ಸಾರಾಂಶ
- 10 ಮತಗಳ ಪಡೆದು ಸಾವಿತ್ರಮ್ಮ ವಿಜೇಂದ್ರಪ್ಪ ಉಪಾಧ್ಯಕ್ಷರಾಗಿ ಆಯ್ಕೆ । ಗಣ್ಯರಿಂದ ಅಭಿನಂದನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಪುರಸಭೆ ನೂತನ ಅಧ್ಯಕ್ಷರಾಗಿ ಎ.ಕೆ.ಮೈಲಪ್ಪ ಅವಿರೋಧ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ವಿಜೇಂದ್ರಪ್ಪ 10 ಮತಗಳಿಂದ ಶುಕ್ರವಾರ ನಡೆದ ಚುನಾವಣೆಯಲ್ಲಿ ಚುನಾಯಿತರಾಗಿದ್ದಾರೆ.ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಪರಿಶಿಷ್ಟ ಜಾತಿಯ ಎ.ಕೆ. ಮೈಲಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಪುರಸಭೆಯ 18 ಸದಸ್ಯರ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ ಒಬ್ಬರೇ ವ್ಯಕ್ತಿ ಕಾಂಗ್ರೆಸ್‌ನಲ್ಲಿ ಇದ್ದುದ್ದರಿಂದ ಅವರು ಅವಿರೋಧ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದ ಕಾಂಗ್ರೆಸ್ ಪಕ್ಷದ ಸಾವಿತ್ರಮ್ಮ ವಿಜೇಂದ್ರಪ್ಪ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿಯಿಂದ ರಂಜಿತಾ ಚನ್ನಪ್ಪ ವಡ್ಡಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಹೀಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅವರು ಉಪಾಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್‌ನ ಸಾವಿತ್ರಮ್ಮ ವಿಜೇಂದ್ರಪ್ಪ ಅವರಿಗೆ ಬೆಂಬಲ ಸೂಚಿಸುವವರು ಕೈ ಎತ್ತಿ ಎಂದು ಹೇಳಿದರು. ಆಗ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಡಿ.ಜಿ. ಶಾಂತನಗೌಡ ಹಾಗೂ ಉಳಿದ 8 ಪುರಸಭಾ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಅಲ್ಲಿಗೆ ಅವರಿಗೆ 10 ಮತಗಳು ಲಭಿಸಿ ಉಪಾಧ್ಯಕ್ಷರಾಗಿ ಚುನಾಯಿತರಾದರು.
ತಹಸೀಲ್ದಾರ್ ಪಟ್ಟರಾಜಗೌಡ, ಮುಖ್ಯಾಧಿಕಾರಿ ಟಿ.ಲೀಲಾವತಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಪುರಸಭೆ 18 ಸ್ಥಾನಗಳಲ್ಲಿ ಬಿಜೆಪಿ 10, ಕಾಂಗ್ರೆಸ್ 5, ಪಕ್ಷೇತರ 3 ಸದಸ್ಯರಿದ್ದಾರೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಪುರಸಭಾ ಸದಸ್ಯರಾದ ಧರ್ಮಪ್ಪ, ಹೊಸಕೇರಿ ಸುರೇಶ್, ಮೈಲಪ್ಪ, ತನ್ವೀರ್, ರಾಜೇಂದ್ರಕುಮಾರ್, ಎಂ. ಸುರೇಶ್, ಉಷಾ ಗಿರೀಶ್ ಹಾಗೂ ತಡವಾಗಿ ಆಗಮಿಸಿದ ಭಾವಿಮನೆ ರಾಜಣ್ಣ ಈ ಸಂದರ್ಭದಲ್ಲಿ ಇದ್ದರು.ಅಭಿನಂದನೆ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರ, ಎಚ್.ಬಿ. ಅಣ್ಣಪ್ಪ ಹಾಗೂ ದಲಿತ ಸಂಘಟನೆಗಳ ಮುಖಂಡರು, ಗಣ್ಯರು ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು.- - -
ಬಾಕ್ಸ್ * ಸ್ಪರ್ಧಿ ರಂಜಿತಾ ಚನ್ನಪ್ಪ ನಾಪತ್ತೆ ಬಿಜೆಪಿಯ ರಂಜಿತಾ ಚನ್ನಪ್ಪ ಅವರಿಗೆ ಮತ ನೀಡುವವರು ಕೈ ಎತ್ತಿ ಎಂದು ಹೇಳಿದರು. ಆಗ ಈ ವೇಳೆ ಸ್ವತಃ ಅಭ್ಯರ್ಥಿಯೇ ನಾಪತ್ತೆಯಾಗಿದ್ದು ವಿಶೇಷವಾಗಿತ್ತು. ಅವರ ಜೊತೆಗೆ ಬಿಜೆಪಿಯ ಯಾವ ಸದಸ್ಯರು ಮತ ನೀಡಲು ಅಥವಾ ಬೆಂಬಲ ಸೂಚಿಸಲು ಆಗಮಿಸದೇ ಇರುವುದು ಆಶ್ಚರ್ಯ ಮೂಡಿಸಿತ್ತು. ಚುನಾವಣಾಧಿಕಾರಿ ಅವರು ಕಾಂಗ್ರೆಸ್ ಸಾವಿತ್ರಮ್ಮ ವಿಜೇಂದ್ರಪ್ಪ 10 ಮತಗಳಿಂದಾಗಿ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಘೋಷಣೆ ಮಾಡಿದರು.- - - -8ಎಚ್.ಎಲ್.ಐ1:
ಹೊನ್ನಾಳಿ ಪುರಸಭೆ ನೂತನ ಅಧ್ಯಕ್ಷರಾಗಿ ಎ.ಕೆ.ಮೈಲಪ್ಪ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ವಿಜೇಂದ್ರಪ್ಪ ಆಯ್ಕೆಯಾದ ಹಿನ್ನೆಲೆ ಸಂಸದರು, ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಭಿನಂದಿಸಿದರು.