ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದ ಸಂಬಂಧ ಸಿಐಡಿ ಪೊಲೀಸರು ಎರಡನೇ ಬಾರಿಗೆ ಬಿ ರಿಪೋರ್ಟ್ ಅನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದ ಸಂಬಂಧ ಸಿಐಡಿ ಪೊಲೀಸರು ಎರಡನೇ ಬಾರಿಗೆ ಬಿ ರಿಪೋರ್ಟ್ ಅನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಸೂರಜ್ ರೇವಣ್ಣ ಮೇಲೆ ಆರೋಪಕ್ಕೆ ಪೂರಕವಾಗಿ ಸಾಕ್ಷ್ಯಾಧಾರಗಳು ಹಾಗೂ ಸಾಂದರ್ಭಿಕ ಸಾಕ್ಷಿಗಳು ಹಾಗೂ ಯಾವುದೇ ಪುರಾವೆಗಳು ಲಭ್ಯವಾಗದ ಕಾರಣ ನ್ಯಾಯಾಲಕ್ಕೆ ಬಿ ಅಂತಿಮ ವರದಿ ಸಲ್ಲಿಸಿದ್ದಾರೆ.

ಹೊಳೆನರಸೀಪುರ ಮೂಲದ ಜೆಡಿಎಸ್ ಕಾರ್ಯಕರ್ತನೊಬ್ಬ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಸೂರಜ್ ವಿರುದ್ದ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಸಿಐಡಿ ಪೊಲೀಸರು ಈ ಹಿಂದೆ ಸಲ್ಲಿಸಿದ ಬಿ- ರಿಪೋರ್ಟ್ ಅನ್ನು ಪ್ರಶ್ನಿಸಿ ದೂರುದಾರ ನ್ಯಾಯಾಲಯದ ಮೊರೆ ಹೋಗಿದ್ದರು. ಬಿ ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿತ್ತು. ಎರಡನೇ ಬಾರಿಗೆ ತನಿಖೆ ನಡೆಸಿದ ಸಿಐಡಿ ತಂಡ ಇದೀಗ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಿ-ರಿಪೋರ್ಟ್ ಸಲ್ಲಿಸಿದೆ.

ಪ್ರಕರಣದ ವಿವರ:

ಜೆಡಿಎಸ್ ಕಾರ್ಯಕರ್ತರೊಬ್ಬರು ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ 2024ರ ಜೂ.22ರಂದು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸೂರಜ್ ರೇವಣ್ಣ ಮತ್ತು ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಜೂ.23ರಂದು ಸೂರಜ್ ರೇವಣ್ಣ ಅವರನ್ನು ಬಂಧಿಸಿದ್ದರು. ಕೆಲ ತಿಂಗಳ ಕಾಲ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ ಸೂರಜ್ ರೇವಣ್ಣ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಮತ್ತೊಂದೆಡೆ ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ಅವರು ದೂರುದಾರ ಐದು ಕೋಟಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಿದ್ದರು. ಹಣ ನೀಡದಿದ್ದಕ್ಕೆ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪ್ರತಿ ದೂರಿನಲ್ಲಿ ಆರೋಪಿಸಿದ್ದರು. ರಾಜ್ಯ ಸರ್ಕಾರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ಪೊಲೀಸರು ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ 2025ರ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಈ ‘ಬಿ’ ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ, ಮರು ತನಿಖೆಗೆ ಆದೇಶಿಸಿತ್ತು. ಇದೀಗ ಎರಡನೇ ಬಾರಿಯೂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ.

ಸೂರಜ್ ವಿರುದ್ಧ ದಾಖಲಾಗಿದ್ದ ಮತ್ತೊಂದು ಪ್ರಕರಣದಲ್ಲಿ ತನಿಖೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡಲಾಗಿದೆ.