ಹೊನ್ನಾಳಿ: ದುರ್ಗಮ್ಮ, ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ

| Published : Jan 31 2024, 02:19 AM IST

ಸಾರಾಂಶ

ಸೋಮವಾರ ಉಭಯ ದೇವಿಯವರಿಗೆ ಅಭಿಷೇಕ, ವಿಶೇಷ ಪೂಜೆ ಜರುಗಿದವು. ಮಂಗಳವಾರ ದೇವಿಗೆ ಹುಡಿಹಕ್ಕಿ, ಬೇವಿನ ಹರಕೆ ಮುಂತಾದ ಪೂಜೆ ಹರಕೆ ಸಲ್ಲಿಸಿದರು. ಯುವಕರು ತಮ್ಮ-ತಮ್ಮ ಕೇರಿ, ಓಣಿಗಳ ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಿ ಜಾತ್ರೆಯ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ನಗರದ ಗ್ರಾಮ ದೇವತೆಗಳಾದ ಶ್ರೀದುರ್ಗಮ್ಮ, ಮರಿಯಮ್ಮ ದೇವಿಯ ಜಾತ್ರೆ ಪ್ರತಿ ಬಾರಿಯೂ ಬನದ ಹುಣ್ಣಿಮೆ ನಂತರ ಬರುವ ಸೋಮವಾರ ಹಾಗೂ ಮಂಗಳವಾರ ದಿನಗಳಲ್ಲಿ ಆಚರಿಸಲಾಗುತ್ತದೆ. ಈ ಬಾರಿಯೂ ಅದೇ ಪದ್ಧತಿ ಮುಂದುವರಿಸಿ 2 ದಿನ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ದೇವಿಗೆ ಪೂಜೆ, ಹರಕೆ ಸಲ್ಲಿಸಿದರು.

ಸೋಮವಾರ ಉಭಯ ದೇವಿಯವರಿಗೆ ಅಭಿಷೇಕ, ವಿಶೇಷ ಪೂಜೆ ಜರುಗಿದವು. ಮಂಗಳವಾರ ದೇವಿಗೆ ಹುಡಿಹಕ್ಕಿ, ಬೇವಿನ ಹರಕೆ ಮುಂತಾದ ಪೂಜೆ ಹರಕೆ ಸಲ್ಲಿಸಿದರು. ಯುವಕರು ತಮ್ಮ-ತಮ್ಮ ಕೇರಿ, ಓಣಿಗಳ ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಿ ಜಾತ್ರೆಯ ಸಂಭ್ರಮಿಸಿದರು. ಶ್ರೀದುರ್ಗಮ್ಮ-ಮರಿಯಮ್ಮ ದೇವಿಯರ ಯುವಕ ಸಮಿತಿಯವರು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳು ಹಾಗೂ ಎಲ್ಲಾ ವಯೋಮಾನದವರಿಗೂ ವಿವಿಧ ಸ್ಪರ್ಧೆಗಳ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

3ದಿನ ಕುಸ್ತಿ ಪಂದ್ಯಗಳ ಆಯೋಜನೆ:

ಪಟ್ಟಣದ ಸರ್ವರ ಕೇರಿ ಶ್ರೀಆಂಜನೇಯ ಟ್ರಸ್ಟ್ ಸಮಿತಿ ವತಿಯಿಂದ ಶ್ರೀದುರ್ಗಮ್ಮ, ಮರಿಯಮ್ಮ ದೇವಿ ಜಾತ್ರೆ ಪ್ರಯುಕ್ತ ಖಾಸಗಿ ಬಸ್ ನಿಲ್ದಾಣದ ಬಳಿಯ ಕುರಿ ಸಂತೆ ಮೈದಾನದಲ್ಲಿ ಜ.31ರಿಂದ ಫೆ.2ರವರೆಗೆ ಮೂರು ದಿನ ಬಯಲು ಕಾಟ ಜಂಗೀ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಪೈಲ್ವಾನರು ಆಗಮಿಸಿ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ, ಬೆಳ್ಳಿಗಧೆ, ಹಣ ಸೇರಿ ವಿವಿಧ ವಸ್ತುಗಳ ರೂಪದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕುಸ್ತಿ ಸಮಿತಿಯವರು ತಿಳಿಸಿದ್ದಾರೆ.