ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬೆಳವಡಿ ಮಲ್ಲಮ್ಮ ಪ್ರಾಧಿಕಾರ ರಚನೆ ಕುರಿತು ಕಾನೂನು, ಕಂದಾಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಾಧಿಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಭರವಸೆ ನೀಡಿದರು.ಮಲ್ಲಮ್ಮನ ಬೆಳವಡಿ ಗ್ರಾಮದ ರಾಣಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಬುಧವಾರ ನಡೆದ ಬೆಳವಡಿ ಮಲ್ಲಮ್ಮ ಉತ್ಸವ 2025ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಫೆ.28, ಮಾ.1 ರವರೆಗೆ ಉತ್ಸವಕ್ಕಾಗಿ ಸರ್ಕಾರ ₹50 ಲಕ್ಷ ಅನುದಾನ ಮಂಜೂರಾಗಿದೆ. ಉತ್ಸವ ಆಚರಿಸಲು ಅಂದಾಜು 3 ಎಕರೆ ಶಾಶ್ವತ ಜಾಗದ ಅವಶ್ಯಕತೆ ಇದ್ದು, ಯಾರಾದರೂ ಗ್ರಾಮಸ್ಥರು ಸೂಕ್ತ ಜಾಗ ನೀಡಲು ಮುಂದೆ ಬಂದರೇ ಸರ್ಕಾರದಿಂದ ಖರೀದಿಲಾಗುವುದು. ಮಲ್ಲಮ್ಮಳ ಮೂರ್ತಿಯನ್ನು ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಥಾಪಿಸುವ ಕೆಲಸ ಸರ್ಕಾರದ ಹಂತದಲ್ಲಿದೆ. ಮುಖ್ಯಮಂತ್ರಿಗಳನ್ನು, ಸಚಿವರನ್ನು ಉತ್ಸವಕ್ಕೆ ಆಮಂತ್ರಿಸಲಾಗುವುದು. ಉತ್ಸವವನ್ನು ಜನೋತ್ಸವವಾಗಿ ಆಚರಿಸೋಣ ಎಂದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ಜನಾಂಗಕ್ಕೆ ಪ್ರೇರಣೆಯಾಗಲೆಂಬ ಸದುದ್ದೇಶದಿಂದ ಉತ್ಸವ ಆಚರಿಸಲಾಗುತ್ತಿದೆ. ಪ್ರಾಧಿಕಾರ ರಚನೆಗೆ ಇನ್ನೊಮ್ಮೆ ಪ್ರಸ್ತಾವನೆ ನೀಡುವ ಪ್ರಸಂಗ ಬಂದರೆ ಪ್ರಸ್ತಾವನೆ ಸಲ್ಲಿಸಿ, ಪ್ರಯತ್ನಿಸಲಾಗುವುದು. ಉತ್ಸವಕ್ಕೆ ಜಾಗ ಖರೀದಿಗೆ ಪ್ರಯತ್ನ ನಡೆದಿದೆ ಸಹಕರಿಸಬೇಕು. ಗ್ರಾಮಸ್ಥರೊಂದಿಗೆ ಚರ್ಚಿಸಿ ಸಾಧಕರಿಗೆ, ಉನ್ನತ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಉತ್ಸವವನ್ನು ಹೆಚೆಚ್ಚು ಪ್ರಚಾರಪಡಿಸಿ, ಅದ್ಧೂರಿಯಾಗಿ ಆಚರಿಸೋಣ ಎಂದರು. ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮನಿ ಮಾತನಾಡಿ, ಪ್ರಾಧಿಕಾರಕ್ಕಾಗಿ ಮತ್ತು ಉತ್ಸವಕ್ಕೆ ಶಾಶ್ವತ ಜಾಗಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಬೇಕು. ಪಠ್ಯಪುಸ್ತಕಗಳಲ್ಲಿ ಮಲ್ಲಮ್ಮಳ ಇತಿಹಾಸ ಕುರಿತು ಅಳವಡಿಸಬೇಕು ಎಂದರು. ಗ್ರಾಮಸ್ಥರಾದ ಪ್ರಕಾಶ ಹುಂಬಿ ಮಾತನಾಡಿ, ಬಿಗ್ ಬಾಸ್ ಖ್ಯಾತಿಯ ಹಣಮಂತ ಲಮಾಣಿ ಅವರಿಗೆ ಉತ್ಸವದಲ್ಲಿ ಪ್ರಶಸ್ತಿ ನೀಡುಬೇಕು ಎಂದು ಕೋರಿದರು.
