ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿ, ಎಲ್ಲೆಂದರಲ್ಲಿ ಕಸದ ರಾಶಿಗಳೇ ಬಿದ್ದಿವೆ. ಹಂದಿ- ನಾಯಿಗಳ ಹಾವಳಿ ಹೆಚ್ಚುತ್ತಿದೆ. ಪುರಸಭೆ ವ್ಯಾಪ್ತಿಯ ಹಲವಾರು ವಾರ್ಡುಗಳಲ್ಲಿ ಚರಂಡಿಗಳ ಸೌಲಭ್ಯವೇ ಇಲ್ಲದೆ, ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ನ್ಯಾಮತಿ ರಸ್ತೆಯ ಬೀದಿದೀಪಗಳು ಬೆಳಗುತ್ತಿಲ್ಲ, ಸಂತೆ ಮೈದಾನದಲ್ಲಿ ಮಹಿಳಾ ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಐದಾರು ವರ್ಷಗಳಿಂದ ಹೇಳುತ್ತಿದ್ದೀರಿ, ಇದುವರೆಗೂ ಶೌಚಾಲಯ ನಿರ್ಮಿಸಿಲ್ಲ...ಹೊನ್ನಾಳಿಯಲ್ಲಿ ಗುರುವಾರ ಪುರಸಭೆ ಅಧ್ಯಕ್ಷ ಮೈಲಪ್ಪ ಅಧ್ಯಕ್ಷತೆಯಲ್ಲಿ 2025- 2026ನೇ ಸಾಲಿನ ಆಯ-ವ್ಯಯ ಮಂಡನೆ ಹಿನ್ನೆಲೆ ಸಾರ್ವಜನಿಕರೊಂದಿಗೆ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಪುರಸಭಾ ಸದಸ್ಯರು, ಸಂಘಸಂಸ್ಥೆಗಳು, ಕನ್ನಡಪರ ಸಂಘಟನೆಗಳ ಮುಖಂಡರು ಮೂಲಸೌಕರ್ಯಗಳ ಕೊರತೆಗೆ ಆಕ್ರೋಶಗೊಂಡು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.
ಯುವಶಕ್ತಿ ಒಕ್ಕೂಟದ ಮುಖಂಡ ನಾಗರಾಜ್ ಕತ್ತಿಗೆ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಈವರೆವಿಗೂ ಯಾವುದೇ ತರಬೇತಿ ನೀಡುತ್ತಿಲ್ಲ. ಇನ್ನಾದರೂ ಕಂಪ್ಯೂಟರ್ ತರಬೇತಿ ನೀಡಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವು ನೀಡಬೇಕು. ಸಂಘ ಸಂಸ್ಥೆಗಳಿಗೆ ನೀಡುವ ಪ್ರೋತ್ಸಾಹಧನ ಮೊತ್ತ ಹೆಚ್ಚಳಗೊಳಿಸಬೇಕು ಎಂದು ಮನವಿ ಮಾಡಿದರು.ರಾಜು ಕಡಗಣ್ಣಾರ್ ಮಾತನಾಡಿ, ಪ್ರತಿವರ್ಷ ಆಯ-ವ್ಯಯ ಮಂಡನೆ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಎಷ್ಟು ಸ್ವೀಕರಿಸಿದ್ದೀರಿ, ಅದರಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದೀರಿ? ಪದೇಪದೇ ಸಭೆ ಮಾಡಿ ಪುಕ್ಕಟೆ ಸಲಹೆ ಪಡೆಯುತ್ತಿರಿ. ಈವರೆವಿಗೂ ನಗರದಲ್ಲಿ ಸಾರ್ವಜನಿಕರಿಂದ ಪಡೆದ ಸಲಹೆಗಳಿಂದ ಏನು ಅಭಿವೃದ್ಧಿ ಮಾಡಿದ್ದಿರಿ ಅನ್ನೋದು ಮೊದಲು ಸಭೆಗೆ ತಿಳಿಸಿ ಎಂದರು.
