ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಪಡೀಲ್ ಬಳಿಯ ಹೋಮ್ ಸ್ಟೇಯಲ್ಲಿ 2012ರಲ್ಲಿ ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದ ಯುವಕ- ಯುವತಿಯರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ ಪ್ರಕರಣದ 43 ಆರೋಪಿಗಳ ಪೈಕಿ 39 ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಂಗಳೂರಿನ ಆರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಒಟ್ಟು 43 ಆರೋಪಿಗಳ ಪೈಕಿ ಮೂವರು ಈಗಾಗಲೇ ಸಾವಿಗೀಡಾಗಿದ್ದಾರೆ. ಇನ್ನೊಬ್ಬ ಆರೋಪಿ ಅಪ್ರಾಪ್ತನಾಗಿದ್ದು, ಆತನನ್ನು ಈ ಹಿಂದೆಯೆ ಬಾಲ ನ್ಯಾಯಾಲಯವು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ರಾಜ್ಯ ಸರ್ಕಾರ ಪ್ರಕರಣದಿಂದ ಕೈಬಿಟ್ಟಿತ್ತು.ಏನಾಗಿತ್ತು?: 2012ರ ಜುಲೈ 28ರಂದು ಸುಭಾಷ್ ಪಡೀಲ್ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಡೀಲ್ ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಪಾರ್ಟಿ ನಿರತ ಯುವತಿಯರಲ್ಲಿ ಒಬ್ಬಾಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯ ಮಗಳಾಗಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಘಟನೆ ಬಳಿಕ ಪರ- ವಿರೋಧದ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ದಾಳಿಕೋರರು, ಐವರು ಯುವತಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 12 ಮಂದಿಯನ್ನು ಥಳಿಸಿ, ಬಟ್ಟೆ ಬಿಚ್ಚಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಂತಿಮವಾಗಿ ಪೊಲೀಸರು ಎಲ್ಲ ಆರೋಪಿಗಳ ಮೇಲೆ ಆರೋಪಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಾಳಿ ಘಟನೆಯನ್ನು ಚಿತ್ರೀಕರಿಸಲು ತೆರಳಿದ್ದ ಇಬ್ಬರು ಪತ್ರಕರ್ತರ ಹೆಸರನ್ನು ಕೂಡ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ವಕೀಲರಾದ ಶಂಭು ಶರ್ಮ ಮತ್ತು ಕಿಶೋರ್ ಕುಮಾರ್ ಅವರನ್ನೊಳಗೊಂಡ ತಂಡವು ಆರೋಪಿಗಳ ಪರ ವಾದ ಮಂಡಿಸಿತ್ತು.ಸಾಕ್ಷ್ಯಾಧಾರಗಳ ಕೊರತೆ
ಪಡೀಲಿನ ಹೋಂ ಸ್ಟೇ ದಾಳಿಯ ವಿರುದ್ಧ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಘಟನೆ ಕುರಿತು ಡಿಜಿಪಿ ಹುದ್ದೆಗೆ ಸಮಾನವಾದ ಸ್ಥಾನಮಾನ ಹೊಂದಿರುವ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಆರೋಪಿಗಳ ಮೇಲೆ ಸೂಕ್ತ ನಿಗಾ ಇಡದಿರುವುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂಬಿತ್ಯಾದಿ ಅಂಶಗಳನ್ನು ಮಹಿಳಾ ಆಯೋಗ ಶಿಫಾರಸು ಮಾಡಿತ್ತು. ಆದರೆ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳ ಖುಲಾಸೆಯಾಗಿದೆ.