ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸುಸ್ಥಿರ ವಿದ್ಯುತ್ ಪೂರೈಕೆಯ ಮಹತ್ತರ ಉದ್ದೇಶದ ಪಿಎಂ-ಕುಸುಮ್ ಸಿ ಯೋಜನೆಯಡಿ ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ 2.69 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವರ್ಚುವೆಲ್ ಮೂಲಕ ಲೋಕಾರ್ಪಣೆ ಮಾಡಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದ ಪಿಎಂ-ಕುಸುಮ್ ಕಾಂಪೊನೆಟ್ ಸಿ ಯೋಜನೆ ಚಾಲನೆ ಸಮಾರಂಭದಲ್ಲಿ ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಹಾಗೂ ಇತರೆ ಜಿಲ್ಲೆಗಳ ಸೌರೀಕರಣ ಯೋಜನೆಯನ್ನು ಮುಖ್ಯಮಂತ್ರಿಗಳು ಬಟನ್ ಒತ್ತುವ ಮೂಲಕ ಉದ್ಘಾಟಿಸಿದರು. ಇಂಧನ ಸಚಿವ ಕೆ.ಜೆ. ಜಾರ್ಜ್, ಉನ್ನತ ಶಿಕ್ಷಣ ಸಚಿವ ಡಾ.ಎಂಸಿ. ಸುಧಾಕರ್ ಇನ್ನಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಮುಖ್ಯಮಂತ್ರಿಗಳು ಗೌರಿಬಿದನೂರಿನಲ್ಲಿ ಉದ್ಘಾಟನೆ ನೆರವೇರಿಸಿದ ಸಮಾರಂಭವನ್ನು ಹೊನ್ನಹಳ್ಳಿಯಲ್ಲಿ ವರ್ಚುವಲ್ ಮೂಲಕ ದೊಡ್ಡ ಎಲ್.ಇ.ಡಿ ಪರದೆ ಮೂಲಕ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಣೆ ಮಾಡಲಾಯಿತು. ಸ್ಥಳೀಯ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿ ಸಿದ್ದೇಗೌಡ ಅವರು ಭಾಗವಹಿಸಿ ಶುಭ ಹಾರೈಸಿದರು.ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದ ವೇಳೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿ ಸಿದ್ದೇಗೌಡ ಅವರು ಮಾತನಾಡಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ೩ ಮೆಗಾ ವ್ಯಾಟ್ ವರೆಗಿನ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದ್ದೇವೆ. ನಿಗಮದ ವತಿಯಿಂದ 950 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಈ ವರ್ಷ 500 ಮೆಗಾವ್ಯಾಟ್ ಉತ್ಪಾದನೆಗೆ ಅಗತ್ಯವಿರುವ ಜಮೀನನ್ನು ಈಗಾಗಲೇ ಹೊಂದಿದ್ದೇವೆ ಎಂದರು.
ಪ್ರಸ್ತುತ ಸೌರ ವಿದ್ಯುತ್ ಘಟಕದ ಚಾಲನೆಯಿಂದ 300 ರೈತರಿಗೆ ಅನುಕೂಲವಾಗಲಿದೆ. ರೈತರ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿ ಸಿದ್ದೇಗೌಡ ಅವರು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸೌರ ವಿದ್ಯುತ್ ಯೋಜನೆ ಆದ ಮೇಲೆ ರೈತರು ರಾತ್ರಿ ವೇಳೆ ಜಮೀನಿಗೆ ನೀರು ಹಾಯಿಸಲು ಹೋಗಬೇಕಾದ ಅಗತ್ಯವಿಲ್ಲ. ಹಗಲಿನಲ್ಲಿಯೇ ಸೌರ ವಿದ್ಯುತ್ ನೀಡಲಿದ್ದೇವೆ. 7 ಗಂಟೆ ಕಾಲ 3 ಫೇಸ್‌ನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಇದರಿಂದ ರಾತ್ರಿ ವೇಳೆ ಜಮೀನಿಗೆ ಹೋಗುವುದು ತಪ್ಪಲಿದೆ ಎಂದರು. ಇದಕ್ಕೂ ಮೊದಲು ಮುಖ್ಯಮಂತ್ರಿಯವರೊಂದಿಗೆ ನಡೆದ ಸಂವಾದ ವೇಳೆ ಯೋಜನೆ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಹೊನ್ನಹಳ್ಳಿ ಗ್ರಾಮದ ಮಹೇಶ್, ಸೋಲಾರ್ ವಿದ್ಯುತ್ ಘಟಕದಿಂದ ನಮಗೆ ಅನುಕೂಲವಾಗುತ್ತದೆ. ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿಯಿಂದ ಜಮೀನಿನಲ್ಲಿ ಪಂಪ್ ಸೆಟ್ ಚಾಲನೆ ಮಾಡಲು ಆಗುತ್ತಿರಲಿಲ್ಲ. ಈಗ ಹಗಲು ಹೊತ್ತು ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ನಮಗೆ ಪ್ರಯೋಜನವಾಗುತ್ತಿದೆ ಎಂದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು, ನಿಗಮದ ಮುಖ್ಯ ಎಂಜಿನಿಯರ್ ದಿವಾಕರ್, ಪ್ರಧಾನ ವ್ಯವಸ್ಥಾಪಕ ರಾಮಸ್ವಾಮಿ, ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಾ, ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ಪ್ರದೀಪ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೃಪದ್, ಇನ್ನಿತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))