ರಾಚಪ್ಪ ಮಟ್ಟಿ, ಮಹಾರುದ್ರ ನೆಲ್ಲಿಗಣಿ, ವಿಠಲ ಪಿಸೆ ಮಾತನಾಡಿ, ಓಟದಲ್ಲಿ ಪ್ರಶಸ್ತಿ ಪಡೆದ 63 ವರ್ಷದ ಗ್ರಾಮಸ್ಥ ಬಸಪ್ಪ ಹುಂಬಿ ಅವರಿಗೆ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.ಬಿ.ಎಂ.ಚಿಕ್ಕನಗೌಡರ ಮಾತನಾಡಿ, ಗ್ರಾಮದ ಮೊಮ್ಮಗಳು ಧಾರವಾಡ ಶಿಕ್ಷಣ ಇಲಾಖೆಯ ಎಡಿಷನಲ್ ಕಮಿಷನರ್ ಜಯಶ್ರೀ ಅವರಿಗೆ ಮಲ್ಲಮ್ಮಳ ಪ್ರಶಸ್ತಿ ಘೋಷಿಸಬೇಕು ಎಂದರು.ಸವಿತಾ ಪಾಟೀಲ ಮಾತನಾಡಿ, ಮಲ್ಲಮ್ಮಳ ಕುರಿತು ಸಾಕ್ಷಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬೇಕು. ಇನ್ಫೋಸೆಸ್ ಮುಖ್ಯಸ್ಥೆ ಸುಧಾ ಮೂರ್ತಿ ಇಲ್ಲವೇ ಕೃಷಿ ತಜ್ಞೆ ಕವಿತಾ ಮಿಶ್ರಾ ಅವರಿಗೆ ಮಲ್ಲಮ್ಮಳ ಪ್ರಶಸ್ತಿ ನೀಡಬೇಕು ಎಂದರು.ಎಸ್ಪಿ ಭಿಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ ಶಿಂಧೆ, ಎಸಿ ಪ್ರಭಾವತಿ ಫಕೀರಪೂರ, ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಚಿಕ್ಕಪ್ಪ ನಾಯಕ, ತಾಪಂ ಇಒ ಕಿರಣ ಘೋರ್ಪಡೆ, ವಿದ್ಯಾವತಿ ಭಜಂತ್ರಿ, ಬಿ.ಜಿ.ದೇಗಾಂವಿ, ನಿಂಗಪ್ಪ ಕರೀಕಟ್ಟಿ, ಶಶಿಧರ ಪತ್ತಾರ, ಎಪಿಎಂಸಿ ಮಾಜಿ ಸದಸ್ಯ ಗದಗಯ್ಯ ರೊಟ್ಟಯ್ಯನವರ, ಅಮೀರ್ ಹಾದಿಮನಿ, ಜೈನೂಲಸಾಬ್ ಕಿತ್ತೂರ, ಪಿಡಿಒ ಗಂಗಪ್ಪ ಬರಗಿ, ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಉಪನ್ಯಾಸಕ ಮಹಾಂತೇಶ ಉಪ್ಪಿನ ನಿರೂಪಿಸಿದರು.ಸಭೆ ವಿಳಂಬಕ್ಕೆ ಧಿಕ್ಕಾರ ಕೂಗಿದ ಗ್ರಾಮಸ್ಥರುಸಭೆ 2 ಗಂಟೆ ತಡವಾಗಿ ಆರಂಭವಾಗಿದ್ದಕ್ಕೆ ಅಧಿಕಾರಿಗಳು ಈ ರೀತಿ ಅಸಡ್ಡೆ ಭಾವನೆ ತೋರಬಾರದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಭಕ್ತಾದಿಗಳಿಗೆ ನಾಡಿನ ಪ್ರಸಿದ್ದ ಕ್ಷೇತ್ರ ಯಲ್ಲಮ್ಮದೇವಿ ದರ್ಶನ 2 ಗಂಟೆಗಳಲ್ಲಿ ಸಿಗಬೇಕೆಂದು ಸೂಕ್ತ ಮಾರ್ಗ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಬೆಳವಡಿ ಸಭೆಗೆ ಬರಲು ತಡವಾಗಿದೆ ಕ್ಷಮಿಸಬೇಕು.-ಮೊಹಮ್ಮದ್ ರೋಶನ್, ಡಿಸಿ.