ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹೋಮಿಯೋಪಥಿ ಪ್ರಪಂಚಾದ್ಯಂತ ಅತೀ ಹೆಚ್ಚು ಜನ ಉಪಯೋಗಿಸುವ ಎರಡನೇ ಅತೀ ದೊಡ್ಡ ವೈದ್ಯ ಪದ್ಧತಿಯಾಗಿದೆ ಹಾಗೂ ರೋಗಗಳನ್ನು ಬೇರು ಸಮೇತ ಉಪಶಮನ ಮಾಡುವ ಶಕ್ತಿ ಹೋಮಿಯೋಪಥಿ ಗೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಡಿ.ಎನ್. ಹೇಳಿದರು.ನಗರದಲ್ಲಿ ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಹೋಮಿಯೋಪಥಿ ದಿನ ಹಾಗೂ ಪಿತಾಮಹ ಡಾ.ಸ್ಯಾಮುಯನ್ ಹಾನಿಮನ್ ರ 270ನೇ ಜನ್ಮ ದಿನಾಚಾರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ ವಾಕಥಾನ್ -ವಾಕ್ ಫಾರ್ ಹೋಮಿಯೋಪಥಿಗೆ ಹಸಿರು ಧ್ವಜ ತೋರಿಸಿ ಚಾಲನೆ ನೀಡಿ ಮಾತನಾಡಿದರು,
ಹೋಮಿಯೋಪಥಿಕ್ ಅತ್ಯುತ್ತಮ ವೈದ್ಯ ಉಪಚಾರ ಪದ್ಧತಿಯಾಗಿದ್ದು, ರೋಗಗಳನ್ನು ಬೇರು ಸಮೇತ ಉಪಶಮನ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿರುವುದರಿಂದ ಜಗತ್ತಿನಲ್ಲಿ ಅತಿ ಹೆಚ್ಚು ಜನ ಹೋಮಿಯೋಪಥಿಕ್ ಅನುಸರಿಸುತ್ತಿದ್ದಾರೆ, ಬಿ.ವಿ.ವಿ. ಸಂಘ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯವು ಈ ಪದ್ಧತಿ ಬಗ್ಗೆ ಜಾಗೃತಿ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್.ಜಿ. ಮಠ ಮಾತನಾಡಿ, ಸಾಂಕ್ರಾಮಿಕ-ಅಸಾಂಕ್ರಾಮಿಕ ರೋಗಗಳ ಹತೋಟಿಯಲ್ಲಿ ಆಪದ್ಭಾವನಂತಿರುವ ಹೋಮಿಯೋಪಥಿ ಔಷಧಿಯನ್ನು ಸಮಾಜದ ಕಡೆಯ ಪ್ರಜೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಆಯುಷ್ ವೈದ್ಯರು ಮಾಡಬೇಕೆಂದರು.
ಬವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಪ್ರಾರಂಭಿಸಿರುವ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳಿವೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಚಾರ್ಯ ಡಾ.ಅರುಣ ಹೂಲಿ, ಪ್ರಾಧ್ಯಾಪಕರಾದ ಡಾ.ರವಿ ಕೋಟೆಣ್ಣವರ, ಡಾ.ಅಮರೇಶ ಬಳಗಾನೂರ, ಡಾ.ರುದ್ರೇಶ ಕೊಪ್ಪಳ, ಡಾ.ವಿ.ಎಸ್. ಸಂಕೇಶ್ವರಿ, ಡಾ.ಅಖಿಲಾ ಹುಲ್ಲೂರ, ಡಾ.ವಿಜಯಲಕ್ಷ್ಮೀ ಹಾಗೂ ಎ.ಎಫ್.ಐ ಸಂಘಟನೆಯ ಪದಾಧಿಕಾರಿಗಳಾದ ಡಾ.ಎಸ್.ಎನ್. ಬಾಲರೆಡ್ಡಿ. ಡಾ. ಚಂದ್ರಶೇಖಕ ಕಿರಗಿ, ಡಾ.ನಾಗರಾಜ ಬೇವರಗಿ, ಡಾ.ಶಿವಪ್ರಕಾಶ ಅಯ್ಯನಗೌಡರ, ಡಾ.ವಿ.ಸಿ. ಹಿರೇಮಠ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸೃಷ್ಠಿ ತೋಟದ ಸ್ವಾಗತಿಸಿ ಹೋಮಿಯೋಪಥಿ ವೈದ್ಯ ಪದ್ಧತಿಯ ಕುರಿತು ಮಾತನಾಡಿದರು.ಬಾಕ್ಸ್ಗಮನ ಸೆಳೆದ ವಾಕಥಾನ್ :ಹೋಮಿಯೋಪಥಿಕ್ ದಿನಾಚರಣೆ ನಿಮಿತ್ತ ನಡೆದ ವಾಕ್ ಫಾರ್ ಹೋಮಿಯೋಪಥಿಕ್ ವಾಕಥಾನ್ ಜನರ ಗಮನ ಸೆಳೆಯಿತು, ಬೆಳಗಿನ ಜಾವ ನಗರದ ರೋಟರಿ ಸರ್ಕಲ್‌ನಿಂದ ಪ್ರಾರಂಭವಾಗಿ ಹೋಮಿಯೋಪಥಿ ಕುರಿತು ಅರಿವು ಮೂಡಿಸುವ ಘೋಷ ವಾಕ್ಯಗಳೊಂದಿಗೆ, ನಗರ ಪೋಲಿಸ್ ಠಾಣೆ, ಕೆರೂಡಿ ಆಸ್ಪತ್ರೆ ಮಾರ್ಗವಾಗಿ ಬಸವೇಶ್ವರ ವೃತ್ತ ನಂತರ ಮಹಾವಿದ್ಯಾಲಯಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.