ಮಾಜಿ ಪುರಸಭಾ ಸದಸ್ಯ ವಿಜೇಂದ್ರಪ್ಪ ಮಾತನಾಡಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತ ಸಲಹೆಗಳನ್ನು ಸ್ವೀಕರಿಸಿ, ಕಾಮಗಾರಿ ಕೈಗೊಂಡರೆ ಮಾತ್ರ ನಿಮ್ಮನ್ನು ಜನ ನಂಬುತ್ತಾರೆ ಎಂದರೆ, ಪುರಸಭಾ ಸದಸ್ಯ ರಾಜಪ್ಪ ಮಾತನಾಡಿ, ಇಡೀ ಪಟ್ಟಣದಲ್ಲಿ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.ಮುಖ್ಯಾಧಿಕಾರಿ ಲೀಲಾವತಿ ದೂರು ಹಾಗೂ ಸಲಹೆಗಳ ಸ್ವೀಕರಿಸಿ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಆದರೆ ಟ್ರ್ಯಾಕ್ಟರ್ ಇಲ್ಲ. ಇನ್ನೂ 15 ದಿನಗಳಲ್ಲಿ ಟ್ರ್ಯಾಕ್ಟರ್ ಬರಲಿದೆ. ಪೌರ ಕಾರ್ಮಿಕರ ಸಂಖ್ಯೆ ಕೂಡ ಕಡಿಮೆ ಇದ್ದು, ಶೀಘ್ರವೇ ನೇಮಕ ಮಾಡಿಕೊಳ್ಳಲಿದ್ದೇವೆ. ತದನಂತರ ಪಟ್ಟಣ ಸಂಪೂರ್ಣ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತೇವೆ. ರಸ್ತೆಗಳ ಕಾಮಗಾರಿಗೆ ಶಾಸಕ ಡಿ.ಜಿ.ಶಾಂತನಗೌಡ ಅವರು ₹20 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆ ಬಳಿಕ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದರು.
ಪಟ್ಟಣದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳು ಬಾಡಿಗೆ ಮನೆಗಳಲ್ಲಿ ನಡೆಯುತ್ತಿದೆ. ಈಗಾಗಲೆ ಒಂದು ಅಂಗನವಾಡಿ ಕಟ್ಟಡ ಸಿಎ ನಿವೇಶನದಲ್ಲಿ ಕಾಮಗಾರಿ ಆರಂಭಿಸಲು ಸ್ಥಳ ಪರಿಶೀಲನೆ ಮಾಡಿದ್ದೇವೆ. ಅಗಳ ಮೈದಾನದಲ್ಲಿ ಬೃಹತ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಶಾಸಕರು ಸರ್ಕಾರದಿಂದ ತರಲಿದ್ದಾರೆ ಎಂದು ಮುಖ್ಯಾಧಿಕಾರಿ ಹೇಳಿದರು.ಆಗ ಕರವೇ ಪ್ರಮುಖರು ಮಾತನಾಡಿ, ಈ ಹಿಂದೆ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ದೊಡ್ಡ ಸಮುದಾಯ ಭವನ ನಿರ್ಮಾಣಕ್ಕೆ ನಿರ್ಧಾರ ತೆಗೆದುಕೊಂಡಿದ್ದಿರಿ. ಈಗ ಕಾಂಪ್ಲೆಕ್ಸ್ ನಿರ್ಮಾಣ ಅನ್ನುತ್ತಿದ್ದರಲ್ಲ ಎಂದರು. ಆಗ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಕಟ್ಟಡದ ಕೆಳಮಹಡಿಯಲ್ಲಿ ಕಾಂಪ್ಲೆಕ್ಸ್ ನಿರ್ಮಿಸಿ, ಮೇಲಂತಸ್ತಿನಲ್ಲಿ ರಂಗ ಸಮುದಾಯ ನಿರ್ಮಾಣ ಮಾಡಲಿದ್ದಾರೆ ಎಂದರು.
ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಪುರಸಭಾ ಸದಸ್ಯ ರಾಜೇಂದ್ರ, ಎಂಜಿನಿಯರ್ ದೇವರಾಜ್ ಉಪಸ್ಥಿತರಿದ್ದರು. ರಂಜಿತಾ, ವಕೀಲ ಚಂದ್ರಪ್ಪ ಮಡಿವಾಳ, ಕರವೇ ಮುಖಂಡರಾದ ಮಂಜುನಾಥ್, ಹರೀಶ್, ಕೋಳಿ ಅಂಗಡಿ ಮಾಲೀಕರ ಸಂಘದ ಅಂಜು ನಾಯ್ಕ್ ಹಾಗೂ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.