- ಇತಿಹಾಸದಲ್ಲೇ ಅತ್ಯಧಿಕ ಶೇ.94.5 ಸಾಲ ವಸೂಲಾತಿ । ರಾಘವೇಂದ್ರ ಕೃತಜ್ಞತೆ ಅರ್ಪಣೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ತನ್ನ ಇತಿಹಾಸದಲ್ಲಿಯೇ ಈ ಬಾರಿ ಅತ್ಯಧಿಕ ಅಂದರೆ ಶೇ.94.5 ರಷ್ಟು ಸಾಲ ವಸೂಲಾತಿ ಮಾಡಿದ್ದು, ₹75 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಹೇಳಿದರು.

ಸೋಮವಾರ ಇಲ್ಲಿನ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಸಂಸ್ಥೆ ₹44 ಲಕ್ಷ ನಿವ್ವಳ ಲಾಭ ಗಳಿಸಿತ್ತು. ಈ ಸಾಧನೆಗೆ ಬ್ಯಾಂಕ್ ನ ಆಡಳಿತ ಮಂಡಳಿ, ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಷೇರುದಾರರು ಕಾರಣರಾಗಿದ್ದು, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.


ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ಹೆಚ್ಚು ಲಾಭ ಗಳಿಸುತ್ತ ಮತ್ತು ಆ ಮೂಲಕ ರೈತರಿಗೆ ಅನುಕೂಲ ಆಗುವಂತೆ ಕಾರ್ಯೋನ್ಮುಖ ಆಗುವಂತೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ಬ್ಯಾಂಕ್ 1938ರಲ್ಲಿ ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನಲ್ಲಿ 6443 ಸದಸ್ಯರು ಇದ್ದಾರೆ. ಅವರೆಲ್ಲರೂ ಕಾಲಕಾಲಕ್ಕೆ ನೀಡುವ ಸಲಹೆ, ಸಹಕಾರದಿಂದ ಇನ್ನಷ್ಟು ಪ್ರಗತಿಯತ್ತ ಮುನ್ನಡೆಯಲಿದೆ ಎಂದರು.

ಸಂಘದ ಉಪಾಧ್ಯಕ್ಷ ಎಸ್. ಕುಬೇರ ನಾಯ್ಕ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ಓದಿ ದಾಖಲು ಮಾಡಿದರು. ವ್ಯವಸ್ಥಾಪಕರಾದ ಸಿ.ಎನ್. ವಿಶಾಲಾಕ್ಷಿ ಅವರು ಹಿಂದಿನ ಸಾಲಿನ ಮಹಾಸಭೆ ನಡವಳಿಕೆಗಳನ್ನು ಓದಿ ದಾಖಲು ಮಾಡಿದರು. 2025-26ನೇ ಸಾಲಿನ ಲೆಕ್ಕ ಪರಿಶೋಧನೆ ಮತ್ತು ಆರ್ಥಿಕ ತಃಖ್ತೆಗಳನ್ನು ಪರಿಶೀಲಿಸಿ ಅಂಗೀಕರಿಸಲಾಯಿತು. ನಿರ್ದೇಶಕ ಕೆ.ವಿ. ನಾಗರಾಜ್ 2025-26ನೇ ಸಾಲಿನ ಲೆಕ್ಕ ಪರಿಶೋಧಕರು ನಮೂದಿಸಿದ ನ್ಯೂನತೆಗಳಿಗೆ ಆಡಳಿತ ಮಂಡಳಿ ನೀಡಿದ ಅನುಪಾಲನಾ ವರದಿ ಅಂಗೀಕರಿಸುವ ವಿಷಯ ಪ್ರಸ್ತಾಪಿಸಿದರು.

ನಿರ್ದೇಶಕ ಜಿ.ಶಂಕರಪ್ಪ ಅವರು 2026-27ನೇ ಸಾಲಿಗೆ ಲೆಕ್ಕ ಪರಿಶೋಧಕರ ಆಯ್ಕೆ ವಿಷಯ ಪ್ರಸ್ತಾಪಿಸಿದರು. ನಿರ್ದೇಶಕ ಸಿ.ಎಚ್. ಸಿದ್ದಪ್ಪ ಅವರು ಅಂದಾಜು ಬಜೆಟ್‌ಗಿಂತ ಹೆಚ್ಚಿಗೆ ಖರ್ಚಾದ ಬಾಬ್ತುಗಳಿಗೆ ಮಂಜೂರಾತಿ ನೀಡುವಂತೆ ಕೋರಿದರು. ನಿರ್ದೇಶಕ ಎಚ್.ಡಿ. ಸುನೀಲ್ ಅವರು ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಗಳಿಸಿರುವ ನಿವ್ವಳ ಲಾಭಾಂಶದ ವಿಂಗಡಣೆ ಮಾಡುವ ವಿಷಯ ಪ್ರಸ್ತಾಪಿಸಿ ಸದಸ್ಯರಿಂದ ಒಪ್ಪಿಗೆ ಪಡೆದರು.

ನಿರ್ದೇಶಕ ಎಂ.ಜಿ.ಆರ್. ಮಂಜುನಾಥ್ ಮಾತನಾಡಿ, 1 ಸಾವಿರಕ್ಕಿಂತ ಕಡಿಮೆ ಷೇರು ಹೊಂದಿರುವ ಷೇರುದಾರರನ್ನು ಅನರ್ಹ ಷೇರುದಾರರೆಂದು ಪರಿಗಣಿಸಿ ಷೇರು ಮೊತ್ತವನ್ನು ಅಮಾನತು ಖಾತೆಗೆ ವರ್ಗಾವಣೆ ಮಾಡಲು ಮಂಜೂರಾತಿ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಅಧ್ಯಕ್ಷ ಅರಬಗಟ್ಟೆ ರಮೇಶ್ ಹಾಗೂ ವ್ಯವಸ್ಥಾಪಕಿ ಸಿ.ಎನ್. ವಿಶಾಲಾಕ್ಷಿ ಅವರು ಷೇರುದಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರು.

ಪಿಎಲ್‌ಡಿ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಅಧ್ಯಕ್ಷ ರಾಘವೇಂದ್ರ ಅವರು ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ನಿರ್ದೇಶಕರಾದ ರುದ್ರಮ್ಮ, ಅನಸೂಯಮ್ಮ, ಆಶಾ ಚಿಕ್ಕೆರೆಹಳ್ಳಿ, ಕ್ಷೇತ್ರಾಧಿಕಾರಿ ಕುಬೇರ ನಾಯ್ಕ, ಸಿಬ್ಬಂದಿ ಶೃತಿ, ಮಹೇಶ್ವರಪ್ಪ ಇತರರು ಉಪಸ್ಥಿತರಿದ್ದರು.

- - -

-10ಎಚ್.ಎಲ್.ಐ3:

ಹೊನ್ನಾಳಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ನಡೆದ ವಾರ್ಷಿಕ ಮಹಾಸಭೆಯನ್ನು ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಉದ್ಘಾಟಿಸಿದರು.