿಪುಲವಾಗಿ ಹುಟ್ಟಿಕೊಂಡಿತ್ತು. ಹಾಗಾಗಿಯೇ ಈ ಪ್ರದೇಶವು ತತ್ವಪದಕಾರರ ನೆಲೆವೀಡಾಗಿತ್ತು. ಕಡಕೊಳ ಮಡಿವಾಳಪ್ಪ, ಕಡಲೂರು ಬಸವಲಿಂಗ, ಶಿಶುನಾಳ ಶರೀಫ, ಕೈವಾರ ನಾರಾಯಣಪ್ಪ, ನಿಜಗುಣ ಶಿವಯೋಗಿ ಮುಂತಾದ ತತ್ವಪದಕಾರರ ತತ್ವಪದಗಳಲ್ಲಿ ಗುರುಬೋಧ ಪರಂಪರೆ, ಆಧ್ಯಾತ್ಮಿಕ ಚಿಂತನೆ, ಜಾತಿ ಖಂಡನೆ, ಮಡಿ- ಮೈಲಿಗೆ ಮುಂತಾದ ಬದುಕಿನ ಎಲ್ಲ ವಿಷಯಗಳನ್ನು ರೂಪಕಗಳ ಮುಖಾಂತರ ಕಟ್ಟಿಕೊಟ್ಟಿದ್ದಾರೆ. ಅಲ್ಲದೆ; ತಮ್ಮ ಸಾಹಿತ್ಯದಲ್ಲಿ ಭಕ್ತಿಗೆ ಹೆಚ್ಚು ಮಹತ್ವ ಕೊಡದೆ ಅನ್ಯಾಯ ಅಧರ್ಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಮಕಂದಾರ್ ಅವರು, ತತ್ವಪದ ಸಾಹಿತ್ಯವು ಸಾಗರಕ್ಕಿಂತಲೂ ವಿಶಾಲವಾದದ್ದು. ವಿದ್ಯಾರ್ಥಿಗಳು ತತ್ವಪದಗಳಲ್ಲಿನ ನೀತಿಗಳನ್ನು ಅರಿಯಬೇಕು. ತತ್ವಪದಗಳು ಹಾಗೂ ತತ್ವ ಪದಕಾರರ ಬಗ್ಗೆ ಹೆಚ್ಚು ಹೆಚ್ಚು ಓದುವುದರಿಂದ ಮಾತ್ರ ಅವರ ಆಶಯಗಳು ಗೊತ್ತಾಗುತ್ತವೆ ಎಂದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ.ಜಿ. ಕಲಾವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ಡಾ. ಬೋರಯ್ಯ ಅವರು ವಿಶೇಷ ಉಪನ್ಯಾಸಕರ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಬಕಾಡೆ ಪಂಪಾಪತಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಮಾರೇಶ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾಧ್ಯಾಪಕರಾದ ಪ್ರವೀಣ್, ಆದರ್ಶ, ಅಮಲ್, ಮಂಜುನಾಥ ಹಾಗೂ ಕಾಲೇಜಿನ ಎಲ್ಲ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.